ಹೆಬ್ರಿ ಭೋಜ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಶಂಕಿತ ನಕ್ಸಲೀಯರು ದೋಷಮುಕ್ತ

Update: 2019-10-30 15:09 GMT

ಉಡುಪಿ, ಅ.30: ಹನ್ನೊಂದು ವರ್ಷಗಳ ಹಿಂದೆ ನಕ್ಸಲರಿಂದ ಹತ್ಯೆಗೀಡಾದ ಹೆಬ್ರಿ ಭೋಜ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

ತಮಿಳುನಾಡಿನ ಕೊಯಮುತ್ತೂರು ಜೈಲಿನಲ್ಲಿರುವ ಈಶ್ವರ ಯಾನೆ ವೀರ ಮಣಿ, ಬೆಂಗಳೂರು ಪರಪ್ಪರನ ಅಗ್ರಹಾರ ಜೈಲಿನಲ್ಲಿರುವ ರಮೇಶ್, ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನೀಲಗುಳಿ ಪದ್ಮನಾಭ ಮತ್ತು ಪಾವಗಡದ ಸಂಜೀವ ಕುಮಾರ್ ಖುಲಾಸೆಗೊಂಡ ಆರೋಪಿಗಳು.

ನಕ್ಸಲ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ ಹೆಬ್ರಿ ಸೀತಾನದಿಯ ಶಿಕ್ಷಕರಾಗಿದ್ದ ಭೋಜ ಶೆಟ್ಟಿಯನ್ನು 2008ರ ಮೇ 15ರಂದು ನಕ್ಸಲರ ತಂಡ ಗಂಡು ಹಾರಿಸಿ ಕೊಲೆ ಮಾಡಿತ್ತು. ಈ ಸಂದರ್ಭದಲ್ಲಿ ಭೋಜ ಶೆಟ್ಟಿ ಜೊತೆ ಇದ್ದ ನೆರೆಮನೆಯ ಸುರೇಶ್ ಶೆಟ್ಟಿ ಕೂಡ ಈ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಹೆಬ್ರಿ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಗಳಾದ ಮನೋಹರ್, ಸಂಜೀವ ಕುಮಾರ್, ವಸಂತ, ದೇವೇಂದ್ರ, ಬಿ.ಜೆ.ಕೃಷ್ಣಮೂರ್ತಿ, ನಂದಕುಮಾರ್, ನೀಲಗುಳಿ ಪದ್ಮನಾಭ, ಚಂದ್ರಶೇಖರ್ ಗೋರ್‌ಬಾಲ್, ರಮೇಶ್, ಈಶ್ವರ ಯಾನೆ ವೀರ ಮಣಿ ಹಾಗೂ ಆಶಾ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿಗಳ ಪೈಕಿ ಮನೋಹರ್ ಕಳಸದಲ್ಲಿ, ವಸಂತ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಬಿ.ಜೆ. ಕೃಷ್ಣಮೂರ್ತಿ ತಲೆಮರೆಸಿಕೊಂಡಿದ್ದು, ಈವರೆಗೆ ಬಂಧನವಾಗಿಲ್ಲ. ದೇವೇಂದ್ರ, ನಂದಕುಮಾರ್, ಚಂದ್ರಶೇಖರ್, ಆಶಾ ಈಗಾಗಲೇ ಖುಲಾಸೆಗೊಂಡಿದ್ದಾರೆ. ನೀಲಗುಳಿ ಪದ್ಮನಾಭ, ರಮೇಶ್, ವೀರಮಣಿ, ಸಂಜೀವ ಕುಮಾರ್ ವಿರುದ್ಧ ವಿಚಾರಣೆ ಉಡುಪಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಇಂದು ಆದೇಶ ನೀಡಿದರು.

ಆರೋಪಿಗಳಾದ ನೀಲಗುಳಿ ಪದ್ಮನಾಭ, ರಮೇಶ್, ವೀರಮಣಿ ಪರವಾಗಿ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಹಾಗೂ ಸಂಜೀವ ಕುಮಾರ್ ಪರ ನ್ಯಾಯವಾದಿ ಅಖಿಲ್ ಹೆಗ್ಡೆ ವಾದಿಸಿದ್ದರು.

ನೀಲಗುಳಿ ಪದ್ಮನಾಭ ವಿರುದ್ಧ ಮತ್ತೆ ಎರಡು ಪ್ರಕರಣಗಳು ಉಡುಪಿ, ನಾಲ್ಕು ಪ್ರಕರಣಗಳು ಕುಂದಾಪುರ, ಒಂಭತ್ತು ಪ್ರಕರಣಗಳು ಚಿಕ್ಕಮಗಳೂರು, ಒಂದು ಪ್ರಕರಣ ಕೊಪ್ಪ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ರಮೇಶ್ ವಿರುದ್ಧ ಭೋಜ ಶೆಟ್ಟಿ ಕೊಲೆ ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಶೃಂಗೇರಿಯಲ್ಲಿ 8 ಮತ್ತು ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನಲ್ಲಿ ತಲಾ ಒಂದು ಪ್ರಕರಣಗಳಿವೆ. ವೀರಮಣಿ ವಿರುದ್ಧ ಕೇರಳದಲ್ಲಿ ನಾಲ್ಕು, ತಮಿಳುನಾಡಿನಲ್ಲಿ ಐದು ಮತ್ತು ಕರ್ನಾಟಕದಲ್ಲಿ ಭೋಜ ಶೆಟ್ಟಿ ಕೊಲೆ ಪ್ರಕರಣ ದಾಖಲಾಗಿದೆ.

ನೀಲಗುಳಿ ಮತ್ತೆರಡು ಕೇಸುಗಳಲ್ಲೂ ಬಿಡುಗಡೆ
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತೆ ಎರಡು ಪ್ರಕರಣಗಳಲ್ಲೂ ನೀಲಗುಳಿ ಪದ್ಮನಾಭ ಅವರನ್ನು ದೋಷಮುಕ್ತಗೊಳಿಸಿ ಇಂದು ಆದೇಶ ನೀಡಿದೆ.

2006ರ ಫೆ.27ರಂದು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಾರು ಗ್ರಾಮದ ಮುಟ್ಲುಪಾಡಿ ಹಪ್ಪನಡ್ಕ ಎಂಬಲ್ಲಿ ಸದಾನಂದ ಶೆಟ್ಟಿ ಯಾನೆ ಕುಟ್ಟಿ ಶೆಟ್ಟಿ ಎಂಬವರ ಮನೆಗೆ ಬಂದ 12 ಮಂದಿ ಬಂದೂಕುಧಾರಿಗಳು ಅಕ್ರಮ ಕೂಟ ಸೇರಿಕೊಂಡು ಗೋಡೆಗೆ ನಕ್ಸಲ್ ಬರಹವುಳ್ಳ ಭಿತ್ತಿ ಪತ್ರಗಳನ್ನು ಅಂಟಿಸಿ ಜೀವ ಬೆದರಿಕೆಯೊಡ್ಡಿದ್ದರು. ಬಳಿಕ ಅಕ್ರಮ ಬಂಧನಕ್ಕೆ ಒಳಪಡಿಸಿ ಕುಟ್ಟಿ ಶೆಟ್ಟಿ ಯನ್ನು ಮುಟ್ಲುಪಾಡಿಗೆ ಕರೆದೊಯ್ದು ಅವರ ಬೈಕಿಗೆ ಬೆಂಕಿ ಕೊಟ್ಟು ಬೆದರಿಕೆ ಹಾಕಿದ್ದರು. ಅಲ್ಲದೆ ಮುಟ್ಲುಪಾಡಿಯಲ್ಲಿ ಸಾರ್ವಜನಿಕರ ಮುಂದೆ ಕ್ಷಮೆಯಾಚಿಸುವಂತೆ ಮಾಡಿ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದರು ಎಂದು ದೂರಲಾಗಿತ್ತು.

ಅದೇ ರೀತಿ 2006ರ ಮೇ 13ರಂದು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಸೀತಾನದಿ ಬಾಳೆಬ್ಬಿ ಎಂಬಲ್ಲಿ ಭೋಜ ಶೆಟ್ಟಿ ಎಂಬವರ ಮನೆಗೆ ಅಕ್ರಮ ಪ್ರವೇಶಿಸಿದ ನಕ್ಸಲೀಯರು ಭೋಜ ಶೆಟ್ಟಿಗೆ ಜೀವ ಬೆದರಿಕೆ ಹಾಕಿ, ಬಂದೂಕುಗಳಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವುದಲ್ಲದೆ ಅವಹೇಳನಕಾರಿ ಕರಪತ್ರವನ್ನು ಮನೆಯೊಳಗೆ ಬಿಸಾಡಿ ಕಾಡಿನೊಳಗೆ ಓಡಿ ಪರಾರಿಯಾಗಿದ್ದರು ಎಂದು ದೂರಲಾಗಿತ್ತು.

ಈ ಎರಡೂ ಪ್ರಕರಣಗಳಲ್ಲೂ ನೀಲಗುಳಿ ಪದ್ಮನಾಭ ಆರೋಪಿಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿ ಪರವಾಗಿ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News