ಕೋರ್ಟ್ ಆದೇಶಗಳ ಅನುಪಾಲನೆಗೆ ನೋಡಲ್ ಅಧಿಕಾರಿ ನೇಮಿಸಿ: ಹೈಕೋರ್ಟ್ ಆದೇಶ

Update: 2019-10-30 18:21 GMT

ಬೆಂಗಳೂರು, ಅ.30: ರಾಜ್ಯ ಸರಕಾರ ಪ್ರತಿವಾದಿಯಾಗಿರುವ ಪ್ರಕರಣಗಳಲ್ಲಿ ಪ್ರತಿಕ್ರಿಯೆ ನೀಡಲು ಹಾಗೂ ಕೋರ್ಟ್ ಆದೇಶಗಳ ಅನುಪಾಲನೆಯ ವಿಚಾರದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ.

ಅರ್ಜಿ ವಿಚಾರಣೆ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಸರಕಾರದ ಪರ ವಕೀಲರು, ಈ ಪ್ರಕರಣದಲ್ಲಿ ಪಶುಸಂಗೋಪನಾ ಇಲಾಖೆಯನ್ನು ಪಕ್ಷಗಾರವನ್ನಾಗಿ ಮಾಡಬೇಕಿದೆ. ಈ ಸಂಬಂಧ ಅರ್ಜಿದಾರರಿಗೆ ಸೂಚನೆ ನೀಡಬೇಕು. ಅರಣ್ಯ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡಿ ಪಕ್ಷಗಾರ ಅಲ್ಲ. ಪಶುಸಂಗೋಪನಾ ಇಲಾಖೆಯಿಂದ ಆಕ್ಷೇಪಣೆ ಅಥವಾ ನ್ಯಾಯಾಲಯ ಆದೇಶ ಪಾಲನೆ ಆಪೇಕ್ಷಿಸುವುದು ಸರಿಯಲ್ಲ. ಸರಕಾರವಾಗಿ ಪಶುಸಂಗೋಪನಾ ಇಲಾಖೆಯ ನಿಲುವು ಹೇಳಬಹುದು. ಆದರೆ, ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮದ ಮಾಹಿತಿ ಪಶುಸಂಗೋಪನಾ ಇಲಾಖೆಗೆ ಇರುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಯಾವ ಇಲಾಖೆ ಪ್ರತಿಕ್ರಿಯೆ ನೀಡಬೇಕೆಂದು ಸರಕಾರ ನಿರ್ಧರಿಸಬೇಕು. ಆಯಾ ಇಲಾಖೆಗಳು ಪ್ರತಿವಾದಿಗಳಾಗಿದ್ದರೂ ಸರಕಾರವೇ ಜವಾಬ್ದಾರಿ ಹೊರಬೇಕು. ಸರಕಾರ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರ ಪ್ರತಿವಾದಿಯಾಗಿರುವ ಪ್ರಕರಣಗಳಲ್ಲಿ ಪ್ರತಿಕ್ರಿಯೆ ನೀಡಲು ಮತ್ತು ಕೋರ್ಟ್ ಆದೇಶಗಳ ಪಾಲನೆ ವಿಚಾರದಲ್ಲಿ ಉಂಟಾಗುತ್ತಿರುವ ತಾಂತ್ರಿಕ ಗೊಂದಲಗಳನ್ನು ಬಗೆಹರಿಸಲು ಮತ್ತು ಈ ವಿಚಾರದಲ್ಲಿ ಸರಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿತು.

ಅಲ್ಲದೇ ಈ ಆದೇಶದ ಪ್ರತಿಯನ್ನು ಸರಕಾರಿ ವಕೀಲರು ಮುಖ್ಯಕಾರ್ಯದರ್ಶಿಗೆ ತಲುಪಿಸಬೇಕು. ಅದರಂತೆ ಮುಖ್ಯ ಕಾರ್ಯದರ್ಶಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News