ಸರಕಾರಿ ಸವಲತ್ತಿಗಾಗಿ ಕಿತ್ತಾಡುವ ಸಮುದಾಯಗಳ ನಡುವೆ ಬಂಜಾರ ಸಮಾಜ ಮಾದರಿ: ಎನ್.ಸಂತೋಷ್ ಹೆಗ್ಡೆ

Update: 2019-10-31 13:03 GMT

ಬೆಂಗಳೂರು, ಅ.31: ಮಾತೆತ್ತಿದರೆ ಮೀಸಲಾತಿ, ಸರಕಾರಿ ಸವಲತ್ತುಗಳಿಗಾಗಿ ಕಿತ್ತಾಡುವ ಜನ ಸಮುದಾಯಗಳ ನಡುವೆ ಬಂಜಾರ ಸಮುದಾಯ, ತಾವು ಹಿಂದುಳಿದವರಲ್ಲ, ಸಾಂಸ್ಕೃತಿಕವಾಗಿ ಶ್ರೀಮಂತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಹೇಳಿದರು. 

ಪ್ರೆಸ್‌ಕ್ಲಬ್ ನಲ್ಲಿ ಶಿವಪುತಾಳ ಪ್ರಕಾಶನ ಹಮ್ಮಿಕೊಂಡಿದ್ದ ಸಂತೋಷ ಶಿವಲಾಲ ರಾಠೋಡ ಅವರ ‘ಬಂಜಾರ ಚರಿತಾಮೃತ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೀಸಲಾತಿ, ಸರಕಾರಿ ಸವಲತ್ತುಗಳಿಗಾಗಿ ಕಿತ್ತಾಡುವ ಜನ ಸಮುದಾಯಗಳ ನಡುವೆ ಬಂಜಾರ ಸಮುದಾಯ, ತಾವು ಹಿಂದುಳಿದವರಲ್ಲ, ಸಾಂಸ್ಕೃತಿಕವಾಗಿ ಶ್ರೀಮಂತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಶ್ಲಾಘನೀಯ. ಇತರೆ ಜಾತಿಗಳಿಗೆ ಬಂಜಾರ ಸಮಾಜ ಮಾದರಿಯಾಗಿದೆ ಎಂದು ಹೊಗಳಿದರು.

ಬಂಜಾರ ಸಮುದಾಯದ ಬಗ್ಗೆ ಕೆಲವು ತಪ್ಪು ತಿಳುವಳಿಕೆಗಳು ಈಗಲೂ ಜನರಲ್ಲಿ ಇವೆ. ಆದರೆ ಬಂಜಾರ ಸಮುದಾಯ ಹಿಂದುಳಿದ ಸಮಾಜ ಅಲ್ಲ ಎಂಬ ನಿಟ್ಟಿನಲ್ಲಿ ಕೃತಿಕಾರರು ವಿವರವಾಗಿ ತಿಳಿಸಿದ್ದಾರೆ ಎಂದ ಅವರು, ಇಂದು ದುರಾಸೆ ಹೆಚ್ಚಾಗುತ್ತಿದ್ದು ಎಲ್ಲ ಸಮುದಾಯ ಲಾಭ ಪಡೆಯಲು ಮುಗಿಬೀಳುತ್ತಿದ್ದಾರೆ. ಸಮಾಜ ಸಾಕಷ್ಟು ಬದಲಾವಣೆ ಹೊಂದಿದೆ. ಶ್ರೀಮಂತಿಕೆಯನ್ನು ಮಾತ್ರ ಗುರುತಿಸುತ್ತಿದೆ. ಅದು ಸರಿಯಲ್ಲ ಎಂದು ವಿಷಾದಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್, ಬರಹಗಾರರಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಗ್ರಂಥಾಲಯ ಇಲಾಖೆ ಸುಧಾರಣೆ ಆಗಬೇಕು. ಮೊದಲೆಲ್ಲಾ ಕನ್ನಡ ಪುಸ್ತಕಗಳು ಬಿಡುಗಡೆಯಾದರೆ ಅದರ ಪ್ರತಿಗಳು ಒಂದೊಂದು ಗ್ರಂಥಾಲಯದಲ್ಲಿ ಮುನ್ನೂರಕ್ಕೂ ಹೆಚ್ಚು ಪ್ರತಿ ಇರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯದಲ್ಲಿ ಸಿಗುವಂತೆ ಮಾಡಲು ಸರಕಾರ ವಿಫಲವಾಗಿದೆ. ಕೋಟ್ಯಂತರ ಹಣ ಇದ್ದರೂ ಗ್ರಂಥಾಲಯದವರು ಕನ್ನಡ ಪುಸ್ತಕ ಕೊಳ್ಳುತ್ತಿಲ್ಲ. ಇದರ ಹೊಣೆ ಸರಕಾರ ಹೊರಬೇಕಿದೆ ಎಂದರು.

ಸಮಾಜದಲ್ಲಿ ಹಿಂದೆ ಉಳಿದವರು ಎಂಬ ತಾರತಮ್ಯ ಸರಿಯಲ್ಲ. ಮನುಷ್ಯ ಮನುಷ್ಯರ ನಡುವೆ ಈ ರೀತಿಯ ಕಲ್ಪನೆಯೇ ತಪ್ಪು. ಅಂತಹ ಜಾತೀಯತೆಯನ್ನು ‘ಬಂಜಾರ ಚರಿತಾಮೃತ’ ಕೃತಿ ಮೂಲಕ ಲೇಖಕರು ಹೋಗಲಾಡಿಸುವಲ್ಲಿ ಮುಂದಾಗಿದ್ದಾರೆ. ಒಂದು ಪ್ರಶ್ನೆಯನ್ನು ಬೆನ್ನತ್ತಿ ಹೋದಾಗ ಸರಿ ಉತ್ತರ ಸಿಗಲು ಸಾಧ್ಯ. ಅದೇ ರೀತಿ ತಾರತಮ್ಯ, ಜಾತಿ ಹುಟ್ಟಿದ ಜಿಜ್ಞಾಸೆಯ ಬೆನ್ನು ಹತ್ತಿದ್ದರಿಂದ ಇಂತಹ ಪುಸ್ತಕ ಹೊರತರಲು ಸಾಧ್ಯವಾಗಿದೆ ಎಂದರು. ರಾಜ್ಯ ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದಗೌಡ, ಆರ್. ಮಾದೇಶ, ನಂಜುಂಡಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News