ಸಾರ್ವಜನಿಕರ ನೂರೆಂಟು ಸಮಸ್ಯೆಗಳಿಗೆ ಇನ್ನು '112' ಪರಿಹಾರ !

Update: 2019-10-31 16:15 GMT

ಬೆಂಗಳೂರು, ಅ. 31: ಇನ್ನು ಮುಂದೆ ಸಾರ್ವಜನಿಕರ ನೂರೆಂಟು ಸಮಸ್ಯೆಗಳಿಗೆ '112' ಪರಿಹಾರ ! ಹೌದು. ಕಳ್ಳತನ ಪ್ರಕರಣಗಳಾಲಿ, ದರೋಡೆ ಡಕಾಯಿತಿಗಳಾಗಲೀ ಆದಾಗ, ಅಕ್ಕ-ಪಕ್ಕದ ಮನೆಯವರ ಜೊತೆಗೆ ಜಗಳಗಳಾದಾಗ, ಸಾರ್ವಜನಿಕ ಸ್ಥಳಗಳಲ್ಲಿ ರೌಡಿಗಳ ಹೊಡೆದಾಟ ನಡೆದಾಗ, ಎಲ್ಲಾದರೂ ಆತ್ಮಹತ್ಯೆ ಅಥವಾ ಕೊಲೆ ಪ್ರಕರಣಗಳು ಘಟಿಸಿದಾಗ 100 ಸಂಖ್ಯೆಗೆ ದೂರವಾಣಿ ಕರೆ ಮಾಡುವಂತಿಲ್ಲ ! ಅದೇ ರೀತಿ, ಅಗ್ನಿ ಅವಘಡಗಳು ಸಂಭವಿಸಿದಾಗ 101 ಸಂಖ್ಯೆಗೆ ಕರೆ ಮಾಡುವುದೂ ಬೇಡ! ಅಂತೆಯೇ, ಅಪಘಾತಗಳಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ಸಂಖ್ಯೆಗೆ ಡಯಲ್ ಮಾಡುವ ಅವಶ್ಯಕತೆಯೂ ಇಲ್ಲ. ಇವೆಲ್ಲದಕ್ಕೂ ಒಂದೇ ಪರಿಹಾರ ದೂರವಾಣಿ ಸಂಖ್ಯೆ: 112.

ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯ 'ಡಯಲ್ 112' ಚಾಲನೆ ನೀಡಿ, ವೆಬ್ ಪೋರ್ಟಲ್ ka.ners.in ಲೋಕಾರ್ಪಣೆ ಮಾಡಿ ಹಾಗೂ ಬಳಕೆದಾರರ ಕೈಪಿಡಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, "ಇಂದಿನಿಂದ ದೂರವಾಣಿ ಸಂಖ್ಯೆ: 100, 101 ಹಾಗೂ 108 ಸಂಖ್ಯೆಗಳನ್ನು ವಿಲೀನಗೊಳಿಸಿ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯ ಹೆಸರಿನಲ್ಲಿ ಹೊಸ ದೂರವಾಣಿ ಸಂಖ್ಯೆ 112 ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರಾದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕ ಕಾಲಕ್ಕೆ ಜಾರಿಗೆ ಬಂದಿರುವ ಈ ಕೇಂದ್ರೀಕೃತ ವ್ಯವಸ್ಥೆಯಲ್ಲಿ 112 ಸಂಖ್ಯೆಗೆ ಡಯಲ್ ಮಾಡಿದಾಗ ಕರೆ ಮಾಡಿದ ವ್ಯಕ್ತಿ ಯಾವುದೇ ಸ್ಥಳ ಅಥವಾ ಪ್ರದೇಶದಲ್ಲಿದ್ದರೂ ಅದನ್ನು ಗುರುತಿಸಿ ದೂರುದಾರರು ಅಥವಾ ವಿನಂತಿದಾರರ ಮನವಿಗೆ ತುರ್ತು ಸ್ಪಂದನೆ ಲಭಿಸಲಿದೆ. ಕರೆದಾರರು ಅಥವಾ ವಿನಂತಿದಾರರಿಗೆ ಪ್ರತಿಕ್ರಿಯೆದಾರರು ಅತಿ ಕ್ಷಿಪ್ರವಾಗಿ ಆ ಪ್ರದೇಶಕ್ಕೆ ಸಮೀಪದಲ್ಲಿ ಲಭ್ಯವಿರುವ ಪೊಲೀಸರ ನೆರವು, ಅಗ್ನಿ ಶಾಮಕರ ಸಹಾಯ ಅಥವಾ ಆಂಬುಲೆನ್ಸ್ ನ ಸೇವೆ ದೊರಕಿಸಿಕೊಡಲಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ 13.7 ಕೋಟಿ ರೂ. ಮೊತ್ತದ ಈ ಯೋಜನೆಗೆ ಕೇಂದ್ರ ಸರ್ಕಾರವು 10 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. ಸಂಕಷ್ಟಕ್ಕೆ ಸಿಲುಕಿದವರು ದಿನದ 24 ಗಂಟೆಗಳೂ ಹಾಗೂ ವರ್ಷದ 365 ದಿನಗಳೂ ಯಾವುದೇ ಸಮಯದಲ್ಲಿ ಧ್ವನಿ, ಎಸ್.ಎಂ.ಎಸ್, ಇ-ಮೇಲ್ ಹಾಗೂ ಪೋರ್ಟಲ್ ಮಾತ್ರವಲ್ಲದೆ, 112 ಇಂಡಿಯಾ ಆಪ್ ಅಥವಾ ಮೊಬೈಲ್‍ನ ಪವರ್ ಬಟನ್ ಮೂರು ಬಾರಿ ಒತ್ತಿ ಪ್ಯಾನಿಕ್ ಆಪ್ ಮೂಲಕವೂ ಸಹಾಯಕ್ಕೆ ಮೊರೆ ಹೋಗಬಹುದಾಗಿದೆ ಎಂದು ವಿವರಿಸಿದರು.

ಬಳಿಕ, 183 ತುರ್ತು ಸ್ಪಂದನಾ ವಾಹನಗಳನ್ನು ರಾಜ್ಯಕ್ಕೆ ಸಮರ್ಪಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು 'ವಾಹನಗಳ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ 100 ವಾಹನಗಳನ್ನು ಒದಗಿಸಲು ಮುಂದಿನ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಈ ವ್ಯವಸ್ಥೆ ದುರುಪಯೋಗವಾಗದಂತೆ ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಕಿವಿಮಾತು ಹೇಳಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ಹಾಗೂ ಮಹಾ ನಿರೀಕ್ಷಕರೂ ಆದ ನೀಲಮಣಿ ಎನ್.ರಾಜು ಮಾತನಾಡಿ, 'ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗುವ ಈ ಯೋಜನೆ ಅಪರಾಧಗಳ ವಿಶ್ಲೇಷಣೆ ಹಾಗೂ ಪೊಲೀಸರ ಸ್ಪಂದನಾ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಲೂ ಕೂಡಾ ಅತ್ಯಂತ ಅನುಕೂಲವಾಗಲಿದೆ. ಅಲ್ಲದೆ, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಇನ್ನಷ್ಟು ಮಾನವ ಸಂಪನ್ಮೂಲ, ಮತ್ತಷ್ಟು ವಾಹನಗಳು ಜೊತೆಗೆ ಕಾಲಾವಕಾಶದ ಅಗತ್ಯವಿದೆ ಎಂದರು.

ಸಂವಹನ, ವ್ಯವಸ್ಥಾಪನ ಹಾಗೂ ಆಧುನೀಕರಣ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಡಾ.ರಾಜ್ವೀರ್ ಪ್ರತಾಪ್ ಶರ್ಮಾ ಮಾತನಾಡಿ, ಡಯಲ್ 112 ಯೋಜನೆಗೆ ಜನರಿಗೆ ಪರಿಚಯವಾಗುವವರೆಗೂ ಕೆಲಕಾಲ ತುರ್ತು ಕರೆಗೆ ಮೀಸಲಿರುವ 100, 101 ಹಾಗೂ 108 ಮುಂದುವರೆಸಲು ಚಿಂತಿಸಲಾಗಿದೆ. ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುವ ಈ ಯೋಜನೆಯನ್ನು ಇತರೆ ರಾಜ್ಯಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಏಕ ಕಾಲಕ್ಕೆ ರಾಜ್ಯಾದ್ಯಂತ ಈ ಯೋಜನೆಗೆ ಚಾಲನೆ ದೊರೆತಿದೆ ಎಂದು ತಿಳಿಸಿದರು.  

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮಾರಂಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News