'ಬಂಧಿತ ಪ್ರತಿರೋಧ, ಆಗಸ್ಟ್ 5ರ ಪರಿಣಾಮಗಳು’ ಸತ್ಯಶೋಧನಾ ವರದಿ ಬಿಡುಗಡೆ

Update: 2019-10-31 17:52 GMT

ಬೆಂಗಳೂರು, ಅ 31: ಕಾಶ್ಮೀರದ ಕಣಿವೆ ಪ್ರದೇಶಕ್ಕೆ 11 ಜನ ಸದಸ್ಯರ ತಂಡವು ಭೇಟಿ ನೀಡಿ ಅಲ್ಲಿನ ಪ್ರಜೆಗಳನ್ನು ಆರ್ಟಿಕಲ್ 370 ಬಗ್ಗೆ ಮಾತನಾಡಿಸಿ ಒಂದು ವರದಿ ತಯಾರಿಸಿದ್ದೇವೆ ಎಂದು ವಕೀಲೆ ಆರತಿ ಮುಂದ್ಕುರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿದ್ದ ವಕೀಲರು, ಕಾರ್ಮಿಕ ಸಂಘಟನೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದ 11 ಜನ ಸದಸ್ಯರ ತಂಡವು ಅಲ್ಲಿನ ಜಿಲ್ಲಾ ನ್ಯಾಯಾಲಯ ಮತ್ತು ನ್ಯಾಯಿಕ ಸ್ವರೂಪದ ಸಂಸ್ಥೆಗಳಲ್ಲಿನ ವಕೀಲರು, ಆರೋಗ್ಯ ಮತ್ತು ಮಾನಸಿಕ ಆರೋಗ್ಯ ತಜ್ಞರು, ವ್ಯಾಪಾರಿಗಳು ಮತ್ತು ಪ್ರಭುತ್ವದ ಹಿಂಸೆಗೆ ಒಳಗಾದ ನೊಂದವರನ್ನು ಮಾತನಾಡಿಸಿ ‘ಬಂಧಿತ ಪ್ರತಿರೋಧ, ಆ.5, ಅದರ ಪರಿಣಾಮಗಳು’ ಎಂಬ ಸತ್ಯಶೋಧನಾ ವರದಿ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.

ಭಾರತದಲ್ಲಿಯೂ ಸಹ ಅನೇಕ ಮಂದಿ ಭಾರತ ಸರಕಾರದ ಈ ತೀರ್ಮಾನವನ್ನು ವಿರೋಧಿಸಿದ್ದಾರೆ. ಆ.5 ಮತ್ತು ಆ.6ರಂದು ಸಂಸತ್ತು ತೆಗೆದುಕೊಂಡ ನಿರ್ಣಯ ಹಾಗೂ ಅಧ್ಯಕ್ಷೀಯ ಆದೇಶ ಸಿಓ 272 ಮತ್ತು 273 ಹಾಗೂ ಜಮ್ಮು ಮತ್ತು ಕಾಶ್ಮೀರ ರೀ ಆರ್ಗನೈಸೇಷನ್ ಕಾನೂನುಗಳನ್ನು ಹಿಂಪಡೆದು, ಆ.4ರ ಹಿಂದೆ ಇದ್ದಂತಹ ಸಂವಿಧಾನಿಕ ಮತ್ತು ಕಾನೂನಿನ ಸ್ಥಿತಿಗತಿಗಳನ್ನು ಪುನರ್ ಸ್ಥಾಪಿಸಬೇಕು. ಅಲ್ಲದೇ, ಆ.1ರ ನಂತರ ಬಂಧನಕ್ಕೊಳಗಾದ ಎಲ್ಲರನ್ನು ಬಿಡುಗಡೆಗೊಳಿಸಬೇಕು. ಸಂಪರ್ಕ ಮತ್ತು ಸಾರಿಗೆ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು. ಎಲ್ಲಾ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಹಕ್ಕುಗಳನ್ನು ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಶಿಫಾರಸ್ಸುಗಳು

* ಜಮ್ಮು ಮತ್ತು ಕಾಶ್ಮೀರಿ ಜನರ ಹಾಗೂ ಭಾರತ ಸರಕಾರದ ನಡುವೆ ವಿವಾದ ಇದೆ ಎಂದು ಗುರುತಿಸಬೇಕು.

* ಸಾರ್ವಜನಿಕ ರಕ್ಷಣಾ ಕಾಯ್ದೆ 1978 ಮತ್ತು ಎಎಫ್‌ಎಸ್‌ಪಿಎ(ಜೆ ಅಂಡ್ ಕೆ) 1990ರ ಕಾಯ್ದೆಗಳನ್ನು ರದ್ದುಗೊಳಿಸಬೇಕು.

* ಜಮ್ಮು ಮತ್ತು ಕಾಶ್ಮೀರ ಜನರು ಅವರ ಭವಿಷ್ಯವನ್ನು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸಲು ಜನ ಮತ್ತು ಪ್ರತಿನಿಧಿಗಳ ಜೊತೆ ಪಾರದರ್ಶಕ ಹಾಗೂ ಬೇಷರತ್ ಸಂವಾದವನ್ನು ನಡೆಸಲು ಅವಕಾಶ ಮಾಡಿ ಕೊಡಬೇಕು. ಮಾನವ ಹಕ್ಕುಗಳು ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನ ಚೌಕಟ್ಟಿನೊಳಗೆ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಗೌರವಿಸುವ ರಾಜಕೀಯ ಪರಿಹಾರವೊಂದನ್ನು ಕಂಡು ಹಿಡಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News