ಆರ್‌ಸಿಇಪಿ ವಿರುದ್ಧ ದೇಶಾದ್ಯಂತ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ: ಸಿದ್ದರಾಮಯ್ಯ

Update: 2019-11-01 15:31 GMT

ಬೆಂಗಳೂರು, ನ.1: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಆರ್‌ಸಿಇಪಿ(ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟ ರೂಪಿಸಲು ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆರ್‌ಸಿಇಪಿ ವಿರುದ್ಧ ಹೋರಾಟ ರೂಪಿಸುವುದಕ್ಕಾಗಿಯೇ ಎಐಸಿಸಿ ಮುಖಂಡರೊಬ್ಬರು ನಾಳೆ(ಶನಿವಾರ) ರಾಜ್ಯಕ್ಕೆ ಬರಲಿದ್ದಾರೆ. ನಂತರ ರೈತ ಮುಖಂಡರೊಂದಿಗೆ ಸಮಾಲೋಚಿಸಿ ಹೋರಾಟಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಈಗಾಗಲೇ ಡಬ್ಲುಟಿಒ ಒಪ್ಪಂದದಿಂದಾಗಿ ಚೀನಾದ ವಸ್ತುಗಳು ದೇಶದೊಳಗೆ ನುಸುಳಿದ ಪರಿಣಾಮವಾಗಿ ನಮ್ಮ ರೇಷ್ಮೆ ಸೇರಿದಂತೆ ಯಾವುದೇ ವಸ್ತುಗಳಿಗೆ ಬೆಲೆಯಿಲ್ಲದಾಗಿದೆ. ಈಗ ಆರ್‌ಸಿಇಪಿ ಒಪ್ಪಂದ ಜಾರಿಯಾದರೆ ನಮ್ಮ ಹೈನುಗಾರಿಕೆ ಸಂಪೂರ್ಣ ನಾಶವಾಗುವುದು ಖಚಿತವೆಂದು ಆತಂಕ ವ್ಯಕ್ತಪಡಿಸಿದರು.

ನ್ಯೂಝಿಲ್ಯಾಂಡ್, ಆಸ್ಪ್ರೇಲಿಯಾ ಸೇರಿದಂತೆ ಮುಂದುವರೆದ ದೇಶಗಳಲ್ಲಿ ಹೈನುಗಾರಿಕೆಯು ದೊಡ್ಡ ಉದ್ಯಮ ಕ್ಷೇತ್ರವಾಗಿದೆ. ಹಾಗೂ ಅಲ್ಲಿನ ಜನಸಂಖ್ಯೆಯು ಕಡಿಮೆಯಿದೆ. ಹೀಗಾಗಿ ಅಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ಹಾಲನ್ನು ಯಾವುದೇ ಸುಂಕವಿಲ್ಲದೆ ಭಾರತಕ್ಕೆ ತಂದು ಸರಿಯುತ್ತಾರೆ. ಇವುಗಳ ಸ್ಪರ್ಧೆಯಲ್ಲಿ ಈಗಷ್ಟೆ ಬೆಳವಣಿಗೆ ಕಾಣುತ್ತಿರುವ ರಾಜ್ಯದ ಹೈನುಗಾರಿಕೆ ನೆಲಕಚ್ಚಲಿದೆ ಎಂದು ಅವರು ಅಭಿಪ್ರಾಯಿಸಿದರು.

ಇವತ್ತು ಗ್ರಾಮಾಂತರ ಪ್ರದೇಶದ ಬಹುತೇಕ ಜನತೆ ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಒಟ್ಟು ಭಾರತದಲ್ಲಿ ಸುಮಾರು 10ಕೋಟಿ ರೂ.ಕುಟುಂಬಗಳು ಹೈನುಗಾರಿಕೆಗೆ ಅವಲಂಭಿತವಾಗಿವೆ. ಈಗ ದಿಢೀರನೆ ಆರ್‌ಸಿಇಪಿ ಜಾರಿಯಾದರೆ ಈ ಕುಟುಂಬಗಳು ಬೀದಿಗೆ ಬರಲಿವೆ ಎಂದು ಅವರು ಹೇಳಿದರು.

ಈಗಾಗಲೇ ಆರ್‌ಸಿಇಪಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿವೆ. ನಿನ್ನೆ(ಗುರುವಾರ) ಮಂಡ್ಯದಲ್ಲಿ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆದರೆ, ರಾಜ್ಯ ಸರಕಾರ ಮಾತ್ರ ರೈತರ ಆತಂಕವನ್ನು ದೂರ ಮಾಡುವಂತಹ ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಹಲವು ಪತ್ರಕರ್ತರು ಮತ್ತು ಮಾನವ ಹಕ್ಕು ಕಾರ್ಯಕರ್ತರ ಮೊಬೈಲ್‌ಗಳಲ್ಲಿರುವ ಮಾಹಿತಿಯನ್ನು ಕದ್ದು ಗೂಢಚರ್ಯೆ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹದ್ದಾಗಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಪ್ರಧಾನ ಆದ್ಯತೆ ಇದೆ. ಯಾರದೇ ಖಾಸಗಿ ವಿಷಯದ ಕುರಿತು ಗೂಢಚರ್ಯ ನಡೆಸುವುದು ಸಂವಿಧಾನಬಾಹಿರ ಕೃತ್ಯವಾಗಿದೆ. ಆದರೆ, ಇಸ್ರೇಲ್‌ನ ಸಂಸ್ಥೆಯೊಂದು ನಮ್ಮ ದೇಶದ ಹೋರಾಟಗಾರರ ವಿರುದ್ಧ ಗೂಢಚರ್ಯೆ ನಡೆಸಿರುವುದು ಅಪಾಯಕಾರಿ ಲಕ್ಷಣವಾಗಿದೆ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News