ಇನ್ನು ಮುಂದೆ ಕನ್ನಡ ಧ್ವಜ ಹಾರಿಸಲು ಜಿಲ್ಲಾಧಿಕಾರಿಗೆ ಸೂಚನೆ

Update: 2019-11-01 15:45 GMT

ಉಡುಪಿ, ನ.1: ಉಡುಪಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕೇವಲ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಕನ್ನಡ ಧ್ವಜ ಹಾರಿಸಿಲ್ಲ. ಉಳಿದೆಲ್ಲಾ ಜಿಲ್ಲೆಗಳಲ್ಲಿ ಕನ್ನಡ ಧ್ವಜ ಹಾಗೂ ರಾಷ್ಟ್ರ ಧ್ವಜ ಎರಡನ್ನೂ ಹಾರಿಸಲಾಗುತ್ತಿದೆ. ಹೀಗಾಗಿ ಮುಂದಿನ ವರ್ಷದಿಂದ ಎರಡೂ ಧ್ವಜಗಳನ್ನು ಹಾರಿಸುವಂತೆ ಜಿಲ್ಲಾಧಿಕಾರಿಗೆ ಇಂದೇ ಸೂಚನೆಯನ್ನು ನೀಡಿದ್ದೇನೆ ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು. ಈ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ವಿಚಾರಿಸಿ ದಾಗ ಕಳೆದ ಕೆಲವು ವರ್ಷಗಳಿಂದ ಒಂದೇ ಧ್ವಜವನ್ನು ಹಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಎರಡೂ ಧ್ವಜ ಹಾರಿಸುವಂತೆ ಜಿಲ್ಲಾಧಿಕಾರಿಗೆ ಇವತ್ತೇ ಸೂಚನೆ ಕೊಟ್ಟಿದ್ದೇನೆ ಎಂದರು.

ಕೇವಲ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಬೇಕೆಂದು ರಾಜ್ಯ ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಯಾವುದೇ ಸುತ್ತೋಲೆ ಸ್ವೀಕರಿಸಿಲ್ಲ. ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಇಂದು ಎರಡೂ ಧ್ವಜ್ವಗಳನ್ನು ಹಾರಿಸಿದ್ದಾರೆ, ಇಲ್ಲಿ ಮಾತ್ರ ಹಿಂದಿನ ಪ್ರತೀತಿಯಂತೆ ಒಂದೇ ಧ್ವಜವನ್ನು ಹಾರಿಸಿದ್ದಾರೆ. ಮುಂದಿನ ವರ್ಷದಿಂದ ಇಲ್ಲೂ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿಲ್ಲ: ಶಾಲಾ ಪಠ್ಯದಿಂದ ಟಿಪ್ಪುಪಾಠ ರದ್ಧತಿ ಪ್ರಸ್ತಾವದ ಕುರಿತು ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲನೆ ಮಾಡಬೇಕೆಂದು ಹೇಳಿದ್ದಾರೆ. ಸರಕಾರ ಈವರೆಗೆ ಯಾವುದೇ ನಿರ್ಣಯ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ ಗೃಹ ಸಚಿವರು, ಟಿಪ್ಪು ಕುರಿತ ವಿವಾದಾದ್ಮಕ ವಿಚಾರಗಳನ್ನು ಮಕ್ಕಳಿಗೆ ತಿಳಿಸಬಾರದೆಂಬುದು ಸರಕಾರದ ಉದ್ದೇಶ. ಹಿಂದೆಲ್ಲಾ ಟಿಪ್ಪುವಿಚಾರಗಳು ಹೆಚ್ಚು ಪ್ರಚಲಿತದಲ್ಲಿರಲಿಲ್ಲ, ಹೀಗಾಗಿ ವಿವಾದ ಆಗಿರಲಿಲ್ಲ ಎಂದು ತಿಳಿಸಿದರು.

ಸೈಬರ್ ಕ್ರೈಮ್ ನಿಯಂತ್ರಣ: ರಾಜ್ಯದಲ್ಲಿ ಸೈಬರ್ ಕ್ರೈಮ್ ಹೆಚ್ಚುತ್ತಿರುವ ಬಗ್ಗೆ, ಅವುಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮದ ಕುರಿತು ಪ್ರಶ್ನಿಸಿದಾಗ, ಇಡೀ ದೇಶದಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದೆ. ನಾವು ಐಟಿಯಲ್ಲಿ ಮುಂಚೂಣಿಯ ಲ್ಲಿರುವುದರಿಂದ ಇಲ್ಲಿ ಸ್ವಲ್ಪ ಹೆಚ್ಚಾಗಿದೆ. ದೇಶ ಡಿಜಿಟಲೀಕರಣದತ್ತ ಸಾಗುತ್ತಿ ರುವುದರಿಂದ, ಬ್ಯಾಂಕ್‌ಗಳಲ್ಲಿ ಆನ್‌ಲೈನ್ ವ್ಯವಹಾರ ಹೆಚ್ಚಿರುವುದರಿಂದ ಅಪರಾಧವೂ ಹೆಚ್ಚಿದೆ ಎಂದರು.

ಇದರ ನಿಯಂತ್ರಣಕ್ಕೆ ಈಗಾಗಲೇ ಪ್ರತಿ ಜಿಲ್ಲೆಗಳಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಾರಂಭಿಸಲಾಗಿದೆ. ಅದು ಸೈಬರ್ ಕ್ರೈಮ್‌ಗಳನ್ನು ವಿಶೇಷವಾಗಿ ತನಿಖೆ ನಡೆಸುತ್ತದೆ. ಬೆಂಗಳೂರಿನಲ್ಲಿ ಎಂಟು ಸೆನ್ ಪೊಲೀಸ್ ಠಾಣೆಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ. ಇದೀಗ ಪ್ರತಿ ಕಮಿಷನರೇಟ್‌ಗಳಲ್ಲೂ ಒಂದೊಂದು ಹೆಚ್ಚುವರಿ ಸೆನ್ ಠಾಣೆಯನ್ನು ತೆರೆಯಲು ನಿರ್ಧರಿಸಲಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಧಕರಿಗೆ ಕೊಡಲಾಗಿದೆ. ಪ್ರಶಸ್ತಿ ವಿಚಾರದಲ್ಲಿ ರಾಜಕೀಯ ಬೆರೆಸಿಲ್ಲ. ರಾಜಕಾರಣಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ. ಈ ಬಗ್ಗೆ ಬಂದಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News