ಆವರಣಗೋಡೆ ಕಾಮಗಾರಿಗೆ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಿಂದಲೇ ತೀವ್ರ ವಿರೋಧ

Update: 2019-11-01 17:29 GMT

ಉಪ್ಪಿನಂಗಡಿ: ಕಂದಾಯ ಇಲಾಖೆಯ ಜಾಗದಲ್ಲಿ ಗ್ರಾ.ಪಂ. ಆವರಣಗೋಡೆ ಕಟ್ಟಲು ಮುಂದಾಗುವ ಮೂಲಕ ವಾಣಿಜ್ಯ ಸಂಕೀರ್ಣಗಳಿಗೆ ಬಸ್ ನಿಲ್ದಾಣದಿಂದ ನೇರ ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗುತ್ತಿದೆ ಎಂಬ ಆಪಾದನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಅಧ್ಯಕ್ಷರಲ್ಲಿ ಆಗ್ರಹಿಸಿದ ಸದಸ್ಯರು, ಯಾವುದೇ ಕಾರಣಕ್ಕೂ ಕಂದಾಯ ಇಲಾಖೆಯ ಜಾಗದಲ್ಲಿ ಗ್ರಾ.ಪಂ. ಕಾಮಗಾರಿ ನಡೆಸಬಾರದೆಂಬ ನಿರ್ಣಯ ಕೈಗೊಂಡ ಘಟನೆ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಮೇಶ್ ಭಂಡಾರಿ, ಬಸ್ ನಿಲ್ದಾಣದ ಪಕ್ಕ ಕಂದಾಯ ಇಲಾಖೆಯ ಕೋಟ್ಯಾಂತರ ರೂ. ಮೌಲ್ಯದ ಜಾಗ ಇದೆ. ಇಲ್ಲಿರುವ ಗೇಟ್‍ನ ಬೀಗವನ್ನು ತೆಗೆಯಲಾಗಿತ್ತು. ಈ ಬಗ್ಗೆ ಪಿಡಿಓ ಅವರಲ್ಲಿ ವಿಚಾರಿಸಿದಾಗ ಅಲ್ಲಿ ಮರ ಕಡಿಯಲು ಇದ್ದ ಕಾರಣ ಬೀಗ ತೆಗೆಯಲಾಗಿದೆ. ಬಳಿಕ ಬೀಗ ಹಾಕಲಾಗುವುದು ಎಂದಿದ್ದರು.

ಆದರೆ ಗೇಟಿಗೆ ಬೀಗವನ್ನು ಹಾಕಿರಲಿಲ್ಲ. ಬಳಿಕದ ಬೆಳವಣಿಗೆಯಲ್ಲಿ ಪಕ್ಕದಲ್ಲಿರುವ ಗ್ರಂಥಾಲಯಕ್ಕೆ ಹಾಗೂ ಅದರ ಎದುರು ಬದಿಯಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಯ ಸ್ಥಳಕ್ಕೆ ಪ್ರತ್ಯೇಕವಾಗಿ ಆವರಣ ಗೋಡೆ ಕಟ್ಟಿ ಈ ಎರಡು ಆವರಣಗೋಡೆಯ ನಡುವಿನಲ್ಲಿ ದಾರಿ ಬರುವ ಹಾಗೆ ಮಾಡಿ ಗ್ರಾ.ಪಂ.ನಿಂದ ಕಾಮಗಾರಿ ಆರಂಭಿಸಲಾಗಿತ್ತು. ಈ ಜಾಗದ ಇನ್ನೊಂದು ಬದಿಗೆ ಖಾಸಗಿ ವಾಣಿಜ್ಯ ಹಾಗೂ ವಸತಿ ಸಂಕೀರ್ಣ ಗಳಿದ್ದು, ಅಲ್ಲಿಗೆ ದಾರಿ ರೂಪಿಸುವ ಯೋಜನೆಯಂತೆ ಇದು ಕಂಡು ಬರುತ್ತಿತ್ತು. ಪಂಚಾಯತ್ ಕಾಮಗಾರಿಯ ಬಗ್ಗೆ ನಮಗೂ ತಿಳಿದಿರಲಿಲ್ಲ.

ಇನ್ನೊಂದೆಡೆ ಸಾರ್ವಜನಿಕರಿಂದಲೂ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಗ್ರಾ.ಪಂ. ಖಾಸಗಿ ವಾಣಿಜ್ಯ, ವಸತಿ ಸಂಕೀರ್ಣಗಳಿಗೆ ದಾರಿ ಮಾಡಿಕೊಡುವ ಹುನ್ನಾರ ನಡೆಸುತ್ತಿದೆ ಎಂದು ಗ್ರಾ.ಪಂ. ಮೇಲೆ ಆಪಾದನೆ ಹೊರಿಸಿದ್ದರು. ಇದರಲ್ಲಿ ಸದಸ್ಯರ ಶಾಮೀಲಾತಿ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿತ್ತು. ಕಂದಾಯ ಇಲಾಖೆಯ ಜಾಗದಲ್ಲಿ ಗ್ರಾ.ಪಂ. ಕಾಮಗಾರಿ ನಡೆಸಿದ್ದು ಯಾಕೆ ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಸದಸ್ಯ ಸುರೇಶ್ ಅತ್ರಮಜಲು ಕೂಡಾ ಇದಕ್ಕೆ ಧ್ವನಿಗೂಡಿಸಿದರಲ್ಲದೆ, ಈ ಕಾಮಗಾರಿಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಪಷ್ಟನೆ ನೀಡಿದ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., "ಕಂದಾಯ ಇಲಾಖೆಯ ದಾರಿಯಲ್ಲಿ ಹೋಗುವ ಸಾರ್ವಜನಿಕರು ಲೈಬ್ರೇರಿ ಗೋಡೆ ಮೇಲೆ ಮೂತ್ರವಿಸರ್ಜನೆ ಮಾಡುವುದು, ಲೈಬ್ರೇರಿ ಕಿಟಕಿ ಬಳಿಯಲ್ಲಿ ನಿಂತು ಮಾತನಾಡುವುದು ಮಾಡುತ್ತಿರುತ್ತಾರೆ, ಈ ಬಗ್ಗೆ ಆವರಣ ಗೋಡೆ ಕಟ್ಟಿಸಿಕೊಡುವಂತೆ ಲೈಬ್ರೇರಿಯಿಂದ ಮನವಿ ಸಲ್ಲಿಸಿದ್ದರು. ಆ ಸಲುವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ, ಸಹಾಯಕ ಕಮೀಷನರ್ ಅವರು ಗಮನಕ್ಕೆ ತಂದು ಅವರ ಅನುಮತಿ ಮೇರೆಗೆ ಆವರಣ ಗೋಡೆ ನಿರ್ಮಿಸಲು ಮುಂದಾಗಿ ದ್ದೆವು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಗ್ರಂಥಾಲಯ ಗ್ರಾ.ಪಂ. ಅಧೀನದಲ್ಲಿದೆ. ಅದಕ್ಕೆ ಸುತ್ತಲೂ ಆವರಣಗೋಡೆ ಕಟ್ಟಿ ನಾವು ಭದ್ರಪಡಿಸೋಣ. ಇದಕ್ಕೆ ನಾವು ಕೂಡಾ ಒಪ್ಪಿದ್ದೇವೆ. ಆದರೆ ಕಂದಾಯ ಇಲಾಖೆಯ ಜಾಗದಲ್ಲೂ ಆವರಣ ಗೋಡೆ ನಿರ್ಮಿಸಿ, ನಡುವಿನಲ್ಲಿ ದಾರಿಯ ವ್ಯವಸ್ಥೆ ಮಾಡಲು ನಮ್ಮ ತೀವ್ರ ಆಕ್ಷೇಪವಿದೆ ಎಂದರು.

ಈ ಸಂದರ್ಭ ಇದು ಕಾಲುದಾರಿಯಾಗಿತ್ತು ಎಂಬ ಮಾತು ಕೆಲವು ಸದಸ್ಯರಿಂದ ಕೇಳಿ ಬಂತು. ಅದಕ್ಕೆ ಸುರೇಶ್ ಅತ್ರೆಮಜಲು, ಅದು ಮೊದಲಿನಿಂದ ಇದ್ದ ಕಾಲು ದಾರಿಯಲ್ಲ. ಹಾಗಿದ್ದರೆ ದಾಖಲೆ ತೋರಿಸಿ. ಇನ್ನು ಮುಂದೆ ಕಂದಾಯ ಇಲಾಖೆಗೆ ಸೇರಿದ ಜಾಗದ ಉಸಾಬರಿ ಗ್ರಾ.ಪಂ.ಗೆ ಬೇಡ. ಅಲ್ಲಿ ಗ್ರಾ.ಪಂ. ಸಿಬ್ಬಂದಿ ಮುಂದೆ ನಿಂತು ಕಾಮಗಾರಿ ನಡೆಸಿದ್ದಲ್ಲಿ ಮುಂದೆ ಇದಕ್ಕೆಲ್ಲಾ ನೇರ ಹೊಣೆ ನೀವಾಗುತ್ತೀರಿ ಎಂದು ಪಿಡಿಒಗೆ ಎಚ್ಚರಿಸಿದರು. ಕೊನೆಗೇ ಕಂದಾಯ ಇಲಾಖೆಯ ಜಾಗಕ್ಕೆ ಗ್ರಾ.ಪಂ. ಕೈ ಹಾಕದಂತೆ ನಿರ್ಣಯ ಅಂಗೀಕರಿಸಲಾಯಿತು. 

ಬಡವನಿಗೊಂದು ನ್ಯಾಯ; ಧನಿಕನಿಗೊಂದು ನ್ಯಾಯ: ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡವನೋರ್ವ ಮನೆ ಕಟ್ಟಲು ಪರವಾನಿಗೆಗೆ ಬಂದರೆ ಅವನನ್ನು ಆ ನಿಯಮ, ಈ ನಿಯಮ ಎಂದು ಸತಾಯಿಸಲಾಗುತ್ತಿದೆ. ಆದರೆ ಧನಿಕರು ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೂ ಅಧಿಕಾರಿಗಳು ಕೇಳುವುದಿಲ್ಲ. ಅಕ್ರಮಗಳಿಗೆ ಅವಕಾಶ ಮಾಡಿಕೊಡುತ್ತಾರೆ. ಬಹುಮಹಡಿ ವಾಣಿಜ್ಯ ಸಂಕೀರ್ಣಗಳಲ್ಲಿ ನೆಲ ಅಂತಸ್ತಿನಲ್ಲಿಯೂ ಅಂಗಡಿ ಕೋಣೆಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ವಾಹನ ನಿಲುಗಡೆಗೆ ಅವಕಾಶವೇ ನೀಡುವುದಿಲ್ಲ. ಆದ್ದರಿಂದ ನೆಲ ಅಂತಸ್ತಿನಲ್ಲಿ   ಅಂಗಡಿ ಕೋಣೆಗಳನ್ನು ನಿರ್ಮಿಸಬಾರದೆಂಬ ಆಗ್ರಹ ಸದಸ್ಯರಿಂದ ಕೇಳಿ ಬಂತು. ಈ ಬಗ್ಗೆ ಸಮಗ್ರ ಚರ್ಚೆಯಾಗಿ ನೆಲ ಅಂತಸ್ತಿನಲ್ಲಿ 30/70 ರ ಮಾನದಂಡದಲ್ಲಿ ಅಂಗಡಿ ಕೋಣೆ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶಕ್ಕೆ ಅನುಮತಿ ನೀಡುವುದಾಗಿ ಸದಸ್ಯರ ಮನವೊಲಿಸಲಾಯಿತು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ರಮೇಶ್ ಭಂಡಾರಿ, ನಿಯಮ ಬಾಹಿರವಾದ ಕೆಲಸಗಳಿಗೆ ನನ್ನ ಸಮ್ಮತವಿಲ್ಲ. ಉಪ್ಪಿನಂಗಡಿಯಲ್ಲಿ ಈಗಾಗಲೇ ವಾಹನ ನಿಲುಗಡೆಗೆ ಸ್ಥಳವಿಲ್ಲದಂತಾಗಿದೆ. ಇನ್ನು ಬಹುಮಹಡಿ ಕಟ್ಟಡದ ನೆಲ ಅಂತಸ್ತಿನಲ್ಲಿಯೂ ಅಂಗಡಿ ಕೋಣೆಗಳಿಗೆ ಅವಕಾಶ ಮಾಡಿಕೊಟ್ಟರೆ, ಉಪ್ಪಿನಂಗಡಿ ಪೇಟೆಯ ಭವಿಷ್ಯ ಏನಾಗಬಹುದು. ಆದ್ದರಿಂದ ಈ ನಿರ್ಣಯಕ್ಕೆ ತನ್ನ ಆಕ್ಷೇಪ ಬರೆಯಿರಿ ಎಂದರು.

ಬಿ.ಪಿ.ಎಲ್. ಕಾರ್ಡು ಹೊಂದಿ ಅವರಲ್ಲಿ ಮನೆಯಲ್ಲಿ ಕಾರು ಇದ್ದರೆ ಅಂತಹವರನ್ನು ಬಿ.ಪಿ.ಎಲ್.ನಿಂದ ತೆಗೆಯಲಾಗುವುದು ಎಂದು ತಿಳಿಸಲಾಗಿದೆ, ಇದು ಸರಿಅಲ್ಲ ಎಂದು ವಿವರಣೆ ನೀಡಿದ ಸದಸ್ಯರುಗಳು "ಬಹಳಷ್ಟು ಕೂಲಿ ಕಾರ್ಮಿಕರು 5 ಸೆಂಟ್ಸ್ ಜಾಗ ಹೊಂದಿ, ಅದರಲ್ಲಿ ಸಣ್ಣ ಮನೆ ಕಟ್ಟಿಕೊಂಡು ತೀರಾ ಅಗತ್ಯದ ಸಲುವಾಗಿ ಮನೆಯವರು ಓಡಾಡಲು, ಅದರಲ್ಲೂ ಮನೆಯಲ್ಲಿ ವೃದ್ಧರು, ರೋಗಿಗಳು ಇದ್ದರೆ ಆಸ್ಪತ್ರೆಗೆ ಹೋಗುವ ಸಲುವಾಗಿ ಕಡಿಮೆ ಬೆಲೆಯ ಕಾರು ಹೊಂದಿರುತ್ತಾರೆ, ಆದರೆ ಇಂತಹ ಸ್ಥಿತಿಯಲ್ಲಿ ಕಾರು ಇದ್ದವರು ಬಿ.ಪಿ.ಎಲ್. ಪಟ್ಟಿಯಿಂದ ಹೊರಗೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ, ಇದು ಸರಿ ಅಲ್ಲ, ಈ ವಿಚಾರದಲ್ಲಿ ಮಾನದಂಡವನ್ನು ಪುನರ್ ಪರಿಶೀಲನೆ ಮಾಡಿ ಬಡವರಿಗೆ ನ್ಯಾಯ ಒದಗಿಸಿ ಕೊಡಬೇಕು" ಎಂದು ಆಗ್ರಹಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಸದಸ್ಯರುಗಳಾದ ಸುರೇಶ್ ಅತ್ರಮಜಲು, ಸುನಿಲ್ ಕುಮಾರ್ ದಡ್ಡು, ಚಂದ್ರಶೇಖರ ಮಡಿವಾಳ, ಯು.ಟಿ. ತೌಶೀಫ್, ಯು.ಕೆ. ಇಬ್ರಾಹಿಂ, ಗೋಪಾಲ ಹೆಗ್ಡೆ, ರಮೇಶ್ ಭಂಡಾರಿ ಮಾತನಾಡಿದರು. ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಶೆಟ್ಟಿ, ಸದಸ್ಯರುಗಳಾದ ಉಮೇಶ್ ಗೌಡ, ಶ್ರೀಮತಿ ಭಾರತಿ, ಶ್ರೀಮತಿ ಝರೀನ ಇಕ್ಬಾಲ್, ಶ್ರೀಮತಿ ಯೋಗಿನಿ, ಶ್ರೀಮತಿ ಸುಶೀಲ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News