ಮಂಗಳೂರು : ವಿಕಾಸ್ ಕಾಲೇಜಿನಲ್ಲಿ ‘ಪಾಂಚ್ ಸೌ ಕಾ ಜೋಶ್’ ಪೋಸ್ಟರ್ ಬಿಡುಗಡೆ

Update: 2019-11-02 12:26 GMT

ಮಂಗಳೂರು: ನಗರದ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ‘ಪಾಂಚ್  ಸೌ ಕಾ ಜೋಶ್’ ಮೂರನೇ ಆವೃತ್ತಿಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಬದ್ರಿಯಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್‌ ಅವರು ಆಗಮಿಸಿ, ಪೋಸ್ಟರ್ ಬಿಡುಗಡೆಗೊಳಿಸಿದರು.

ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ 2014ರ ಸೆ. 25ರಂದು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಚಾಲನೆ ನೀಡಲಾಯಿತು.

ಸ್ವದೇಶಿ ವಸ್ತುಗಳ ಬಳಕೆಯ ಮೂಲಕ ಭಾರತದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಔದ್ಯೋಗಿಕ ಕ್ರಾಂತಿಯೇ ಇದರ ಮೂಲ ಉದ್ಧೇಶ. ಈ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿಕಾಸ್ ಪದವಿ ಪೂರ್ವ ಕಾಲೇಜು ‘ಪಾಂಚ್  ಸೌ ಕಾ ಜೋಶ್’ಎಂಬ ಕಾರ್ಯಕ್ರಮವನ್ನು ಸ್ಪರ್ಧೆಯ ಮೂಲಕ ರಾಜ್ಯದ  ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಈ ಹಿಂದೆ ಪರಿಚಯಿಸಿರುತ್ತದೆ.

ಅದರ ಮೂರನೇ ಆವೃತ್ತಿಯನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ನ. 21 ಮತ್ತು ನ. 23ರಂದು ನಡೆಸಲಿದೆ. ಇದರ ಅಂಗವಾಗಿ ಪ್ರೌಢಶಾಲೆಯ 9 ಮತ್ತು 10ನೆ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ಮಾದರಿ ತಯಾರಿಕೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮೂಲಕ ಪಡೆದ  500 ರೂ. ಮೂಲ ಬಂಡವಾಳದೊಂದಿಗೆ ಮಾದರಿಯನ್ನು ತಯಾರಿಸಬೇಕಾಗುತ್ತದೆ. ಪ್ರತಿಯೊಂದು ಶಾಲೆಯಿಂದ ಮೂವರನ್ನೊಳಗೊಂಡ ಗರಿಷ್ಠ 5 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ದೇಶದ ಅಭಿವೃದ್ಧಿಗಾಗಿ  ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಂದ ಕ್ರೀಯಾಶೀಲ ಹಾಗೂ ಅತ್ಯುತ್ತಮ ಮಾದರಿಗಳನ್ನು ನಿರೀಕ್ಷಿಸಲಾಗಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪದವಿಪೂರ್ವ ಹಾಗೂ ಉನ್ನತ  ಶಿಕ್ಷಣದಲ್ಲಿ ಸರಿಯಾದ ವಿಭಾಗವನ್ನು ಆಯ್ಕೆ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ.

ಪ್ರತಿ ವಿಭಾಗದ ವಿಜೇತ ತಂಡಗಳಿಗೆ 10 ಸಾವಿರ ರೂ. ನಗದು ಬಹುಮಾನ, 5 ಸಾವಿರ ರೂ. ಸಮಾಧಾನಕರ ಬಹುಮಾನ ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡುವುದರ ಜೊತೆಗೆ ಗ್ರಾಂಡ್ ಫಿನಾಲೆ ನಡೆಯುವ ದಿನದಂದು ಪರಿಣಿತರಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಲಾಗುವುದು.

ನ. 8ರ ಒಳಗೆ ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಮೊ. 9731289934, 9483366770, 9900865792 ಹಾಗೂ ಉಡುಪಿ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಮೊ. 9900751013, 9483366770, 9611667787ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಈ ಸಂದರ್ಭ ತಿಳಿಸಲಾಯಿತು.

ವೇದಿಕೆಯಲ್ಲಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಜೆ ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಸಮನ್ವಯಾಧಿಕಾರಿ ಪಾರ್ಥಸಾರಥಿ ಜೆ ಪಾಲೆಮಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುನೀಲ್ ಬಿ ಎಮ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ  ಐಶ್ವರ್ಯ ಕೆ,  ಕನ್ನಡ ವಿಭಾಗದ ಮುಖ್ಯಸ್ಥೆ ಶೋಭಾ ಪಿ. ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಅಜಿತ್ ರೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News