ಶಿರ್ವ: ಫಾ.ಮಹೇಶ್ ಡಿಸೋಜ ಸಾವಿನ ತನಿಖೆ ಬಗ್ಗೆ ಮಾಹಿತಿ ನೀಡುವಂತೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ

Update: 2019-11-02 14:52 GMT

ಶಿರ್ವ, ನ.2: ಶಿರ್ವ ಸಾವುದ್ ಅಮ್ಮನವರ ಚರ್ಚಿನ ಸಹಾಯಕ ಧರ್ಮ ಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್ ಡಿಸೋಜ ಸಾವಿನ ಕುರಿತ ತನಿಖೆಯ ಮಾಹಿತಿ ನೀಡಬೇಕು ಮತ್ತು ಈ ಬಗ್ಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಚರ್ಚ್ ಭಕ್ತರು ಶನಿವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.

ಸಾವಿರಾರು ಸಂಖ್ಯೆಯ ಭಕ್ತರು ಚರ್ಚ್‌ನ ಆವರಣದಲ್ಲಿರುವ ಪ್ರಧಾನ ಧರ್ಮಗುರುಗಳ ನಿವಾಸ ಮುಂದೆ ಜಮಾಯಿಸಿ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದರು. ರಾತ್ರಿಯವರೆಗೂ ಪ್ರತಿಭಟನೆ ನಡೆಸುತ್ತಿರುವ ಭಕ್ತರು ಸ್ಥಳಕ್ಕೆ ಎಸ್ಪಿ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.

ಫಾ.ಮಹೇಶ್ ಡಿಸೋಜ ಅ.11ರಂದು ರಾತ್ರಿ ಶಾಲೆಯ ಮುಖ್ಯೋ ಪಾಧ್ಯಾಯರ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಇವರ ಸಾವಿಗೆ ಕಾಣದ ಕೈಗಳ ಒತ್ತಡವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ತನಿಖೆ ಯಾವ ಹಂತದಲ್ಲಿ ಇದೆ ಹಾಗೂ ತನಿಖೆಯ ಮಾಹಿತಿ ನೀಡುವಂತೆ ಒತ್ತಾಯಿಸಿ ಭಕ್ತರು ಈ ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಉಡುಪಿ, ಶಿರ್ವ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News