ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೆ ರಹೀಂ ಉಚ್ಚಿಲ್ ಆಗ್ರಹ

Update: 2019-11-02 18:09 GMT

ಮಂಗಳೂರು, ನ.2: ದೇಶದ ಅತೀ ದೊಡ್ಡ ವಕ್ಫ್ ಆಸ್ತಿ ಹಗರಣವನ್ನು ಬಯಲಿಗೆಳೆದಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ನೀಡಿದ್ದ ವರದಿಯನ್ನು ಜಾರಿಗೊಳಿಸುವಂತೆ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಆಗ್ರಹಿಸಿದ್ದಾರೆ.

ಈ ವರದಿಯನ್ನು ಹಿಂದಿನ ಸರಕಾರ ಸದನದಲ್ಲಿ ಮಂಡಿಸಲು ರಾಜ್ಯ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದರೂ ಹಿಂದೇಟು ಹಾಕಿತ್ತು. ಇದೀಗ ನೂತನವಾಗಿ ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಈ ಬಾರಿಯ ಡಿಸೆಂಬರ್ ತಿಂಗಳ ಅಧಿವೇಶನದಲ್ಲಿ ಮಂಡಿಸಲು ಕ್ಯಾಬಿನೆಟ್ ಒಪ್ಪಿಗೆ ಪಡೆದಿದ್ದು, ಸರಕಾರದ ಈ ದಿಟ್ಟ ಕ್ರಮವನ್ನು ರಹೀಂ ಉಚ್ಚಿಲ್ ಸ್ವಾಗತಿಸಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಈ ಬಾರಿಯ ಅಧಿವೇಶನದಲ್ಲೇ ಈ ವರದಿಯನ್ನು ಮಂಡಿಸಬೇಕೆಂದು ಒತ್ತಾಯಿಸಿದ್ದಾರೆ.

ವರದಿ ಮಂಡನೆಯಾದಲ್ಲಿ ಹಲವಾರು ವರ್ಷಗಳಿಂದ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುತ್ತಾ ಬಂದ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗಲಿದೆ. ಸರಕಾರದ ಮೌಲ್ಯ ಪ್ರಕಾರ 2.30 ಲಕ್ಷ ಕೋಟಿ ರೂ. ಹಗರಣ ನಡೆದಿದ್ದು, ಸಮಾಜದ ಉನ್ನತ ವ್ಯಕ್ತಿಗಳೇ ವಕ್ಫ್ ಜಾಗವನ್ನು ಕಬಳಿಸಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಆಸ್ತಿಯನ್ನು ಮರಳಿ ಪಡೆದು ಮುಸ್ಲಿಂ ಸಮಾಜದ ಶೈಕ್ಷಣಿಕ ಹಾಗೂ ಇನ್ನಿತರ ಕಲ್ಯಾಣ ಕಾರ್ಯಕ್ಕೆ ವಿನಿಯೋಗಿಸಲು ಅನುಕೂಲವಾಗಲಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News