ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರುಗೆ ‘ಕೊಲೆಕಾಡಿ ಛಂದಃಪದ್ಮಶ್ರೀ ಪ್ರಶಸ್ತಿ’
ಮಂಗಳೂರು, ನ.3: ಕೊಲೆಕಾಡಿ ಛಂದಃಪದ್ಮ ಯಕ್ಷಟ್ರಸ್ಟ್ ಸಂಸ್ಥೆ ನೀಡುವ ‘ಕೊಲೆಕಾಡಿ ಛಂದಃಪದ್ಮಶ್ರೀ ಪ್ರಶಸ್ತಿ’ಗೆ ಯಕ್ಷಗಾನ ಪ್ರಸಂಗಕರ್ತ ಛಂದೋಬ್ರಹ್ಮ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಆಯ್ಕೆಯಾಗಿದ್ದಾರೆ.
ಯಕ್ಷಗಾನ ಗುರು, ಪ್ರಸಂಗಕರ್ತ, ಛಾಂದಸ ಕವಿ ಗಣೇಶ ಕೊಲೆಕಾಡಿಯ ನೇತೃತ್ವದಲ್ಲಿ ಕೊಲೆಕಾಡಿ ಛಂದಃಪದ್ಮ ಯಕ್ಷಟ್ರಸ್ಟ್ ಸಂಸ್ಥೆ ಸ್ಥಾಪನೆಗೊಂಡಿದ್ದು, ಪ್ರಥಮ ಪ್ರಶಸ್ತಿಗೆ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಆಯ್ಕೆಗೊಂಡಿದ್ದಾರೆ.
ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು: ಅಭಿನವ ನಾಗವರ್ಮ, ಛಂದೋಬ್ರಹ್ಮ ಬಿರುದಾಂಕಿತ ಸಂಶೋಧಕ ಡಾ.ಎನ್. ನಾರಾಯಣ ಶೆಟ್ಟಿ ಎಳತ್ತೂರುಗುತ್ತು ದಿ. ಅಚ್ಚಣ್ಣ ಶೆಟ್ಟಿ ಮತ್ತು ನಂದಿಕೂರು ಚೀಂಕ್ರಿಗುತ್ತು ದಿ. ಕಮಲಾಕ್ಷಿ ದಂಪತಿಯ ಪುತ್ರನಾಗಿ 1934ರ ಫೆ.1ರಂದು ಜನಿಸಿದರು. ಏಳನೆಯ ತರಗತಿಯಲ್ಲಿರುವಾಗಲೇ ಶ್ರೀ ಕಟೀಲು ಕ್ಷೇತ್ರ ಮಾಹಾತ್ಮ್ಯ ಎಂಬ ಯಕ್ಷಕಾವ್ಯವನ್ನು ಬರೆದು ಕೀರ್ತಿ ಪಾತ್ರರಾದವರು. ಇವರ ಅಪೂರ್ವ ಕೃತಿ ‘ಯಕ್ಷಗಾನ ಛಂದೋಂಬುಧಿ’. ಇದಕ್ಕೆ ಹಂಪಿ ವಿವಿ ಡಿ.ಲಿಟ್.ಪದವಿ ನೀಡಿದೆ.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸದಸ್ಯನಾಗಿ ಅನೇಕ ಮಹತ್ವಪೂರ್ಣ ಸಾಧನೆಗಳನ್ನು ಮಾಡಿದ್ದಾರೆ. ‘ಸೊರ್ಕುದ ಸಿರಿಗಿಂಡೆ’ ಸಹಿತ 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಅಕಾಡಮಿಯ ‘ಪಾರ್ತಿಸುಬ್ಬ ಪ್ರಶಸ್ತಿ’ಯನ್ನು ಅರ್ಹವಾಗಿ ಪಡೆದಿದ್ದಾರೆ.
ಕೊಲೆಕಾಡಿ ಛಂದಃಪದ್ಮ ಯಕ್ಷಟ್ರಸ್ಟ್ ಸಂಸ್ಥೆ ಉದ್ಘಾಟನೆ ಅಂಗವಾಗಿ ನ.10ರಂದು ಬೆಳಗ್ಗೆಯಿಂದ ರಾತ್ರಿವರೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಕೊಲೆಕಾಡಿ ಯಕ್ಷವೈಭವ 2019’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3:30ಕ್ಕೆ ಶಿಮಂತೂರುಗೆ ಚಿಕ್ಕಮಗಳೂರಿನ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯ ಸಾನಿಧ್ಯದಲ್ಲಿ ‘ಕೊಲೆಕಾಡಿ ಛಂದಃಪದ್ಮಶ್ರೀ ಪ್ರಶಸ್ತಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.