ಬಿಜೆಪಿ ಕೋರ್ ಕಮಿಟಿ ಸಭೆಗೆ ವಿಪಕ್ಷ ನಾಯಕನನ್ನು ಆಹ್ವಾನಿಸಿದ್ದೀರಾ?: ಸಿದ್ದರಾಮಯ್ಯ ಪ್ರಶ್ನೆ

Update: 2019-11-04 13:47 GMT

ಬೆಂಗಳೂರು, ನ. 4: ‘ಶೋಷಿತ ಸಮಾಜಗಳು ತಮ್ಮ ಪರವಾಗಿರುವವರನ್ನು ಬೆಂಬಲಿಸಿದರೆ ಮಾತ್ರ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯ’ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಮಂಡಲ ವರದಿ ವಿರೋಧಿಸಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದವರು ಯಾರು? ಅಂದು ಯಡಿಯೂರಪ್ಪ, ಈಶ್ವರಪ್ಪ ಯಾರ ಪರವಾಗಿ ಇದ್ದರು?’ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಿರ್ಧಾರವಲ್ಲ: ‘ಅನ್ನಭಾಗ್ಯ ಜಾರಿಗೆ ತಂದಿದ್ದು ನಮ್ಮ ಸರಕಾರ, ಆದರೆ ಇದೆಲ್ಲ ಮೋದಿ ಸರಕಾರದ ಕೊಡುಗೆ ಎಂದು ಸಿಎಂ ಯಡಿಯೂರಪ್ಪ ಹೋದಲೆಲ್ಲಾ ಹೇಳುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದ್ದು ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರ. ಇದು ಬಿಜೆಪಿ ಸರಕಾರದ ನಿರ್ಧಾರವಲ್ಲ ಎಂಬುವುದನ್ನು ಮೊದಲು ಅರ್ಥೈಸಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು ನಾನು. ಬಿಜೆಪಿ ಆಡಳಿತವಿರುವ ಯಾವ ರಾಜ್ಯದಲ್ಲಿ ಇದು ಜಾರಿಯಲ್ಲಿದೆ? ಇದು ಕೇಂದ್ರದ ಯೋಜನೆಯಾಗಿದ್ದರೆ ಎಲ್ಲ ರಾಜ್ಯಗಳಲ್ಲೂ ಜಾರಿಯಾಗಬೇಕಿತ್ತು ಅಲ್ಲವೇ? ಏಕೆ ಜಾರಿಯಾಗಿಲ್ಲ? ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಕಾಯಕ ಜೀವಿಗಳ ಕಲ್ಯಾಣ ಆಗದೆ ‘ಕಲ್ಯಾಣ ಕರ್ನಾಟಕ’ ಎಂದು ಕರೆದುಕೊಂಡ್ರೆ ಏನುಪಯೋಗ? ಬಸವಣ್ಣ ಹೇಳಿದ್ದ ಕಾಯಕ ಮತ್ತು ದಾಸೋಹವನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತನ್ನಿ, ಕರ್ನಾಟಕದ ಕಲ್ಯಾಣ ಆಗುತ್ತೆ. ಬಸವಣ್ಣ ಹೇಳಿದ್ದನ್ನು ಹೇಳಿದ್ದಕ್ಕೆ ನಾನು ಧರ್ಮ ಒಡಿತಿದೀನಿ ಎಂದರು’ ಎಂದು ಸಿದ್ದರಾಮಯ್ಯ, ಟ್ವೀಟ್ಟರ್ ಮೂಲಕ ಬಿಜೆಪಿ ವಿರುದ್ಧ ವಾಗ್ಬಾಣ ಬಿಟ್ಟಿದ್ದಾರೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಆಡಿಯೋ ನನ್ನಿಂದ ರಿಲೀಸ್ ಆಗಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಜೋಕ್ ಮಾಡಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸಿದ್ದೀರಾ? ಜೋಕ್ ಮಾಡೋರನ್ನ ‘......’ ಎನ್ನುತ್ತಾರೆ ಗೊತ್ತಾ?’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News