ಕೆಐಎಡಿಬಿ ಅಧಿಕಾರಿ ಬಂಧನಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

Update: 2019-11-04 14:42 GMT

ಬೆಂಗಳೂರು, ನ.4: ಕೆಐಎಡಿಬಿ ಅಧಿಕಾರಿ ಎಂ.ರಾಮು ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದ್ದರೂ, ಬಂಧನ ಮಾಡದಿರುವ ಕ್ರಮ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಪುರಭವನ ಮುಂಭಾಗ ಜಮಾಯಿಸಿದ ಒಕ್ಕೂಟದ ಸದಸ್ಯರು, ಅಧಿಕಾರಿ ಎಂ.ರಾಮು ವಿರುದ್ಧ ಹಲವು ಬಾರಿ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದರೂ, ಸರಕಾರ ಕ್ರಮ ಕೈಗೊಳ್ಳದೆ ಸುಮ್ಮನಿದೆ ಎಂದು ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ಸಂವಿಧಾನಬದ್ಧವಾದ ಹಕ್ಕುಗಳನ್ನು ಅದರಲ್ಲೂ ವಿಶೇಷವಾಗಿ ಅನ್ಯಾಯಕ್ಕೆ, ದೌರ್ಜನ್ಯಕ್ಕಾಗಿ ಒಳಪಟ್ಟ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಮಹಾದಾಸೆಯಿಂದ ನೀಡಲಾದ ಮೀಸಲಾತಿಯನ್ನು, ಇತರರು ಬಳಕೆ ಮಾಡಿಕೊಂಡು, ದಲಿತರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಂತಹ ಸಂವಿಧಾನ ವಿರೋಧಿ ಕೃತ್ಯದಲ್ಲಿ ಕೆಐಎಡಿಬಿ ಅಧಿಕಾರಿ ಎಂ.ರಾಮು ಭಾಗಿಯಾಗಿದ್ದು, ಕೆಲ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವು ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಆರ್.ಮೋಹನ್‌ರಾಜ್, ದಸಂಸ ಸಂಚಾಲಕ ವಿ.ನಾಗರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News