ಉಡುಪಿ: 16ರಿಂದ ಬಾಬಾ ರಾಮದೇವ್ ಯೋಗ ಶಿಬಿರ

Update: 2019-11-04 14:57 GMT

ಉಡುಪಿ, ನ.4: ಪರ್ಯಾಯ ಪಲಿಮಾರು ಮಠವು, ಹರಿದ್ವಾರದ ಪತಂಜಲಿ ಯೋಗ ಪೀಠ (ಟ್ರಸ್ಟ್) ಸಹಯೋಗದೊಂದಿಗೆ ವಿಶ್ವವಿಖ್ಯಾತ ಯೋಗ ಗುರು ಬಾಬಾ ರಾಮದೇವ್ ಮಹಾರಾಜರ ಬೃಹತ್ ಯೋಗ ಶಿಬಿರ ವೊಂದನ್ನು ನ.16ರಿಂದ 20ರವರೆಗೆ ಒಟ್ಟು ಐದು ದಿನಗಳ ಕಾಲ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಆಯೋಜಿಸಿದೆ ಎಂದು ಪತಂಜಲಿ ಯೋಗ ಟ್ರಸ್ಟ್‌ನ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಶಿಬಿರದ ವಿವರಗಳನ್ನು ನೀಡಿ ಮಾತನಾಡಿದ ಆರ್ಯ, ಐದು ದಿನಗಳ ಕಾಲವೂ ಪ್ರತಿದಿನ ಮುಂಜಾನೆ 5 ರಿಂದ 7:30ರವರೆಗೆ ಸ್ವತಹ ಯೋಗಋಷಿ ರಾಮಲಾಲ್‌ರ ಉಪಸ್ಥಿತಿ ಯಲ್ಲೇ ಯೋಗ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಬಾಬಾ ರಾಮದೇವ್‌ರಿಂದ ಸ್ಥಾಪನೆಯಾದ ಹರಿದ್ವಾರದ ಪತಂಜಲಿ ಯೋಗ ಪೀಠ, ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂಸ್ಥೆಯಾ ಗಿದ್ದು, ಇದರ ಮೂಲಕ ಬಾಬಾ ಯೋಗವನ್ನು ವಿಶ್ವದಾದ್ಯಂತ ಪರಿಚಯಿಸು ತಿದ್ದಾರೆ. ಈವರೆಗೆ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಯೋಗವನ್ನು ಇವರಿಂದ ಕಲಿತಿದ್ದಾರೆ ಎಂದರು.

ಉಡುಪಿಯಲ್ಲಿ ಐದು ದಿನಗಳ ಯೋಗ ಶಿಬಿರ ನಡೆಯುವುದಕ್ಕೆ ಪೂರ್ವಭಾವಿಯಾಗಿ ಕರ್ನಾಟಕದ ಪತಂಜಲಿ ಯೋಗ ಸಮಿತಿಯ ಎಲ್ಲಾ ಜಿಲ್ಲೆಗಳ 300 ಮಂದಿ ಯೋಗ ಶಿಕ್ಷಕರು ಉಡುಪಿಗೆ ಆಗಮಿಸಲಿದ್ದು, ಇವರಲ್ಲಿ 50 ಮಂದಿ ಉಡುಪಿ, ಕಾರ್ಕಳ, ಬೈಂದೂರುಗಳಿಗೆ ತೆರಳಿ ಅಲ್ಲಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಶಿಬಿರದ ಕುರಿತು ಮಾಹಿತಿ ಹಾಗೂ ಯೋಗ ಶಿಕ್ಷಣವನ್ನು ನೀಡುತಿದ್ದಾರೆ ಎಂದರು.

ಐದು ದಿನಗಳ ಯೋಗ ಶಿಬಿರದಲ್ಲಿ ಬಾಬಾ ರಾಮದೇವ್ ಉಪಸ್ಥಿತಿಯಲ್ಲಿ ಯೋಗಾಭ್ಯಾಸ ನಡೆಯಲಿದ್ದು, ಯೋಗ ಶಿಕ್ಷಕರು ಶಿಬಿರಾರ್ಥಿಗಳಿಗೆ ಕನ್ನಡದಲ್ಲಿ ಯೋಗ ಭಂಗಿಗಳ ಮಾರ್ಗದರ್ಶನ, ಮಾಹಿತಿ ನೀಡಲಿದ್ದಾರೆ ಎಂದರು.

ಉಡುಪಿಯಲ್ಲಿ ಯೋಗಕೇಂದ್ರ: ಮುಂದೆ ಉಡುಪಿಯಲ್ಲಿ ಪತಂಜಲಿ ನಿರಂತರ ಉಚಿತ ಯೋಗ ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಯೋಗಮಯ ಉಡುಪಿ ಅಭಿಯಾನದ ಅಡಿಯಲ್ಲಿ ವಿರಾಟ್ ಉಚಿತ ಯೋಗ ಶಿಬಿರ, ಯೋಗ ಶಿಕ್ಷಕರ ತರಬೇತಿ ಶಿಬಿರ, ಬೊಜ್ಜು ನಿವಾರಣಾ ಶಿಬಿರ, ಮಧುಮೇಹ ನಿವಾರಣಾ ಶಿಬಿರಗಳನ್ನು ನಗರಗಳ ವಾರ್ಡ್ ಮಟ್ಟ ಹಾಗೂ ಗ್ರಾಮ ಮಟ್ಟದಲ್ಲಿ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಪಲಿಮಾರು ಮಠದ ಪ್ರತಿನಿಧಿ ಪ್ರಹ್ಲಾದ ಆಚಾರ್ಯ, ಬಾಲಾಜಿ ರಾಘವೇಂದ್ರ ಆಚಾರ್ಯ, ಶಿಬಿರ ಪ್ರಚಾರಕ ಡಾ.ತನ್ಮಯ್ ಗೋಸ್ವಾಮಿ, ಪತಂಜಲಿ ಯೋಗ ಪೀಠದ ರಾಜ್ಯ ಪ್ರತಿನಿಧಿಗಳಾದ ಸುಜಾತ ಮಾರ್ಲ, ಶಿವರಾಮ ಶೆಟ್ಟಿ, ಕಿರಣ್‌ಕುಮಾರ್, ಅಜಿತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News