ದೃಷ್ಟಿ ಹೀನ ಸಂತ್ರಸ್ತರಿಗೆ 3 ಲಕ್ಷ ರೂ. ಪರಿಹಾರ: ಡಿಸಿಎಂ ಅಶ್ವತ್‌ ನಾರಾಯಣ

Update: 2019-11-04 15:56 GMT

ಬೆಂಗಳೂರು, ನ.4: ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ವೇಳೆ ಆದ ತಪ್ಪಿನಿಂದ ಕಣ್ಣು ಕಳೆದುಕೊಂಡವರಿಗೆ ರಾಜ್ಯ ಸರಕಾರ 3 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ಹೇಳಿದರು.

ಸೋಮವಾರ ಮಿಂಟೋ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ, ಅವರ ನೋವು ಅರ್ಥ ಮಾಡಿಕೊಂಡಿರುವ ರಾಜ್ಯ ಸರಕಾರ ಪರಿಹಾರ ಘೋಷಿಸಿದೆ ಎಂದರು.

ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ ಸರಕಾರದಿಂದ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ಅದೇ ರೀತಿ, ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ತಪ್ಪಿತಸ್ಥ ಕಂಪೆನಿಯಿಂದ ಆ ಹಣ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.

ದೃಷ್ಟಿ ಕಳೆದುಕೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವುದು ಸರಕಾರದ ಜವಾಬ್ದಾರಿ. ಈ ವಿಷಯದಲ್ಲಿ ರಾಜಿ ಇಲ್ಲ ಎಂದ ಅವರು, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಬಳಿಕ ದೃಷ್ಟಿ ಕಳೆದುಕೊಂಡಿರುವ ಪ್ರಕರಣ ಸಂಬಂಧ ಜಯದೇವ ಹೃದ್ರೋಗ ಸಂಸ್ಥೆಯ ಡಾ. ರವೀಂದ್ರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ಸಮಿತಿಯಿಂದ ಮಾಹಿತಿ ಪಡೆಯಲಾಗಿದೆ. ಸಂಬಂಧಪಟ್ಟವರ ವಿಚಾರಣೆಯೂ ಆಗಿದೆ. ಔಷಧ ಪೂರೈಸಿದ ಔಷಧ ತಯಾರಿಕಾ ಸಂಸ್ಥೆಯಿಂದ ತಪ್ಪಾಗಿದೆ ಎಂಬ ಮಾಹಿತಿ ಬಂದಿದೆ. ಹಾಗಾಗಿ, ಸಂಬಂಧಪಟ್ಟ ಇಲಾಖೆಗೆ ನೋಟಿಸ್ ನೀಡಲಾಗಿದೆ. ಕಂಪೆನಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು, ಎಂದು ಅವರು ಮಾಹಿತಿ ನೀಡಿದರು.

ವೈದ್ಯರಿಗೆ ಭದ್ರತೆ

ಸಂತ್ರಸ್ತರ ಪರ ಪ್ರತಿಭಟನೆ ವೇಳೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಆಡಳಿತ ಮಂಡಳಿಯಿಂದ ಆದ ತಪ್ಪಿಗೆ ವೈದ್ಯ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ಸರಿಯಲ್ಲ. ಅವರಿಗೆ ಹೆಚ್ಚಿನ ರಕ್ಷಣೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆ ನಿಯೋಜಿ ಸಲಾಗುವುದು ಎಂದು ಡಾ.ಅಶ್ವತ್ ನಾರಾಯಣ ಭರವಸೆ ನೀಡಿದರು.

ಕರವೇ ವಿರುದ್ಧ ಎಫ್‌ಐಆರ್?

ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರ ಮೇಲೆ ಹಲ್ಲೆ ಆರೋಪ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ 10ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಇಲ್ಲಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

ಸಂಧಾನ ಸಭೆ ವಿಫಲ?

ರಾಜ್ಯೋತ್ಸವ ದಿನದಂದು ಮಿಂಟೋ ಆಸ್ಪತ್ರೆಗೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ಪ್ರತಿಭಟನೆ ಕೈಬಿಡುವಂತೆ ಕೋರಿ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ನಡೆಸಲಾಗಿದ್ದ ಸಂಧಾನ ಸಭೆ ವಿಫಲವಾಗಿದೆ ಎನ್ನಲಾಗಿದ್ದು, ಮಿಂಟೋ ಸೇರಿದಂತೆ ವಿವಿಧ ಆಸ್ಪತ್ರೆಯ ಕಿರಿಯ ವೈದ್ಯರು ನಾಳೆ(ನ.5) ಪ್ರತಿಭಟನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News