ಕೋಟ ಜೋಡಿ ಕೊಲೆ ಪ್ರಕರಣ: ಐವರು ಆರೋಪಿಗಳಿಗೆ ಜಾಮೀನು
Update: 2019-11-04 16:38 GMT
ಕುಂದಾಪುರ, ನ.4: ಕೋಟ ಸಮೀಪದ ಮಣೂರಿನಲ್ಲಿ ಜ.26 ರಂದು ನಡೆದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದ ಐವರು ಆರೋಪಿಗಳಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಪೊಲೀಸ್ ಸಿಬಂದಿಗಳಾದ ವೀರೇಂದ್ರ ಆಚಾರ್ಯ, ಪವನ್ ಅಮೀನ್, ಕಾಲೆಜು ವಿದ್ಯಾರ್ಥಿ ಪ್ರಣವ್ ರಾವ್, ಸಂತೋಷ್ ಕುಂದರ್, ಮಹಮ್ಮದ್ ತೌಫಿಕ್ ಜಾಮೀನು ಪಡೆದ ಆರೋಪಿಗಳು. ಆರೋಪಿಗಳ ಪರವಾಗಿ ನ್ಯಾಯ ವಾದಿಗಳಾದ ರವಿಕಿರಣ್ ಮುರ್ಡೇಶ್ವರ, ಶಾಂತರಾಮ ಶೆಟ್ಟಿ, ಹಂಝತ್ ಹೆಜಮಾಡಿ ಕೋಡಿ ವಾದಿಸಿದ್ದರು.
ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 18 ಮಂದಿ ಆರೋಪಿ ಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಈ ಐವರು ಸಹಿತ ಒಟ್ಟು 7 ಮಂದಿ ಆರೋಪಿಗಳಿಗೆ ಜಾಮೀನು ದೊರೆತಿದೆ. ಇದಕ್ಕೂ ಮೊದಲು ಆರೋಪಿಗಳಾದ ರಾಘವೇಂದ್ರ ಕಾಂಚನ್ ಹಾಗೂ ರತೀಶ್ ಕರ್ಕೆರ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು.