ಕುಂದಾಪುರ: ಮರಳುಗಾರಿಕೆ ಆರಂಭಿಸುವಂತೆ ಆಗ್ರಹಿಸಿ ಕಾರ್ಮಿಕರಿಂದ ಪಾದಯಾತ್ರೆ

Update: 2019-11-04 16:54 GMT

 ಕುಂದಾಪುರ, ನ.4: ಕುಂದಾಪುರ ಹಾಗೂ ಬೈಂದೂರಿನ ಎಲ್ಲ ನದಿಗಳಲ್ಲಿ ಮರಳುಗಾರಿಕೆ ಆರಂಭಿಸಬೇಕು ಮತ್ತು ಈ ವಿಚಾರದಲ್ಲಿ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಸೋಮವಾರ ಕುಂದಾಪುರದಿಂದ ಹಾಲಾಡಿಯಲ್ಲಿರುವ ಕುಂದಾಪುರ ಶಾಸಕರ ಮನೆಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆ ಕುಂದಾಪುರದ ವಿನಾಯಕ ಥಿಯೇಟರ್ ಎದುರಿನಿಂದ ಪಾದಯಾತ್ರೆ ಆರಂಭಗೊಂಡಿದ್ದು, ದಾರಿಯುದ್ದಕ್ಕೂ ವಿವಿಧ ಗ್ರಾಮ ಘಟಕಗಳ ಕಾರ್ಯ ಕರ್ತರು ಪಾದಯಾತ್ರೆಯನ್ನು ಸೇರಿಕೊಂಡರು. ಸಂಜೆ ವೇಳೆ ಸಾವಿರಾರು ಸಂಖ್ಯೆ ಯಲ್ಲಿದ್ದ ಕಾರ್ಮಿಕರ ಪಾದಯಾತ್ರೆ 30 ಕಿ.ಮೀ. ದೂರದಲ್ಲಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆ ತಲುಪಿತು.

ಪಾದಯಾತ್ರೆಯ ಮೂಲಕ ಸಾಗಿಬಂದ ಕಾರ್ಮಿಕರನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬರ ಮಾಡಿಕೊಂಡರು. ಅವರಿಗೆ ಬೆಲ್ಲ ನೀರು ಹಾಗೂ ಲಘು ಉಪಹಾರವನ್ನು ನೀಡಲಾಯಿತು. ಅಲ್ಲದೇ ಕಾರ್ಮಿಕರಿಗಾಗಿಯೇ ಶಾಸಕರ ಮನೆಯ ಎದುರು ಬೃಹತ್ ಆಗಿ ಪೆಂಡಾಲ್ ಅನ್ನು ಅಳವಡಿಸಿ ಆಸನದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ಧರಣಿ ನಡೆಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅ.15ರೊಳಗೆ ಎಲ್ಲಾ ಕಡೆಗಳಲ್ಲೂ ಮರಳು ತೆಗೆಯುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಮ್ಮಲ್ಲಿ ಈವರೆಗೆ ಮರಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಗಿಲ್ಲ. ಇದರಿಂದ ಕೆಲಸವಿಲ್ಲದೆ ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಿದೆ ಎಂದು ಆರೋಪಿಸಿದರು.

ಬಳಿಕ ಮಾತನಾಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮರಳಿನ ಪ್ರಮಾಣವನ್ನು ಹೆಚ್ಚಿಸಿ ಅರ್ಧದಲ್ಲಿ ನಿಂತಿರುವ ಕಾಮಗಾರಿಗಳಿಗೆ ಕೂಡಲೇ ಮರಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಈ ಬಗ್ಗೆ ಹಿಂದಿನಿಂದಲೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕಾಗಿ ಸದನದಲ್ಲಿ ಸರಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತ ಬಂದಿದ್ದೇನೆ. ಮುಂದಿನ 10 ದಿನದೊಳಗೆ ಅವಶ್ಯವಿರುವ ಕಡೆಗಳಲ್ಲಿ ಬಳ್ಕೂರು ಹಾಗೂ ಮಾಬುಕಳದಿಂದ ಮರಳನ್ನು ಪೂರೈಸುವ ಕೆಲಸ ಮಾಡ ಲಾಗುವುದು ಎಂದು ಭರವಸೆ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ಯು.ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಎಚ್.ನರಸಿಂಹ, ಮಹಾಬಲ ವಡೇರಹೋಬಳಿ, ರಾಜು ಪಡುಕೋಣೆ, ತಾಲೂಕು ಮುಖಂಡರಾದ ಜಗದೀಶ್ ಆಚಾರ್ಯ, ಸಂತೋಷ ಹೆಮ್ಮಾಡಿ, ರಮೇಶ್ ಗುಲ್ವಾಡಿ, ಅರುಣ್ ಕುಮಾರ್ ಗಂಗೊಳ್ಳಿ, ವಿಜಯೇಂದ್ರ ಕೋಣಿ, ಚಿಕ್ಕ ಮೊಗವೀರ, ಸುಧಾಕರ ಕುಂಭಾಶಿ, ಪ್ರಶಾಂತ್ ಸಳ್ವಾಡಿ, ಶ್ರೀನಿವಾಸ ಪೂಜಾರಿ, ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News