ನ.6ಯಿಂದ ‘ಸಾಗರ ಕವಚ’ ಅಣುಕು ಕಾರ್ಯಾಚರಣೆ
ಉಡುಪಿ, ನ.4: ಭಾರತೀಯ ನೌಕಾಪಡೆ, ಭಾರತೀಯ ತಟ ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ, ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಬಂದರು ಮತ್ತು ಕೇಂದ್ರೀಯ ಇಡಂಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್, ಕಸ್ಟಮ್ಸ್ ಹಾಗೂ ಇತರ ಇಲಾಖೆಗಳು ಜಂಟಿಯಾಗಿ ‘ಸಾಗರ ಕವಚ- 2019’ ಅಣುಕು ಕಾರ್ಯಾ ಚರಣೆಯನ್ನು ನ.6 ಮತ್ತು 7ರಂದು ಬೆಳಗ್ಗೆ 6ಗಂಟೆಯಿಂದ ರಾತ್ರಿಯವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿವೆ.
ಈ ಅಣುಕು ಕಾರ್ಯಾಚರಣೆಯನ್ನು ನಗರ ಪ್ರದೇಶ, ಕರಾವಳಿ ತೀರ, ಮೀನುಗಾರಿಕಾ ಬಂದರು, ಹೆಚ್ಚು ಜನನಿಬಿಡ ಪ್ರದೇಶ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವ್ಯಾಪಾರ ಸಮುಚ್ಚಯ, ಪ್ರಮುಖ ದೇವಾಲಯಗಳು, ನಿರ್ಬಂಧಿತ ಕೈಗಾರಿಕಾ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಈ ಸಮಯದಲ್ಲಿ ಭಯೋತ್ಪಾದಕ ರಂತೆ ನಟಿಸಿ, ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ನಕಲಿ ಸ್ಫೋಟಕಗಳನ್ನು ಇರಿಸುವುದು ಮತ್ತು ಅವುಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯಲಿದೆ.
ಈ ಸಮಯದಲ್ಲಿ ಸಾರ್ವಜನಿಕರು ಗಾಬರಿಯಾಗದೆ, ಇಂತಹ ಗುಮಾನಿ ವ್ಯಕ್ತಿಗಳು ಅಥವಾ ನಕಲಿ ಸ್ಪೋಟಕಗಳು ಕಂಡು ಬಂದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ (0820 -2526444) ಮಾಹಿತಿ ನೀಡ ಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.