ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ 82 ಹುದ್ದೆಗಳ ಪೈಕಿ 47 ಖಾಲಿ!

Update: 2019-11-05 07:31 GMT

# ಒತ್ತಡದಿಂದಲೇ ಕಾರ್ಯನಿರ್ವಹಿಸುತ್ತಿರುವ ಹಾಲಿ ವೈದ್ಯರು 

# ಆರೋಗ್ಯ ಸೌಲಭ್ಯದಿಂದ ವಂಚಿತ ಬಡಜನತೆಯ ಕೊರಗು

ಬಂಟ್ವಾಳ, ನ.4: ದ.ಕ. ಜಿಲ್ಲೆಯ ಮೂರನೇ ಅತೀ ದೊಡ್ಡ ಮತ್ತು ಸಕಲ ವ್ಯವಸ್ಥೆಗಳಿರುವ ಸರಕಾರಿ ಆಸ್ಪತ್ರೆ ಎನಿಸಿರುವ ಹಾಗೂ ಸೇವೆ ಪ್ರಮಾಣದಲ್ಲಿ ಲೋಕಾಯುಕ್ತರ ಮೆಚ್ಚುಗೆ ಗಳಿಸಿರುವ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಅತಿಯಾಗಿ ಕಾಡುತ್ತಿದೆ. ಇದರಿಂದ ಈ ಭಾಗದ ಬಡಜನತೆ ಆರೋಗ್ಯ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಆಸ್ಪತ್ರೆಯಿಂದ ವಿಮುಖರಾಗುವ ಆತಂಕ ತಲೆದೋರಿದೆ.

ಸುಮಾರು 6 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆಗಳಿದ್ದ ಹಳೆ ಸರಕಾರಿ ಆಸ್ಪತ್ರೆಯನ್ನು ವಾಜಿ ಸಚಿವ ಬಿ.ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಿಂದ ಮೆಲ್ದರ್ಜೆಗೇರಿಸಿದ 100 ಹಾಸಿಗಳ ನೂತನ ಆಸ್ಪತ್ರೆಯನ್ನು ಅಂದಿನ ಮುಖ್ಯಮಂತ್ರಿ ಅವರು ಉದ್ಘಾಟಿಸಿದ್ದರು. ಆದರೆ, ಆಸ್ಪತ್ರೆಯ ಮೆಲ್ದರ್ಜೆಗೇರಿ ಉತ್ತಮ ಸೌಲಭ್ಯಗಳಿದ್ದರೂ ಇಲ್ಲಿಗೆ ಮಂಜೂರಾದ ಶೇ. 50ಕ್ಕಿಂತಲೂ ಅಧಿಕ ಹುದ್ದೆಗಳು ಖಾಲಿಯಾಗಿದೆ. ವೈದ್ಯರು, ಸಿಬ್ಬಂದಿ ಕೊರತೆಯಿಂದ ಹಾಲಿ ಇರುವ ವೈದ್ಯ-ಸಿಬ್ಬಂದಿ ಒತ್ತಡದಿಂದಲೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಯಾವ ಹುದ್ದೆಗಳು ಭರ್ತಿ-ಖಾಲಿ?: ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹುದ್ದೆ ಭರ್ತಿಯಿದ್ದು, ಫಿಸಿಶಿಯನ್, ಮಕ್ಕಳ ತಜ್ಞ ಹಾಗೂ ಅರಿವಳಿಕೆ ತಜ್ಞರ ತಲಾ ಒಂದೊಂದು ಹುದ್ದೆಗಳಲ್ಲಿ ಮೂರು ಕೂಡ ಖಾಲಿ ಇದೆ. ಕೀಲು ಮೂಳೆ ತಜ್ಞರ ಒಂದು ಹುದ್ದೆ ಸದ್ಯಕ್ಕೆ ಭರ್ತಿಯಿದ್ದರೂ, ಈ ವೈದ್ಯರು ಇದೇ ತಿಂಗಳು ನಿವೃತ್ತರಾಗಲಿದ್ದಾರೆ.

ಅದೇ ರೀತಿ ಕಣ್ಣಿನ ತಜ್ಞರು, ಇಎನ್‌ಟಿ ತಜ್ಞರು, ಜನರಲ್ ಸರ್ಜನ್, ಸ್ತ್ರಿರೋಗ ತಜ್ಞರು, ಹಿರಿಯ ದಂತ ಆರೋಗ್ಯಾಧಿಕಾರಿ, ಎಸ್‌ಎಂಒ, ಸಹಾಯಕ ಆಡಳಿತಾಧಿಕಾರಿ, ಶುಶ್ರೂಷಕ ಅಧೀಕ್ಷಕರು ದರ್ಜೆ-2ರ ತಲಾ ಒಂದೊಂದು ಹುದ್ದೆಗಳಲ್ಲಿ ಎಲ್ಲವೂ ಭರ್ತಿಯಾಗಿದೆ. ಕಚೇರಿ ಅಧೀಕ್ಷಕರು ಹಾಗೂ ಹಿರಿಯ ಪ್ರಯೋಗಶಾಲಾ ತಂತ್ರಜ್ಞ, ಹಿರಿಯ ಫಾರ್ಮಸಿಸ್ಟ್, ನೇತ್ರಾಧಿಕಾರಿ ತಲಾ ಒಂದೊಂದು ಹುದ್ದೆಗಳಲ್ಲಿ ನಾಲ್ಕು ಕೂಡ ಖಾಲಿ ಇದೆ.

ಆಸ್ಪತ್ರೆಗೆ ಮಂಜೂರಾಗಿರುವ 20 ಶುಶ್ರೂಷಕರ ಹುದ್ದೆಗಳಲ್ಲಿ ಎಲ್ಲವೂ ಭರ್ತಿ ಇದೆ. ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಒಂದು ಹುದ್ದೆ ಭರ್ತಿ ಇದೆ. ಕಿರಿಯ ಫಾರ್ಮಸಿಸ್ಟ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ತಲಾ ಎರಡೆರಡು ಹುದ್ದೆಗಳಲ್ಲಿ ಎಲ್ಲವೂ ಖಾಲಿ ಇದೆ. ಎಕ್ಸ್‌ರೇ ತಂತ್ರಜ್ಞರು ಹಾಗೂ ವಾಹನ ಚಾಲಕರ ತಲಾ ಎರಡೆರಡು ಹುದ್ದೆಗಳಲ್ಲಿ ಒಂದೊಂದು ಮಾತ್ರ ಭರ್ತಿಯಾಗಿದೆ. ಕ್ಲರ್ಕ್ ಕಂ ಟೈಪಿಸ್ಟ್ ಹಾಗೂ ಅಡುಗೆಯವರ ತಲಾ ಒಂದೊಂದು ಹುದ್ದೆಗಳಲ್ಲಿ ಎರಡೂ ಖಾಲಿ ಇದೆ. ಗ್ರೂಪ್ ಡಿಯ 32 ಹುದ್ದೆಗಳಲ್ಲಿ 30 ಖಾಲಿಯಿದ್ದು, ಇದರ ಒತ್ತಡ ನಿರ್ವಹಣೆಗೆ 15 ಮಂದಿ ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಮಾಣಿಕ ಸೇವೆ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಾಲಿ ವೈದ್ಯರು, ಸಿಬ್ಬಂದಿಯ ಕರ್ತವ್ಯದ ಬಗ್ಗೆಯೂ ಆರೋಪಗಳಿಲ್ಲ. ಆದರೂ, ವೈದ್ಯರ ಮತ್ತು ಸಿಬ್ಬಂದಿ ಕೊರತೆಯಿಂದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಆಸ್ಪತ್ರೆಯವರ ಕೊರಗಾದರೆ, ಆಸ್ಪತ್ರೆ ಇದ್ದರೂ ವೈದ್ಯ, ಸಿಬ್ಬಂದಿ ಕೊರತೆಯಿಂದ ಬಡವರು ಬವಣೆ ಪಡುವಂತಾಗಿದೆ.


47 ಹುದ್ದೆಗಳು ಖಾಲಿ
ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಮಂಜೂರಾಗಿರುವ ಒಟ್ಟು 82 ಹುದ್ದೆಗಳಲ್ಲಿ ಹಾಲಿ 35 ಮಂದಿ ಕಾರ್ಯನಿರ್ವಹಿಸುತ್ತಿದ್ದು, 47 ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ವರದಿಯ ಪ್ರಕಾರ ಆಸ್ಪತ್ರೆಗೆ ಮಾಸಿಕ 17 ಸಾವಿರ ಹೊರರೋಗಿಗಳು ಹಾಗೂ ಒಂದು ಸಾವಿರ ಒಳರೋಗಿಗಳು ಸೇವೆಯನ್ನು ಪಡೆದುಕೊಳ್ಳುತ್ತಿದ್ದು, ಇನ್ನಷ್ಟು ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಬೇಕಿದೆ.


ಅಗತ್ಯ ಬೇಕಾಗಿರುವ ಸಾಧನ-ಉಪಕರಣಗಳು
ತಜ್ಞ ವೈದ್ಯರ ಸೇವೆ, ಹೆರಿಗೆ ಸೌಲಭ್ಯ, ತುರ್ತು ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಸೌಲಭ್ಯವಿದ್ದು, ಡಯಾಲಿಸಿಸ್ ಘಟಕವು ಕಾರ್ಯನಿರ್ವಹಿಸುತ್ತದೆ. ಆದರೆ, ಪ್ರಸ್ತುತವಾಗಿ ಪ್ರಯೋಗಶಾಲಾ ವಿಭಾಗ ಮತ್ತು ತಜ್ಞರು, ಶವ ಶೈತ್ಯಾಗಾರ, ಲಾಂಡ್ರಿ ವಿಭಾಗ, 75ಕೆವಿಎ ಜನರೇಟರ್ ರಕ್ತ ಸಂಗ್ರಹ ಘಟಕ ಹಾಗೂ ಉಪಕರಣಗಳ ಆವಶ್ಯಕತೆ ಇದೆ.


ಅ.30ರಂದು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಜರಗಿದ ಆ್ಯಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಹುದ್ದೆಗಳ ಭರ್ತಿಯ ಕುರಿತು ಸಚಿವರಿಗೆ ಮನವಿ ಮಾಡಲಾಗಿದೆ. ಪ್ರಸ್ತುತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ಲಭ್ಯವಾಗುತ್ತಿದ್ದು, ಶೀಘ್ರದಲ್ಲಿ ಸಿಬ್ಬಂದಿ ಭರ್ತಿಯ ಜೊತೆಗೆ ಇತರ ಸೌಲಭ್ಯಗಳನ್ನೂ ಒದಗಿಸುವ ಕುರಿತು ಕ್ರಮಕೈಗೊಳ್ಳಲಾಗುವುದು. ಈ ಮೂಲಕ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಂತೆ ಇಲ್ಲಿನ ಆಸ್ಪತ್ರೆಯು ಕಾರ್ಯನಿರ್ವಹಿಸಲಿದೆ.

-ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಶಾಸಕರು

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News