ಮಂಗಳೂರು ಮನಪಾ ಚುನಾವಣೆ: ನ.6ರಂದು ಸಿದ್ದರಾಮಯ್ಯರಿಂದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

Update: 2019-11-05 09:53 GMT

ಮಂಗಳೂರು, ನ.5: ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನ.6ರಂದು ಬಿಡುಗಡೆಗೊಳಿಸಲಾಗುವುದು. ಮಾಜಿ ಮುಖ್ಯಮಂತ್ರಿ, ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಸಂಜೆ 5ಕ್ಕೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

 *ಮನಪಾ ನೀರಿನ ದರ ಏರಿಕೆಗೆ ಬಿಜೆಪಿ ಕಾರಣ:
ಕಾಂಗ್ರೆಸ್ ಮನಪಾದಲ್ಲಿ ಆಡಳಿತ ಇರುವ ಸಂದರ್ಭದಲ್ಲಿ ಮನೆ ಬಳಕೆ ನೀರಿನ ದರ ಏರಿಸಿಲ್ಲ. ಮನಪಾದಲ್ಲಿ ಆಡಳಿತಾಧಿಕಾರಿ ಇದ್ದ ಅವಧಿಯಲ್ಲಿ ಈ ಏರಿಕೆ ಆಗಿದೆ. ವಿಧಾನಸಭಾ ಚುನಾ ವಣೆಯಲ್ಲಿ ಜಯ ಗಳಿಸಿದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ನೀರಿನ ದರ ಏರಿಕೆ ಮಾಡದಂತೆ ಆಡಳಿತಾಧಿಕಾರಿಗೆ ಸೂಚನೆ ನೀಡಬಹುದಿತ್ತು. ಆದರೆ ಆ ಕೆಲಸ ಮಾಡದೆ ಇದೀಗ ಕಾಂಗ್ರೆಸ್ ಮೇಲೆ ವ್ಯರ್ಥ ಆರೋಪ ಮಾಡಲಾಗುತ್ತಿದೆ ಎಂದು ಐವನ್ ಹೇಳಿದ್ದಾರೆ.

*ಬಿಎಸ್ ವೈ ಆಡಿಯೋದಿಂದ ಬಿಜೆಪಿ ನಿಜ ಬಣ್ಣ ಬಯಲು
ಬಿ.ಎಸ್.ಯಡಿಯೂರಪ್ಪ ಪಕ್ಷದ ಮುಖಂಡರ ಸಮಾಲೋಚನೆಯೊಂದರಲ್ಲಿ ನೀಡಿರುವ ಹೇಳಿಕೆ ಆಪರೇಷನ್ ಕಮಲ ನಡೆದಿದೆ ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅನರ್ಹ ಶಾಸಕರ ರಾಜೀನಾಮೆಗೆ ನಿಜವಾದ ಕಾರಣ ಬಯಲಾಗಿದೆ. ಇದರೊಂದಿಗೆ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ . ಶಾಸಕರ ಅನರ್ಹತೆಗೆ ಸಂಬಂಧಿಸಿ ಸ್ಪೀಕರ್ ನೀಡಿರುವ ತೀರ್ಪುಗೆ ದಾಖಲೆ ದೊರೆತಂತಾಗಿದೆ. ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಸಂಜೀವ, ಲಾವಣ್ಯಾ ಬಲ್ಲಾಳ್, ಹಬೀಬುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News