ದೇಶದ ಆರ್ಥಿಕ ಕುಸಿತಕ್ಕೆ ಬಿಜೆಪಿಯ ಅಸಮರ್ಪಕ ಆಡಳಿತ ಕಾರಣ: ಜೈವೀರ್ ಶೆರ್ಗಿಲ್
ಮಂಗಳೂರು, ನ.5: ದೇಶದ ಆರ್ಥಿಕ ಕುಸಿತಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಅಸಮರ್ಪಕ ರೀತಿ ಆಡಳಿತ ಕಾರಣ ಎಂದು ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಮನಪಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ನಗರಕ್ಕೆ ಭೇಟಿ ನೀಡಿರುವ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಆರ್ಥಿಕ ಕುಸಿತ ಉಂಟಾಗಿದ್ದರೂ ಕೇಂದ್ರ ಸರಕಾರ ಪುರಾಣದಲ್ಲಿ ಬರುವ ಕುಂಭ ಕರ್ಣನ ರೀತಿಯಲ್ಲಿ ನಿದ್ರೆ ಮಾಡುತ್ತಿದೆ.ಅದನ್ನು ಎಚ್ಚರಿಸಲು ಕಾಂಗ್ರೆಸ್ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ದೇಶದಲ್ಲಿ ಈ ರೀತಿಯ ಆರ್ಥಿಕ ವಿಪತ್ತು ಸಂಭವಿಸಲು ಜಾಗತಿಕ ಆರ್ಥಿಕ ಕುಸಿತ ಕಾರಣ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಅಸಮರ್ಪಕ ಆಡಳಿತ ಮಾತ್ರವಲ್ಲ, ಬಿಜೆಪಿ ನಡೆಸುತ್ತಿರುವ ಹೆಡ್‌ಲೈನ್ ಮ್ಯಾನೇಜ್ ಮೆಂಟ್ ಈ ಕುಸಿತಕ್ಕೆ ಕಾರಣ ಎಂದು ಜೈವೀರ್‌ಹೇಳಿದರು.
ದೇಶದಲ್ಲಿ ನಿರುದ್ಯೋಗ ಗಣನೀಯವಾಗಿ ಹೆಚ್ಚಿಗಿದೆ. ಜಾಗತಿಕವಾಗಿ ನಿರುದ್ಯೋಗದ ಪ್ರಮಾಣ ಶೇ. 4.1 ಇದ್ದರೆ, ಭಾರತದಲ್ಲಿ ಈ ಪ್ರಮಾಣ ದುಪ್ಪಟ್ಟಾಗಿದೆ. 2019ರಲ್ಲಿ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಶೇ.8.5ಕ್ಕೆ ಏರಿಕೆಯಾಗಿದೆ ಎಂದರು. ಬಿಜೆಪಿಯಲ್ಲಿ ಉದ್ಯಮವನ್ನು ಲಾಭದಾಯಕವಾಗಿಸುವ ಯೋಜನೆಗಳಿಲ್ಲವೆ? ಇದೆ. ಆದರೆ ಅಂತಹ ಯೋಜನೆಗಳು ಬಿಜೆಪಿ ಯ ಕೆಲವು ಮುಖಂಡರಿಗಾಗಿ, ಅವರ ಸಂಪತ್ತು ವೃದ್ಧಿಸಲು ಮಾತ್ರ ಬಳಕೆಯಾಗುತ್ತಿದೆ ಎಂದು ಟೀಕಿಸಿದರು.
ದೇಶದಲ್ಲಿ ಆಭಿವೃದ್ಧಿ ಸೂಚ್ಯಂಕ ಕಳೆದ 6 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜನಸಾಮಾನ್ಯರ ಉಳಿತಾಯದ ಪ್ರಮಾಣವು ಕಳೆದ 20 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ ಜಾಗತಿಕ ಆರ್ಥಿಕ ಕುಸಿತ ಉಂಟಾಗಿತ್ತು. ಆದರೆ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ಅವರು ಆಡಳಿತ ನಡೆಸಿದ್ದರು ಎಂದವರು ವಿವರಿಸಿದರು.
ಆಡಳಿತಕ್ಕೇರಿದರೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಇದೀಗ ರೈತರ ಆದಾಯ ಶೂನ್ಯ ಮಟ್ಟಕ್ಕೆ ತಲುಪಿದೆ, ರೈತರ ಆತ್ಮ ಹತ್ಯೆ ಪ್ರಮಾಣ ಏರಿಕೆಯಾಗಿದೆ. ಬಿಜೆಪಿ ಭಾರತದ ಆರ್ಥಿಕ ವ್ಯವಸ್ಥೆಯ ಖಳನಾಯಕನಾಗಿ ವರ್ತಿಸುತ್ತಿದೆ. ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಸಮರ್ಪಕ ಆರ್ಥಿಕ ವ್ಯವಸ್ಥೆಯ ವ್ಯವಸ್ಥಾಪಕಿಯಾಗಿದ್ದಾರೆ ಎಂದು ಜೈವೀರ್ ಟೀಕಿಸಿದರು.
*ಶ್ವೇತ ಪತ್ರ ಹೊರಡಿಸಲಿ:
ದೇಶದಲ್ಲಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರಕಾರ ತಕ್ಷಣ ಶ್ವೇತ ಪತ್ರವನ್ನು ಹೊರಡಿಸಬೇಕು. ದೇಶದಲ್ಲಿ ಹಮ್ಮಿ ಕೊಳ್ಳುತ್ತಿರುವ ಆರ್ಥಿಕ ಅಬಿವೃದ್ಧಿ ಯೋಜನೆಗಳ ಏಕೆ ಯಶಸ್ವಿಯಾಗುತ್ತಿಲ್ಲ ಎನ್ನುವುದನ್ನು ಜನತೆಗೆ ಹೇಳಬೇಕಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯ ಪರಿಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರತಿನಿಧಿ ಸಂಜೀವ್ ಸಿಂಗ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಇತರ ಕಾಂಗ್ರೆಸ್ ಪ್ರತಿನಿಧಿಗಳಾದ ಶಾಹುಲ್ ಹಮೀದ್, ನಿತ್ಯಾನಂದ ಶೆಟ್ಟಿ, ಲಾವಣ್ಯಾ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.