ವಿಶೇಷ ಶಾಲಾ ಶಿಕ್ಷಕ-ಶಿಕ್ಷಕೇತರರ ವೇತನ ಪರಿಷ್ಕರಣೆಗೆ ಆಗ್ರಹಿಸಿ ಡಿಸಿಗೆ ಮನವಿ

Update: 2019-11-05 14:41 GMT

ಉಡುಪಿ, ನ.5: ವಿಶೇಷ ಮಕ್ಕಳ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ವೇತನವನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದಿಂದ ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರಸ್ತುತ ಕೇವಲ 13,500 ರೂ. ಗೌರವಧನ ದೊರೆಯುತ್ತಿದೆ. ಇದರಿಂದ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ಆದುದರಿಂದ ಗೌರವಧನವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರಕಾರವನ್ನು ಮನವಿಯಲ್ಲಿ ಆಗ್ರಹಿಸಲಾಯಿತು.

2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಶಾಲೆಗಳಿಗೆ ವೇತನ ಅನುದಾನ ನೀಡುವುದನ್ನು ಆರಂಭಿಸಿದ್ದರು. ಆದರೆ ನಂತರ ಸರಕಾರ ಅದನ್ನು ಪರಿಷ್ಕರಣೆ ಮಾಡಿಲ್ಲ. ಆದುರಿಂದ ಈ ಬಾರಿ ವೇತನ ಪರಿಷ್ಕರಿಸದಿದ್ದಲ್ಲಿ ಡಿ.3ರಂದು ನಡೆಯುವ ವಿಶ್ವ ಅಂಗವಿಕಲರ ದಿನಾಚರಣೆ ಯನ್ನು ಬಹಿಷ್ಕರಿಸಿ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

2010-11ರಲ್ಲಿ ಜಾರಿಗೆ ಬಂದ ಶಿಶಿ ಕೇಂದ್ರೀಕೃತ ಸಹಾಯಧನ ಯೋಜನೆ ಯಡಿ ರಾಜ್ಯದಲ್ಲಿ ಸುಮಾರು 136 ಸಂಸ್ಥೆಗಳು ಅನುದಾನ ಪಡೆಯುತ್ತಿವೆ. ಆದರೆ ಅವುಗಳಲ್ಲಿ ಕೆಲಸ ಮಾಡುವ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಕೇಂದ್ರ ಸರಕಾರದ ನಿಯಮಗಳಂತೆ ಕನಿಷ್ಠ ವೇತನ ಕೂಡ ಪಡೆಯುತ್ತಿಲ್ಲ. ಹಿರಿತನಕ್ಕೂ ಮಾನ್ಯತೆ ಇಲ್ಲ. ಯಾವುದೇ ರೀತಿಯ ಸೇವಾ ಅಥವಾ ಅರ್ಥಿಕ ಭದ್ರತೆಯೂ ಇಲ್ಲದೇ ಶಿಕ್ಷಕರು- ಶಿಕ್ಷಕೇತರ ಸಿಬ್ಬಂದಿಗಳು ಕಂಗಲಾಗಿದ್ದಾರೆ ಎದು ಮನವಿಯಲ್ಲಿ ದೂರಲಾಗಿದೆ.

ಬುದ್ಧಿಮಾಂದ್ಯತೆ, ಮೆದುಳಿನ ಪಾರ್ಶ್ವ ಬೆಳವಣಿಗೆ, ಆಟಿಸಂ ಹಾಗೂ ಬಹು ವಿಧದ ನ್ಯೂನತೆ ಹೊಂದಿರುವ 25ವರ್ಷ ಮೇಲ್ಪಟ್ಟವರಿಗೆ ಜೀವನಕ್ಕೆ ಅನುಕೂಲ ವಾಗುವಂತೆ ಸರಕಾರ ಯಾವುದೇ ತರಬೇತಿಯಾಗಲಿ, ಪುನರ್ವಸತಿಯಾಗಲಿ ಸಂಬಂಧಿತ ಇಲಾಖೆಗಳು ನೀಡುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ರಾಜ್ಯಾಧ್ಯಕ್ಷೆ ಡಾ.ಕಾಂತಿ ಹರೀಶ್, ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ರಾಜ್ಯ ಪದಾಧಿಕಾರಿಗಳಾದ ರವೀಂದ್ರ, ಉಡುಪಿ ಜಿಲ್ಲಾ ಕಾರ್ಯದರ್ಶಿ ಜಯ ವಿಜಯ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯದ ಒಟ್ಟು 20 ಜಿಲ್ಲೆಗಳಲ್ಲಿರುವ ವಿಶೇಷ ಶಾಲಾ ಶಿಕ್ಷಕರು ಏಕಕಾಲದಲ್ಲಿ ಈ ಮನವಿಯನ್ನು ಅಲ್ಲಿನ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News