ಮಾಣಿ: ದ.ಕ. ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವದ ಉದ್ಘಾಟನೆ

Update: 2019-11-05 14:56 GMT

ಬಂಟ್ವಾಳ, ನ.5: ಪ್ರತಿಭಾ ಕಾರಂಜಿಗಳಿಂದ ಹುದುಗಿರುವ ಪ್ರತಿಭೆಗಳ ಅನಾವರಣದ ಜೊತೆಗೆ ಮಕ್ಕಳಲ್ಲಿ ಹುರುಪು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇದರ ಸಹಯೋಗದಲ್ಲಿ ಮಂಗಳವಾರ ಆರಂಭಗೊಂಡ ಎರಡು ದಿನಗಳ ದ.ಕ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ‘ಪ್ರತಿಭಾ ಕಲರವ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ನಿಜವಾದ ಗೌರವ ಸಲ್ಲಿಕೆಯಾದಂತೆ ಎಂದವರು ಆಶಯ ವ್ಯಕ್ತಪಡಿಸಿದರು

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳ ಸಾಂಸ್ಕೃತಿಕ ಹಬ್ಬವಾಗಿದ್ದು, ಉತ್ಸಾಹದ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.

ದ.ಕ.ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಮಂಜುಳಾ ಮಾವೆ, ಮಮತಾ ಗಟ್ಟಿ, ಕಮಲಾಕ್ಷಿ ಪೂಜಾರಿ, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಾಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ್ ಶೆಟ್ಟಿ, ಮಾಣಿ ಬಾಲವಿಕಾಸ ಟ್ರಸ್ಟ್‌ನ ಅಧ್ಯಕ್ಷ ಬಿ.ಎಸ್.ನಾಯ್ಕ್, ಕಾರ್ಯದರ್ಶಿ ನಾರಾಯಣ ಕೊಂಬಿಲ, ಆಡಳಿತಾಧಿಕಾರಿ ಶ್ರೀಧರ್, ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗ್ರೇಸ್ ಪಿ. ಸಲ್ದಾನ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಜಿಲ್ಲಾ ನೋಡಲ್ ಅಧಿಕಾರಿ ಶೋಭಾ ಎನ್., ತಾಲೂಕು ನೋಡಲ್ ಅಧಿಕಾರಿ ಸುಶೀಲಾ, ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ವಿವಿಧ ಶಿಕ್ಷಕ-ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳಾದ ಚೆನ್ನಕೇಶವ, ಶಿವಪ್ರಸಾದ್ ಶೆಟ್ಟಿ, ಗಣೇಶ್, ಜತ್ತಪ್ಪಗೌಡ, ಜೋಯಲ್ ಲೋಬೊ, ರಮಾನಂದ, ಮುರಳೀ ಕೃಷ್ಣ, ಚಿನ್ನಪ್ಪಜಾಲ್ಸೂರು, ಜಯರಾಮ, ಸುಬ್ರಾಯ ಕಾರಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಸ್ವಾಗತಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ವಂದಿಸಿದರು. ಶಿಕ್ಷಕಿಯರಾದ ಸುಧಾ, ಜಯಶ್ರೀ ಆಚಾರ್ಯ, ರಶ್ಮಿ ಫೆರ್ನಾಂಡಿಸ್, ಶೋಭಾ ಕಾರ್ಯಕ್ರಮ ನಿರ್ವಹಿಸಿದರು.


70ಕ್ಕೂ ಅಧಿಕ ಸ್ಪರ್ಧೆಗಳು: ಎರಡು ದಿನಗಳ ಕಾಲ ನಡೆಯಲಿರುವ ಕಲೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ 70ಕ್ಕೂ ಅಧಿಕ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 1200ಕ್ಕೂ ಅಧಿಕ ಸ್ಪರ್ಧಿಗಳು ಸೇರಿದಂತೆ ಸುಮಾರು 2,000 ವಿದ್ಯಾರ್ಥಿಗಳು ಪ್ರತಿಭಾ ಕಲರವದಲ್ಲಿ ಭಾಗವಹಿಸುತ್ತಿದ್ದಾರೆ.

ಮೆರುಗು ಮಕ್ಕಳ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೆ ಮುನ್ನ ಮಾಣಿ ಗಾಂಧಿ ಮೈದಾನದಿಂದ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದವರೆಗೆ ಸಾಗಿ, ಮರಳಿ ಪ್ರತಿಭಾ ಕಲರವ ವೇದಿಕೆಯವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಸ್ವಚ್ಛ ಭಾರತದ ಜಾಗೃತಿ, ದೇಶೀಯ ಉಡುಪಗಳ ವೈವಿಧ್ಯ, ರಾಷ್ಟ್ರೀಯ ಭಾವೈಕ್ಯ, ಪರಿಸರ ಜಾಗೃತಿ, ಕಲ್ಲಡ್ಕ ಗೊಂಬೆ ಕುಣಿತ, ರೈತ ವೇಷಧಾರಿಗಳು, ಯಕ್ಷಗಾನ ವೇಷಧಾರಿಗಳು, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ತಂಡ, ಚೆಂಡೆವಾದನ, ಹುಲಿವೇಷಧಾರಿಗಳು ಮೆರವಣಿಗೆಗೆ ಮೆರುಗು ನೀಡಿದರು.


ಮಕ್ಕಳ ಸಂಭ್ರಮಕ್ಕೆ ಅವಕಾಶ ನೀಡಿ, ಭಾಷಣ ಬೇಡ:

ಶಾಸಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಪ್ರತಿಭಾ ಕಲರವವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ, ತಮ್ಮ ಮಾತಿನ ಮಧ್ಯೆ ಶಿಷ್ಟಾಚಾರಗಳು ಏನೇ ಇರಲಿ, ಆದರೆ, ಜನಪ್ರತಿನಿಧಿಗಳು ಅತಿ ಭಾಷಣ ಮಾಡಿ ಕಾಲಹರಣ ಮಾಡುವ ಬದಲು ಕಡಿಮೆ ಮಾತನಾಡಿ, ಮಕ್ಕಳ ಸಂಭ್ರಮಕ್ಕೆ ಅವಕಾಶ ನೀಡಬೇಕು ಎಂದರು.

ಮುಂದಿನ ದಿನಗಳಲ್ಲಾದರೂ ಇದು ಅನುಷ್ಠಾನಗೊಳ್ಳಬೇಕು. ಈ ಮಾತಿಗೆ ವೇದಿಕೆಯಲ್ಲಿರುವ ಎಲ್ಲರ ಸಹಮತ ಇದೆ ಎಂದುಕೊಳ್ಳುತ್ತೇನೆ ಎಂದು ಚುಟುಕಾಗಿಯೇ ಮಾತು ಮುಗಿಸಿ ತೆರಳಿದರು. ಬಳಿಕ ಮಾತನಾಡಿದ ಎಲ್ಲ ಜನಪ್ರತನಿಧಿಗಳು ಚುಟುಕಾಗಿಯೇ ಮಾತು ಮುಗಿಸಿ ಗಮನ ಸೆಳೆದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News