ಅಂತರ್ ಜಿಲ್ಲಾ ಕಳವು ಆರೋಪಿಯ ಬಂಧನ: ಚಿನ್ನಾಭರಣ ವಶ

Update: 2019-11-05 16:09 GMT

ಕಾಪು, ನ.5: ಕೆಲವು ದಿನಗಳ ಹಿಂದೆ ಪಾದೂರು ಗ್ರಾಮದಲ್ಲಿ ನಡೆದ ಮಹಿಳೆಯ ಸರ ಅಪಹರಣ ಹಾಗೂ ಮನೆ ಕಳವು ಪ್ರಕರಣದ ಆರೋಪಿ ಯನ್ನು ಪೊಲೀಸರು ನ.1ರಂದು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ನಿವಾಸಿ ಅರವಿಂದ ನಾರಾಯಣ ನಾಯ್ಕಿ(34) ಬಂಧಿತ ಆರೋಪಿ. ಈತನಿಂದ ಒಟ್ಟು 1,46,200 ರೂ. ಮೌಲ್ಯದ ಡಿಸೈನ್ ಚಿನ್ನದ ಕರಿಮಣಿ ಸರ, ಬ್ರಾಸ್‌ಲೈಟ್, ಉಂಗುರ, ಬೆಂಡೋಲೆ, ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

ಈತ ಅ.11ರಂದು ಪಾದೂರೂ ಹೊಸಬೆಟ್ಟು ಬಸದಿ ಬಳಿಯ ನಿವಾಸಿ ಗೀತಾ ಎಂಬವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿ ಯಾಗಿದ್ದು, ಇದರಿಂದ ಗೀತಾ ಗಾಯಗೊಂಡಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಈ ಪ್ರಕರಣ ಮತ್ತು ಪಾದೂರು ದೇವಸ್ಥಾನದ ಬಳಿಯ ಮನೆಯೊಂದರ ಕಿಟಕಿಯ ಮೂಲಕ ಒಳಪ್ರವೇಶಿಸಿ ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ.1ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಾಗಿತ್ತು. ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈತನ ವಿರುದ್ಧ ಈ ಹಿಂದೆ ಮಲ್ಪೆ, ಶಿರಸಿ, ಕುಮಟಾ ಠಾಣೆಗಳಲ್ಲಿ ಕಳವು ಪ್ರಕರಣ ಮತ್ತು ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಕರೆ ಮಾಡಿದ ಬಗ್ಗೆ ಹಿರಿಯಡ್ಕ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕಾರ್ಯಾಚರಣೆಯನ್ನು ಎಸ್ಪಿ ನಿಶಾ ಜೇಮ್ಸ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನದಂತೆ ಕಾರ್ಕಳ ಎಎಸ್ಪಿ ಕೆ.ಕೃಷ್ಣಕಾಂತ್ ಮಾರ್ಗದರ್ಶನ ದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಶಿರ್ವ ಎಸ್ಸೈ ಅಬ್ದುಲ್ ಖಾದರ್, ಪ್ರೊಬೆಷನರಿ ಎಸ್ಸೈ ಸದಾಶಿವ ಗವರೋಜಿ, ಡಿಸಿಐಬಿ ತಂಡದ ಸುರೇಶ್, ಶಿವಾನಂದ, ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ರಾಜೇಶ್, ಸುಕುಮಾರ್, ರವಿಕುಮಾರ್, ದಾಮೋದರ್, ರಾಘವೇಂದ್ರ ಜೋಗಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News