ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ : ಉಡುಪಿ ಜಿಲ್ಲೆಯ 3000 ಮಂದಿಗೆ ಕೌಶಲ್ಯ ತರಬೇತಿ ಗುರಿ

Update: 2019-11-05 16:33 GMT

ಉಡುಪಿ, ನ.5:ಯುವಜನಾಂಗಕ್ಕೆ ಶಿಕ್ಷಣದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ, ನೈಪುಣ್ಯತೆಯನ್ನು ಒದಗಿಸಲು ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯ 3000 ಯುವಜನರಿಗೆ ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ 3000 ಯುವಕ-ಯುವತಿಯರಿಗೆ ಕೌಸಲ್ಯ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವ ಗುರಿ ಇದೆ ಎಂದರು.

ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಂದು ಪಿಎಂಕೆವಿವೈ ತರಬೇತಿ ಕೇಂದ್ರವನ್ನು 2017-18ನೇ ಸಾಲಿನಲ್ಲಿ ಪ್ರಾರಂಭಿಸ ಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೇಂದ್ರ ತೆರೆಯಲು ಬೇಡಿಕೆ ಇರಿಸಿದ್ದೇನೆ. ಉಡುಪಿಯ ಲಕ್ಷ್ಮೀಂದ್ರನಗರದಲ್ಲಿ ಇದರ ಕಚೇರಿ ಇದ್ದು, ಇಲ್ಲಿ ಈವರೆಗೆ 644 ಮಂದಿ ಯುವಕ-ಯುವತಿ ಯರು ವಿವಿಧ ಕ್ಷೇತ್ರಗಳಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಇವರಲ್ಲಿ 12 ಮಂದಿ ಮಾತ್ರ ತರಬೇತಿ ಯನ್ನು ಅರ್ಧದಲ್ಲೇ ತೊರೆದಿದ್ದು ಉಳಿದ 632 ಮಂದಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದರು.

ತರಬೇತಿ ಪೂರ್ಣಗೊಳಿಸಿದ 632 ಮಂದಿಗೂ ಉದ್ಯೋಗ ದೊರಕಿದ್ದು, ಇವರಲ್ಲಿ ಕೆಲವರು ಸ್ವಯಂ ಉದ್ಯೋಗ ಮಾಡುತಿದ್ದಾರೆ. ಟೈಲರಿಂಗ್, ಬ್ಯುಟಿಶಿಯನ್, ಜೂನಿಯರ್ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ಡೆವಲಪರ್ಸ್‌ ಆಗಿ ಇವರೆಲ್ಲ ಉದ್ಯೋಗ ಮಾಡುತಿದ್ದಾರೆ ಎಂದರು.

 35 ವರ್ಷದೊಳಗಿನ ಯಾರೂ ಸಹ ಇಲ್ಲಿ ತಮಗೆ ಇಷ್ಟದ ವಿಭಾಗದಲ್ಲಿ ತರಬೇತಿಯನ್ನು ಪಡೆಯಲು ಅವಕಾಶವಿದೆ. ಶಾಲೆಯನ್ನು ಅರ್ಧದಲ್ಲೇ ಬಿಟ್ಟುವರಿಗೂ ಇಲ್ಲಿ ತರಬೇತಿಗೆ ಅವಕಾಶವಿದೆ. ತರಬೇತಿ ಪೂರ್ಣಗೊಳಿಸಿದವ ರಿಗೆ ಪ್ರತಿ ತಿಂಗಳಿಗೆ ತಲಾ ಒಂದು ಸಾವಿರ ರೂ. ಪ್ರಯಾಣ ಭತ್ಯೆ ಹಾಗೂ ಒಂದು ಸಾವಿರ ರೂ.ಇತರ ಭತ್ಯೆ ನೀಡಲಾಗುತ್ತದೆ. ತರಬೇತಿ ಅವಧಿ 2ರಿಂದ 4 ತಿಂ ಗಳಾಗಿದೆ ಎಂದು ಶೋಭಾ ತಿಳಿಸಿದರು.

ಶಾಸಕ ಕೆ.ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಶಿಲ್ಪಾ ಜಿ.ಸುವರ್ಣ, ಗೀತಾಂಜಲಿ ಸುವರ್ಣ, ರೇಷ್ಮಾ ಉದಯ ಶೆಟ್ಟಿ, ಕೇಂದ್ರದ ಮುಖ್ಯಸ್ಥ ರಾಘವೇಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News