ಕುಡಿಯುವ ನೀರಿನ ದರ ಏರಿಕೆ ಬಿಜೆಪಿ ಶಾಸಕ ಬದ್ಧತೆಯ ಕೊರತೆ ನೇರ ಕಾರಣ: ಡಿವೈಎಫ್‌ಐ ಆರೋಪ

Update: 2019-11-06 12:35 GMT

ಮಂಗಳೂರು, ನ.6: ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಅಸ್ಥಿತ್ವದಲ್ಲಿಲ್ಲದಿರುವ ಸಂದರ್ಭ ಕುಡಿಯುವ ನೀರಿನ ದರವನ್ನು ವಿಪರೀತ ಏರಿಕೆ ಮಾಡಿರುವುದು ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ಈ ಕುರಿತು ಚುನಾವಣೆಯ ಸಂದರ್ಭ ಕಾಂಗ್ರೆಸ್, ಬಿಜೆಪಿ ಜನಪ್ರತಿನಿಧಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವುದು ಖಂಡನೀಯ. ರಾಜ್ಯ ಸರಕಾರದ ಸೂಚನೆಯ ಮೇರೆಗೆ ಜಿಲ್ಲಾಡಳಿತ ಏಕಾಏಕಿ ದರ ಏರಿಕೆ ಮಾಡಿದಾಗ ಬಿಜೆಪಿ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಯಾವುದೇ ಆಕ್ಷೇಪ ಎತ್ತದೆ ಮೌನ ವಹಿಸಿದ್ದು ಕೂಡಾ ಕುಡಿಯುವ ನೀರು ಕೈಗೆಟುಕದಷ್ಟು ದುಬಾರಿಯಾಗಲು ಕಾರಣವಾಗಿದೆ. ನಗರದ ಜನತೆಯ ಬದುಕಿನ ಹಿತಾಸಕ್ತಿ ರಕ್ಷಿಸುವ ನೇರ ಜವಾಬ್ದಾರಿ ಹೊಂದಿದ್ದ ಶಾಸಕರ ಬದ್ಧತೆಯ ಕೊರತೆ ಜನತೆಯನ್ನು ಸಂಕಷ್ಡಕ್ಕೆ ದೂಡಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2007ರಲ್ಲೂ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರದಲ್ಲಿ ಇದ್ದಾಗ ಕುಡಿಯುವ ನೀರಿನ ದರವನ್ನು ವಿಪರೀತ ಏರಿಸಿತ್ತು. ಅಂದು ಸಿಪಿಎಂ, ಡಿವೈಎಫ್‌ಐ ನಡೆಸಿದ ತೀವ್ರತರವಾದ ಹೋರಾಟವನ್ನು ಬಿಜೆಪಿ ಪೊಲೀಸ್ ಬಲದ ಮೂಲಕ ಕ್ರೂರವಾಗಿ ಹತ್ತಿಕ್ಕಲು ಯತ್ನಿಸಿತ್ತು. ಆದರೆ ಜನಾಕ್ರೋಶಕ್ಕೆ ಮಣಿದು ದರ ಏರಿಕೆಯನ್ನು ಭಾಗಶ ಹಿಂಪಡೆದಿತ್ತು. ಅಲ್ಲಿಂದ ಸತತ ಒಂದು ದಶಕಗಳ ಕಾಲ ಯಾವ ಆಡಳಿತವೂ ನೀರಿನ ದರ ಏರಿಕೆಯನ್ನು ಮಾಡಲು ಧೈರ್ಯ ತೋರಿರಲಿಲ್ಲ. ಆದರೆ ಎಡಿಬಿ ಸಾಲದ ಒಪ್ಪಂದ ಶರತ್ತುಗಳ ಸುಳಿಗೆ ಸಿಲುಕಿರುವ ಪಾಲಿಕೆಯ ಮೇಲೆ ರಾಜ್ಯ ಸರಕಾರ ನೀರಿನ ದರ ಏರಿಸುವಂತೆ ಪತ್ರ ಬರೆದು ಸದಾ ಒತ್ತಡ ಹೇರುತ್ತಿತ್ತು. ಈ ಬಾರಿಯ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗಂಡ ಸಂದರ್ಭ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದ ಕೊನೆಯ ದಿನಗಳಲ್ಲಿ, ಅಂದರೆ 2019ರ ಜುಲೈಯಲ್ಲಿ ಎಪ್ರಿಲ್‌ನಿಂದ ಪೂರ್ವಾನ್ವಯ ಆಗುವಂತೆ ರಾಜ್ಯ ಸರಕಾರದ ಅಧಿಕಾರಿಗಳ ಸೂಚನೆಯ ಮೇರೆಗೆ ಜಿಲ್ಲಾಡಳಿತ ನೀರಿನ ದರವನ್ನು ನಾಲ್ಕೈದು ಪಟ್ಟು ಏರಿಸಿತು. ದರ ಏರಿಕೆಯ ಸಂದರ್ಭ ಮಧ್ಯ ಪ್ರವೇಶ ಮಾಡಬೇಕಿದ್ದ, ಕನಿಷ್ಟ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಆ ಕುರಿತು ಸಭೆ ನಡೆಸುವಂತೆ ಒತ್ತಡ ಹೇರಬೇಕಿದ್ದ ಬಿಜೆಪಿ ಶಾಸಕರು ಮೌನ ವಹಿಸಿ ದರ ಏರಿಕೆಯ ಪರವಾಗಿ ನಿಂತರು. ಕಾಂಗ್ರೆಸ್ ಪಕ್ಷ ಎಂದಿನಂತೆ ದರ ಏರಿಕೆಗೂ ತನಗೂ ಸಂಬಂಧವಿಲ್ಲ ಎಂಬಂತೆ ತಟಸ್ಥ ಧೋರಣೆ ಅನುಸರಿಸಿತು ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಎಡಿಬಿಯಂತಹ ವಿದೇಶಿ ಬ್ಯಾಂಕ್‌ಗಳ ಪರವಾದ ನಿಲುವುಗಳು ನೀರಿನ ದರ ಏರಿಕೆಗೆ ಪೂರಕವಾದವು. ಇದೀಗ ಚುನಾವಣೆಯ ಹೊಸ್ತಿಲಲ್ಲಿ ಜನಾಕ್ರೋಶವನ್ನು ಎದುರಿಸಲಾಗದೆ ನೀರಿನ ದರ ಏರಿಕೆಯ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿವೆ. ಈ ಎರಡೂ ಪಕ್ಷಗಳು ನೀರಿನ ದರ ಏರಿಕೆಗೆ ಸಂಬಂಧಿಸಿ ಸಮಾನ ಅಪರಾಧಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News