‘ಸಿದ್ದರಾಮಯ್ಯನ ಕಂಡ್ರೆ ಬಿಜೆಪಿಗೆ ಭಯ, ಹೀಗಾಗಿ ನಾನೇ ಟಾರ್ಗೆಟ್’

Update: 2019-11-06 13:50 GMT

ಉಡುಪಿ, ನ.6: ‘ಸಿದ್ದರಾಮಯ್ಯನ ಕಂಡ್ರೆ ಬಿಜೆಪಿಯವರಿಗೆ ಭಯ. ಅದಕ್ಕೆ ಬಿಜೆಪಿಯ ಪ್ರತಿಯೊಬ್ಬರು ಪದೇ ಪದೇ ನನ್ನನ್ನೇ ಟಾರ್ಗೆಟ್ ಮಾಡುತಿದ್ದಾರೆ. ನಾನು ಮತ್ತೆ ಸಿಎಂ ಆಗ್ತೀನಿ ಅಂತ ಭಯ ಅಲ್ಲ, ಸಿದ್ದರಾಮಯ್ಯನೇ ಬಿಜೆಪಿ ಯನ್ನು ಸೋಲಿಸ್ತಾನೆ ಎಂಬ ಭಯ’ ಹೀಗೆಂದು ನುಡಿದವರು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು.

ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ‘ಗಾಂಧಿ-150’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಮಾತು ಹೇಳಿದರು.

ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಬಿಜೆಪಿಯ ಪ್ರತಿಯೊಬ್ಬ ನಾಯಕರು ಏಕೆ ಪದೇ ಪದೇ ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡುತಿದ್ದಾರೆ, ಅವರ ವಿರುದ್ಧ ಹೇಳಿಕೆಗಳನ್ನು ನೀಡುತಿದ್ದಾರೆ ಎಂದು ಪ್ರಶ್ನಿಸಿದಾಗ ಸಿದ್ದರಾಮಯ್ಯ, ಹೆಮ್ಮೆಯ ಭಾವೊಂದಿಗೆ ಈ ಚಾಟಿಯ ಉತ್ತರ ನೀಡಿದರು.

ಕಾಂಗ್ರೆಸ್‌ಗೆ ಹಿನ್ನಡೆಯಲ್ಲ: ಕಾಂಗ್ರೆಸ್, ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಯಡಿಯೂರಪ್ಪ ಅವರ ಈಚಿನ ಆಡಿಯೋ ಕುರಿತು ನ್ಯಾಯಾಲಯ ತಳೆದ ನಿಲುವಿನ ಕುರಿತು ದ್ವಂದ್ವ ಅಭಿಪ್ರಾಯ ಕೇಳಿಬರುತ್ತಿರುವ ಬಗ್ಗೆ ಸಿದ್ದರಾಮಯ್ಯ ರನ್ನು ಪ್ರಶ್ನಿಸಿದಾಗ, ಇದು ಖಂಡಿತ ಕಾಂಗ್ರೆಸ್‌ಗೆ ಹಿನ್ನಡೆಯಲ್ಲ ಎಂದರು.

ತೀರ್ಪು ನೀಡುವ ವೇಳೆ ನಾವು ಆಡಿಯೋವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಇದು ನಮಗೆ ವಿರುದ್ಧವಾ ಎಂದು ಖಾರವಾಗಿ ಪ್ರಶ್ನಿಸಿದ ಸಿದ್ದರಾಮಯ್ಯ, ಈ ಬಗ್ಗೆ ಪ್ರತ್ಯೇಕ ವಿಚಾರಣೆಗೆ ನಾವು ಕೋರಿದ್ದೆವು. ಆದರೆ ಪ್ರತ್ಯೇಕ ವಿಚಾರಣೆ ಬೇಡ, ತೀರ್ಪಿನ ವೇಳೆ ಅದನ್ನು ಪರಿಗಣಿಸೋದಾಗಿ ಸುಪ್ರೀಂಕೋರ್ಟ್ ಹೇಳಿದೆ. ಇದರಿಂದ ಕಾಂಗ್ರೆಸ್ ವಾದಕ್ಕೆ ಹಿನ್ನಡೆಯಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಬಿಜೆಪಿ-ಜೆಡಿಎಸ್ ಒಪ್ಪಂದ ಸ್ಪಷ್ಟ: ಜೆಡಿಎಸ್ ಮುಖಂಡ ದೇವೇಗೌಡ ಮತ್ತು ಬಿಜೆಪಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಡುವೆ ಒಳ ಒಪ್ಪಂದ ನಡೆದಿರುವುದು ಸ್ಪಷ್ಟವಾಗಿದೆ. ಒಳ ಒಪ್ಪಂದ ಏನು, ಅದರ ಟರ್ಮ್ಸ್ ಎಂಡ್ ಕಂಡೀಷನ್ಸ್ ಏನು ಎಂಬುದು ನನಗೆ ಗೊತ್ತಿಲ್ಲ. ಇಬ್ಬರ ನಡುವೆ ಮಾತುಕತೆ ಆಗಿರೋದಂತೂ ಸ್ಪಷ್ಟವಾಗಿದೆ. ಮಾತುಕತೆ ವಿಚಾರವನ್ನು ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಒಪ್ಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸರಕಾರವನ್ನು ಬೀಳಿಸಿ, ತಾವೇ ಮುಖ್ಯಮಂತ್ರಿಯಾಗಲು ಪ್ರಯತ್ನಿಸುತಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿರುವ ಕುರಿತು ಪ್ರಶ್ನಿಸಿದಾಗ, ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನೇನೂ ಸರಕಾರವನ್ನು ಬೀಳಿಸ್ತೀನಿ ಅಂದಿಲ್ಲ. ಕುಮಾರಸ್ವಾಮಿ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದರು.

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತೆ. ಬಿಜೆಪಿ ಸರಕಾರ ಉಳಿಯಲು ಎಂಟು ಸ್ಥಾನ ಗೆಲ್ಲಲೇಬೇಕು. 8 ಸ್ಥಾನ ಗೆಲ್ಲದಿದ್ರೆ ಯಡಿಯೂರಪ್ಪ ರಾಜಿನಾಮೆ ನೀಡಲೇಬೇಕಾಗುತ್ತೆ. ಯಡಿಯೂರಪ್ಪ ರಾಜಿನಾಮೆ ಕೊಟ್ಟರೆ ಏನಾಗುತ್ತೆ. ರಾಜ್ಯದಲ್ಲಿ ಮಧ್ಯಾವಧಿ ಚುನಾವಣೆ ಬರಬಹುದು ಎಂದು ಹೇಳಿದ್ದೆ. ನಾನು ಮುಖ್ಯಮಂತ್ರಿ ಆಗ್ಬೇಕು ಅಂತ ಈ ಮಾತು ಹೇಳಿಲ್ಲ ಎಂದರು.

 ಹೌದು, ನಾವೇ ದೂರು ಕೊಟ್ಟಿದ್ದು: ಸಿದ್ದರಾಮಯ್ಯರಿಂದಾಗಿ ನಾನು ಅನರ್ಹನಾಗಬೇಕಾಯಿತು ಎಂಬ ಡಾ.ಸುಧಾಕರ್ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೌದು, ಸುಧಾಕರ್ ವಿರುದ್ಧ ನಾವೇ ದೂರು ಕೊಟ್ಟಿದ್ದು ಎಂದರು. ಪಕ್ಷಾಂತರ ಮಾಡುತ್ತಿರುವ ಸುಧಾಕರ್‌ರನ್ನು ಅನರ್ಹಗೊಳಿಸಿ ಎಂದು ನಾನು ಮತ್ತು ದಿನೇಶ್ ಗುಂಡೂರಾವ್, ಸ್ಪೀಕರ್‌ಗೆ ದೂರು ನೀಡಿ ಅವರನ್ನು ಅನರ್ಹಗೊಳಿಸಲು ತಿಳಿಸಿದ್ದೆವು. ಇದು ಸತ್ಯ. ಇಟ್ಸ್ ಎ ಫ್ಯಾಕ್ಟ್ ಎಂದರು.

ಜೆಡಿಎಸ್ ಜನರ ಮುಂದ ಎಕ್ಸ್‌ಪೋಸ್ ಆಗುತ್ತೆ

ರಾಜ್ಯದ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಯಡಿಯೂರಪ್ಪ ಸರಕಾರ ಬಹುಮತ ಪಡೆಯದೇ ಹೋದರೆ, ಆಗ ಮಧ್ಯಾವದಿ ಚುನಾವಣೆ ಅನಿವಾರ್ಯವಾಗುತ್ತದೆ. ಇದನ್ನು ತಪ್ಪಿಸಲು ನಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ಹೇಳುತ್ತಿರಬಹುದು ಎಂದು ಸಿದ್ದರಾಮಯ್ಯ ನುಡಿದರು.

ಈ ಹಿನ್ನೆಲೆಯಲ್ಲೇ ನಾವು ಸರಕಾರ ಬೀಳಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿರಬಹುದು. ಜೆಡಿಎಸ್, ಬಿಜೆಪಿಗೆ ಬೆಂಬಲ ಕೊಡೋದಾದ್ರೆ ಕೊಡಲಿ. ಆಗ ಜೆಡಿಎಸ್ ಜನರ ಮುಂದೆ ಎಕ್ಸ್‌ಪೋಸ್ ಆಗುತ್ತೆ. ಅವರು ಎಷ್ಟು ಜಾತ್ಯಾತೀತರು ಎಂಬುದು ರಾಜ್ಯದ ಜನರಿಗೆ ಮತ್ತೆ ಗೊತ್ತಾಗುತ್ತೆ. ಜೆಡಿಎಸ್ ತಾನು ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತಿದೆ. ಅವರು ನಿಜಕ್ಕೂ ಜಾತ್ಯತೀತರಾದ್ರೆ ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News