​ನ.14-20ರವರೆಗೆ 66ನೆ ಅಖಿಲ ಭಾರತ ಸಹಕಾರ ಸಪ್ತಾಹ

Update: 2019-11-06 16:00 GMT

ಉಡುಪಿ, ನ.6: ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರಿ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ‘ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ಧ್ಯೇಯ ವಾಕ್ಯದೊಂದಿಗೆ ಉಡುಪಿ ಜಿಲ್ಲೆಯಾ ದ್ಯಂತ 66ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನ.14ರಿಂ 20ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿ ಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಈ ಬಗ್ಗೆ ಮಾಹಿತಿ ನೀಡಿದರು. ನ.14ರಂದು ಅಪರಾಹ್ನ 3ಗಂಟೆಗೆ ಕಾಪು ಶ್ರೀಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಸಪ್ತಾಹದ ಉದ್ಘಾಟನಾ ಸಮಾರಂಭ ‘ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ದಿನ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿರುವರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಕಾರಿ ದ್ವಜಾರೋಹಣ ನೆರವೇರಿಸ ಲಿರುವರು. ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿರುವರು. ಮಧ್ಯಾಹ್ನ 2 ಗಂಟೆಗೆ ಸಹಕಾರಿ ಜಾಥ ನಡೆಯಲಿದೆ.

ನ.15ರಂದು ಬೆಳಗ್ಗೆ 10ಗಂಟೆಗೆ ಬಿದ್ಕಲ್‌ಕಟ್ಟೆ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ವಠಾರದಲ್ಲಿ ಸಹಕಾರ ಸಂಸ್ಥೆಗಳಿಗಾಗಿ ಶಾಸನಾಧಿಕಾರ ರೂಪಿಸುವುದು ದಿನ, ನ.16ರಂದು ಅಪರಾಹ್ನ ಗಂಟೆ 3.30ಕ್ಕೆ ಮಂದಾರ್ತಿ ದುರ್ಗಾಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ಸಹಕಾರ ಸಂಸ್ಥೆಗಳ ಯಶೋಗಾಥೆ ಗಳ ಮೂಲಕ ಸಹಕಾರ ಶಿಕ್ಷಣ, ತರಬೇತಿಯನ್ನು ಪುನರ್ ರೂಪಿಸುವ ದಿನ, ನ.17ರಂದು ಅಪರಾಹ್ನ 3ಗಂಟೆಗೆ ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿ ಸುವ ದಿನ, ನ.19ರಂದು ಅಪರಾಹ್ನ 3ಗಂಟೆಗೆ ಅಜ್ಜರಕಾಡು ಪುರಭವನದಲ್ಲಿ ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ದಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ನ.20ರಂದು ಬೆಳಗ್ಗೆ 10ಗಂಟೆಗೆ ಉಪ್ಪುಂದ ಖಂಬದಕೋಣೆ ಕರ್ನಾಟಕ ಖಾರ್ವಿ ಹರಿಕಾಂತ ಸಭಾಂಗಣದಲ್ಲಿ ನಡೆಯುವ ಸಹಕಾರ ಸಂಘಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಡಿಕೆ ಮತ್ತು ಗಣಕೀಕರಣ ದಿನ ಹಾಗೂ ಸಪ್ತಾಹ ಸಮಾರೋಪ ಸಮಾರಂಭವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿರುವರು. ರೈತ ಸಿರಿ ಸೇವಾ ಕೆಂದ್ರವನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಉದ್ಘಾಟಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ, ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಸಹಕಾರ ಸಂಘಗಳ ಉಪ ನಿಬಂಧಕಿ ಚಂದ್ರ ಪ್ರತಿಮಾ, ಯಶ್‌ಪಾಲ್ ಸುವರ್ಣ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಶ್ರೀಧರ ಪಿ.ಎಸ್., ಎಚ್.ಗಂಗಾಧರ ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಕೃಷ್ಣ ಮೂರ್ತಿ, ಅನಿಲ್ ಎಸ್. ಪೂಜಾರಿ, ಹರೀಶ್ ಶೆಟ್ಟಿ, ಹರೀಶ್ ಕಿಣಿ, ಕೆ.ಸುರೇಶ್ ರಾವ್, ಕೆ.ಕೊರಗ ಪೂಜಾರಿ, ಎಂ.ಗೋಪಿಕೃಷ್ಣ ರಾವ್, ಮನೋಜ್ ಕರ್ಕೇರ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ್ ಎಸ್.ಪಿ. ಉಪಸ್ಥಿತರಿದ್ದರು.

ನ.18ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ

66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ರಾಜ್ಯಮಟ್ಟದ ಸಹಕಾರ ಸಪ್ತಾಹ ಹಾಗೂ ಸಹಕಾರ ಸಂಸ್ಥೆಗಳ ಮೂಲಕ ಸರಕಾರದ ಹೊಸ ಯೋಜನೆಗಳ ದಿನ ಕಾರ್ಯಕ್ರಮವನ್ನು ನ.18ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭನದ ವಠಾರದಲ್ಲಿ ಆಯೋಜಿಸ ಲಾಗಿದೆ.

ಸಪ್ತಾಹವನ್ನು ರಾಜ್ಯ ಗೃಹ, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು. ಸಹಕಾರಿ ದ್ವಜಾರೋಹಣವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿರುವರು. ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಪ್ರದಾನ ಮಾಡಲಿರುವರು. ಸಹಕಾರ ವಾರ ಪತ್ರಿಕೆ ವಿಶೇಷ ಸಂಚಿಕೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ ಬಿಡುಗಡೆ ಮಾಡಲಿರುವರು. ಈ ಸಮಾವೇಶದಲ್ಲಿ ಸುಮಾರು 3ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News