ಕೊರಂಗ್ರಪಾಡಿಯ ಬಡಕುಟುಂಬಕ್ಕೆ ‘ಗಾಂಧಿ ಕುಟೀರ’ ಮನೆ ಹಸ್ತಾಂತರ

Update: 2019-11-06 16:09 GMT

ಉಡುಪಿ, ನ.6: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯು ಮಹಾತ್ಮ ಗಾಂಧೀಜಿ ಜನ್ಮ ಶತಾಬ್ದಿ ಪ್ರಯುಕ್ತ ‘ಗಾಂಧಿ- 150’ ಕಾರ್ಯಕ್ರಮದಡಿ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊರಂಗ್ರಪಾಡಿ ವಾರ್ಡ್ ಜನತಾ ಕಾಲನಿಯ ಬಡ, ಅಶಕ್ತ ಪರಿಶಿಷ್ಟ ಜಾತಿಯ ನಳಿನಿ ಕುಟುಂಬಕ್ಕೆ ನಿರ್ಮಿಸಿಕೊಟ್ಟ ನೂತನ ಮನೆ ‘ಗಾಂಧಿ ಕುಟೀರ’ದ ಹಸ್ತಾಂತರ ಕಾರ್ಯ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನೆರವೇರಿಸಿದರು.

ದಾನಿಗಳ ನೆರವಿನಿಂದ ಒಟ್ಟು ಸುಮಾರು 4.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 550 ಚದರ ಅಡಿ ವಿಸ್ತೀರ್ಣದ ನೂತನ ಮನೆಯ ‘ಗಾಂಧಿ ಕುಟೀರ’ ಫಲಕವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅನಾವರಣಗೊಳಿಸಿದರು. ನೂತನ ಮನೆಯನ್ನು ಉದ್ಘಾಟಿಸಿದ ಸಿದ್ದರಾಮಯ್ಯ ಇಡೀ ಮನೆಯನ್ನು ವೀಕ್ಷಿಸಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘ ಟನೆಯ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಅವರು ಮನೆಯ ಮಾಲಕಿ ನಳಿನಿ ಅವರಿಗೆ ಗಾಂಧೀಜಿಯ ಭಾವಚಿತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಜಿ.ಎ.ಬಾವಾ, ಎಂ.ಎ.ಗಫೂರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಸ್ಥಳೀಯ ಗ್ರಾಪಂ ಸದಸ್ಯೆ ಅಮೃತಾ ಉಮೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ವಿಧವೆ ನಳಿನಿ ಕುಟುಂಬ ತೀರ ಬಡತನದ ಜೀವನ ನಡೆಸುತ್ತಿದ್ದು, ಇವರ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಸದ್ಯ ಇವರು ತನ್ನ ಮೂವರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಇವರಲ್ಲಿ ಓರ್ವ ಮಗ ಪ್ರಶಾಂತ್ (34) ಹುಟ್ಟು ಅಂಗವಿಕಲನಾಗಿದ್ದು, ಕೂರಲೂ ಆಗದೆ, ನಿಲ್ಲಲೂ ಸಾಧ್ಯವಿಲ್ಲದೆ ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ಉಳಿದ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದಾರೆ.

ಕಳೆದ 20 ವರ್ಷಗಳಿಂದ ಗುಡಿಸಲು ಮನೆಯಲ್ಲಿ ವಾಸ ಮಾಡಿಕೊಂಡಿದ್ದ ನಳಿನಿ ಕುಟುಂಬಕ್ಕೆ ಸ್ಥಳೀಯ ಗ್ರಾಪಂ ಸದಸ್ಯೆ ಅಮೃತಾ ಉಮೇಶ್ ಕೋಟ್ಯಾನ್ ಶಿಫಾರಸ್ಸಿನ ಮೇರೆಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿತ್ತು. ಅದರಂತೆ ಮನೆ ನಿರ್ಮಾಣಕ್ಕೆ ಕಳೆದ ಮೇ 27ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು.

ಏಳು ತಿಂಗಳಿನಿಂದ ಮಾಸಾಶನ ಇಲ್ಲ!

 ಸರಕಾರದ ಮಾಸಾಶನದಲ್ಲಿಯೇ ಜೀವನ ಸಾಗಿಸುತ್ತಿರುವ ನಳಿನಿ ಹಾಗೂ ಪ್ರಶಾಂತ್ ಅವರಿಗೆ ಕಳೆದ ಏಳು ತಿಂಗಳುಗಳಿಂದ ಕ್ರಮವಾಗಿ ವಿಧವಾ ವೇತನ ಹಾಗೂ ಅಂಗವಿಕಲರ ವೇತನ ಬರುತ್ತಿಲ್ಲ.

ಈ ವಿಚಾರವನ್ನು ನಳಿನಿ ಅವರ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾಜಿ ತಾಪಂ ಅಧ್ಯಕ್ಷೆ ಶ್ಯಾಮಲಾ ಸುಧಾಕರ್ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದರು. ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲಿರುವ ಮತ್ತು ಕೈ ಬೆರಳು ನೆಟ್ಟಗೆ ಇಲ್ಲದ ಕಾರಣ ಅಂಗವಿಕಲ ವೇತನಕ್ಕೆ ಪ್ರಶಾಂತ್ ಬದಲು ನಳಿನಿಯ ಥಂಬ್ ನೀಡಲಾಗಿತ್ತು. ಅಲ್ಲದೆ ನಳಿನಿ ಅವರ ವಿಧವಾ ವೇತನಕ್ಕೂ ಅವರದ್ದೇ ಥಂಬ್ ನೀಡಲಾಗಿತ್ತು.
ಒಂದೇ ರೀತಿಯ ಥಂಬ್‌ನಿಂದಾಗಿ ಇಬ್ಬರ ಮಾಸಾಶನವೂ ರದ್ದಾಗಿದೆ. ಕಳೆದ ಏಳು ತಿಂಗಳುಗಳಿಂದ ಇವಬ್ಬರಿಗೂ ಮಾಸಾಶನ ಬರುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಶ್ಯಾಮಲಾ ಸುಧಾಕರ್ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಿದ್ಧರಾಮಯ್ಯ ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News