ದ.ಕ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವದ ಸಮಾರೋಪ

Update: 2019-11-06 16:25 GMT

ಬಂಟ್ವಾಳ, ನ. 6: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವರ ಸಹಯೋಗದಲ್ಲಿ ಎರಡು ದಿನಗಳ ದ.ಕ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ "ಪ್ರತಿಭಾಕಲರವ" ಬುಧವಾರ ಸಮಾಪನಗೊಂಡಿತು.

ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ಬಂಟ್ವಾಳ ತಾಲೂಕಿನ ಶಿಕ್ಷಣ ಇಲಾಖೆ ಹಾಗೂ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಅರ್ಥಪೂರ್ಣವಾಗಿ, ಶಿಸ್ತುಬದ್ಧವಾಗಿ ಆಯೋಜನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾ ಕಾರ್ಯಕ್ರಮ ಗಳೆಲ್ಲವೂ ಮಕ್ಕಳ ಸಂಭ್ರಮದ ಭಾಗವಹಿಸುವಿಕೆಯೊಂದಿಗೆ ನಡೆದಿರುವುದು ನಮಗೂ ಖುಷಿ ಕೊಟ್ಟಿದೆ. ಇಂತಹಾ ಅತ್ಯುತ್ತಮ ಅವಕಾಶ ನೀಡಿರುವುದಕ್ಕೆ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಇಲಾಖೆಯ ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರು ಮತ್ತು ಅವರ ತಂಡ ನಿರ್ವಹಿಸಿರುವುದು ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು.

ತಾಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಮಾಣಿ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್. ನಾಯ್ಕ್, ಕಾರ್ಯದರ್ಶಿ ನಾರಾಯಣ ಶೆಟ್ಟಿ ಕೊಂಬಿಲ, ಆಡಳಿತಾಧಿಕಾರಿ ಶ್ರೀಧರ್, ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ವಿವಿಧ ಶಿಕ್ಷಕ-ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳಾದ ಚೆನ್ನಕೇಶವ, ಜತ್ತಪ್ಪ ಗೌಡ, ರಮಾನಂದ, ಕಲ್ಲಡ್ಕ ಶಾಲಾ ಮುಖ್ಯಶಿಕ್ಷಕ ಎ.ಅಶ್ರಫ್, ಪ್ರವೀಣ್ ಮುರಳೀಕೃಷ್ಣ, ಸಿ.ಆರ್.ಪಿ ಸತೀಶ್, ತಾಲೂಕು ನೋಡಲ್ ಅಧಿಕಾರಿ ಸುಶೀಲಾ, ಶಾಲಾ ಮುಖ್ಯ ಶಿಕ್ಷಕಿ ಗ್ರೇಸ್‌ಸಲ್ದಾನ, ತಾಲೂಕಿನ ಎಲ್ಲಾ ಬಿಆರ್‌ಪಿ, ಸಿಆರ್‌ಪಿ ಹಾಗೂ ಶಿಕ್ಷಣ ಸಂಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ನೋಡಲ್ ಅಧಿಕಾರಿ ಶೋಭಾ ವಂದಿಸಿದರು. ಶಿಕ್ಷಕಿಯರಾದ ರಶ್ಮೀ ಫರ್ನಾಂಡೀಸ್, ಶೋಭಾ ಕಾರ್ಯಕ್ರಮ ನಿರೂಪಿಸಿದರು.

ಮೂರು ತಾಲೂಕಿಗೆ ಸಮಗ್ರ ಪ್ರಶಸ್ತಿ

ಪ್ರೌಢಶಾಲಾ ವಿಭಾಗದ ಸಮಗ್ರ ಪ್ರಶಸ್ತಿ ಬಂಟ್ವಾಳ ತಾಲೂಕು ಪಡೆದುಕೊಂಡರೆ, ಪ್ರಾಥಮಿಕ ಶಾಲೆಯ ಹಿರಿಯ ವಿಭಾಗದಲ್ಲಿ ಪುತ್ತೂರು ಹಾಗೂ ಕಿರಿಯ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News