ಬಡವರಿಗೆ ನೀಡಿದ ಉಚಿತ ಅಕ್ಕಿಗೆ ದಂಡ ವಸೂಲಿ ವಿಶ್ವದಲ್ಲೇ ಮೊದಲು: ಶಾಸಕ ಖಾದರ್

Update: 2019-11-06 16:35 GMT

ಬಂಟ್ವಾಳ, ನ. 6: ಸರಕಾರದ ಯೋಜನೆಯಡಿ ಪಡಿತರ ಮೂಲಕ ಬಡವರಿಗೆ ನೀಡಿದ ಉಚಿತ ಅಕ್ಕಿಗೆ ದಂಡ ವಸೂಲಿ ಮಾಡುತ್ತಿರುವ ಪ್ರಕ್ರಿಯೆ ವಿಶ್ವದಲ್ಲೇ ಮೊದಲು. ರಾಜ್ಯ ಸರಕಾರದ ಆದೇಶದ ಬಗ್ಗೆ ಶಾಸಕ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಬಂಟ್ವಾಳ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಪಡಿತರಚೀಟಿ ಗೊಂದಲ, ಅನರ್ಹ ಪಡಿತರದಾರರಿಗೆ ದಂಡ ವಸೂಲಾತಿ ಕ್ರಮದ ಬಗ್ಗೆ ಪ್ರಸ್ತಾಪಿಸಿ, ಪಡಿತರಚೀಟಿಯ ಬಗ್ಗೆ ಜನರು ಗೊಂದಲಕ್ಕೀಡಾಗಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆ ನೀಡುವಂತಹ ನಿರ್ಣಯ ಜಾರಿಗೊ ಳಿಸುವುದು ಸರಿಯಲ್ಲ. ಉಚಿತವಾಗಿ ಕೊಡುವ ಅಕ್ಕಿಗೂ ದಂಡ ವಸೂಲು ಮಾಡುವ ವಿಧಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಯಾವ ಮಾನದಂಡದಲ್ಲಿ ಪಡಿತರದಾರರನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ ಹಾಗೂ ದಂಡ ವಸೂಲಾತಿ ಹೇಗೆ ? ಎಂದು ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಸಭೆಯಲ್ಲಿ ಪ್ರಶ್ನಿಸಿದಾಗ, ಜಿಲ್ಲಾಧಿಕಾರಿ ಅವರ ಆದೇಶದ ಪ್ರಕಾರ ಅನರ್ಹ ಪಡಿತರದಾರರನ್ನು ಗುರುತಿಸಿ, ಆ ಮೂಲಕ ಯಾವತ್ತಿನಿಂದ ಸರಕಾರದ ಸೌವಲತ್ತುಗಳನ್ನು ಪಡೆಯಲಾಗುತ್ತಿದೆಯೋ ಅಂದಿನಿಂದ ದಂಡ ವಸೂಲಾತಿಯ ಬಗ್ಗೆ ಆಹಾರ ಇಲಾಖೆಯ ಉಪ ತಹಶೀಲ್ದಾರ್ ಶ್ರೀನಿವಾಸ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ, ಸರಕಾರದ ಈ ಆದೇಶ ದ.ಕ. ಜಿಲ್ಲೆಗೆ ಮಾತ್ರ ಸೀಮಿತವೇ?. ಯಾರು ಅರ್ಹರು, ಅನರ್ಹರು ಎಂಬುವುದು ಗ್ರಾಮಕರಣಿಕರಿಗೆ ಮಾಹಿತಿ ಇಲ್ಲವೇ? ಎಂದು ಸಭೆಗೆ ಪ್ರಶ್ನಿಸಿದಾಗ, ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ದಂಡನೆ ವಿಧಿಸುವುದನ್ನು ಜಿಲ್ಲಾಧಿಕಾರಿ ತಡೆಹಿಡಿದಿದ್ದಾರೆ. ದಂಡದ ಅವಧಿಗೆ ನಿನ್ನೆಗೆ ಮುಕ್ತಾಯಗೊಂಡಿದೆ ಎಂದು ಆಹಾರ ಇಲಾಖೆಯ ಉಪ ತಹಶೀಲ್ದಾರ್ ಸಭೆಗೆ ತಿಳಿಸಿದಾಗ, ಮುಂದಿನ ನಡೆಯೇನು ? ಕಾನೂನು ಕ್ರಮವೇ ? ಎಂದು ಶಾಸಕ ಯು.ಟಿ.ಖಾದರ್ ಅಧಿಕಾರಿಗಳಲ್ಲಿ ಪ್ರಶ್ನಿಸಿದರು.

ಪಡಿತರ ಚೀಟಿ ರದ್ದು ಮಾಡಿ

2 ವರ್ಷಗಳಿಂದೆ ಸೈಬರ್ ಸಹಿತ ಇನ್ನಿತರ ಕಡೆಗಳಲ್ಲಿ ಮನೆನಂಬ್ರ ಇಲ್ಲದವರು ಮನೆಗೆ ಎರಡರಂತೆ ಪಡಿತರ ಚೀಟಿ ಮಾಡಿಸಿದ್ದರಲ್ಲದೆ, ಈ ಬೊಗಸ್ ಕಾರ್ಡ್ನಿಂದ ಅಡುಗೆ ಅನಿಲ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ. ಅದಲ್ಲದೆ, ನಾಲ್ಕು ಚಕ್ರದ ಖಾಸಗಿ ವಾಹನ ಇರುವಲ್ಲಿಯೂ ಬಿಪಿಎಲ್ ಪಡಿತರ ಕಾರ್ಡ್ ಇದೆ ಎಂದು ಆರೋಪಿಸಿದ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು, ಮನೆ ನಂಬರ್ ಇಲ್ಲದ ಬಿಪಿಎಲ್ ಕಾರ್ಡ್ ರದ್ದು ಮಾಡುವಂತೆ ಸಭೆಗೆ ಒತ್ತಾಯಿಸಿದರು.

ತಾಪಂ ಹೆಸರಿನಲ್ಲಿ ಜಮೀನು ಇಲ್ಲ:

ಇತ್ತೀಚೆಗೆ ತಾಪಂ ವಿಶೇಷ ಸಭೆಯಲ್ಲಿ ಚರ್ಚಿಸಲಾದ ತಾಪಂ ಜಮೀನು ಅತಿಕ್ರಮಣ ಹಾಗೂ ಸರ್ವೇ ಕಾರ್ಯದ ಬಗ್ಗೆ ಸದಸ್ಯ ಉಸ್ಮಾನ್ ಕರೋಪಾಡಿ ಮಾಹಿತಿ ಕೇಳಿದಾಗ, ಈಗಾಗಲೇ 6 ದಿನಗಳ ಕಾಲ ಸರ್ವೇ ಕಾರ್ಯ ನಡೆದಿದ್ದು, ತಾಲೂಕು ಪಂಚಾಯತ್ ಸ್ವಾಧೀನದಲ್ಲಿರುವ ಸರಕಾರಿ ಜಮೀನನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿರುವ ಬಗ್ಗೆ ಕಂಡುಬಂದಿದೆ. ಒಟ್ಟಾರೆಯಾಗಿ 30 ಸೆಂಟ್ಸ್ ಜಮೀನು ಸರಕಾರಿ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಕಾಯ್ದಿರಿಸಿದನ್ನು ಹೊರತುಪಡಿಸಿ ತಾಲೂಕು ಪಂಚಾಯತ್ ಕಚೇರಿ ಸೇರಿ ದಂತೆ ಸ್ರೀಶಕ್ತಿ ಭವನ, ಸಾಮಾರ್ಥ್ಯ ಸೌಧ, ಆಶ್ರಮ ಶಾಲೆ, ವಾಹನ ಶೆಡ್ ಗಳಿಗೆ ಜಮೀನು ಮಂಜೂರುಗೊಂಡಿಲ್ಲ ಎಂದು ತಾಪಂ ಇಒ ರಾಜಣ್ಣ ಸಭೆಗೆ ಮಾಹಿತಿ ನೀಡಿದರು.

ವಿಟ್ಲ, ಮಾಣಿ, ಕನ್ಯಾನ ಭಾಗದಲ್ಲಿರುವ ತಾಪಂಗೆ ಸೇರಿದ ಜಾಗವನ್ನು ಸರ್ವೇ ಮಾಡುವಂತೆ ಸದಸ್ಯ ಉಸ್ಮಾನ್ ಒತ್ತಾಯಿಸಿದರು. ತಾಪಂ ಹಾಗೂ ಇಲಾಖೆಗೆ ಸೇರಿಸ ಜಾಗವನ್ನು ಸರ್ವೇ ನಡೆಸಿ, ಬೋರ್ಡ್-ಭೇಲಿ ಹಾಕಿ ಸಂರಕ್ಷಿಸುವAತೆ ಶಾಸಕರು ಸೂಚಿಸಿದರು.

ಇನ್ನು ಮುಂದೆ ಉಳಿಕೆ ಸರಕಾರಿ ಜಮೀನು ತಾಲೂಕು ಪಂಚಾಯತ್ ಹೆಸರಿಗೆ ಕಾಯ್ದಿರಿಸಲು ನಿರ್ಣಯಿಸಲಾಯಿತು. ತಾಪಂ ಸದಸ್ಯರು ಇನ್ನೂ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಘೋಷಣೆ ಮಾಡದಿರುವುದು, ಬಂಟ್ವಾಳ-ಸೋರ್ನಾಡು ರಸ್ತೆ ರಿಪೇರಿ, ಮುಗಿಯದ ಸರ್ವರ್ ಸಮಸ್ಯೆ, ಶಿಥಿಲ ಅಂಗನವಾಡಿ, ಆಧಾರ್ ಗೊಂದಲ ಸಹಿತ ಪ್ರತಿ ಬಾರಿಯೂ ಪ್ರಸ್ತಾಪಗೊಳ್ಳುವ ಅಡಕೆ ಕೊಳೆ ರೋಗಕ್ಕೆ ಬಾರದ ಪರಿಹಾರ ವಿಚಾರಗಳು ಸಭೆಯಲ್ಲಿ ಚರ್ಚೆಯಾದವು.

ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಜಿಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ಉಸ್ಮಾನ್ ಕರೋಪಾಡಿ, ಹೈದರ್ ಕೈರಂಗಳ, ಆದಂ ಕುಂಞಿ, ರಮೇಶ್ ಕುಡ್ಮೇರು, ಸಂಜೀವ ಪೂಜಾರಿ, ಗ್ರಾಪಂ ಅಧ್ಯಕ್ಷರಾದ ರಮ್ಲಾನ್, ರಾಜೇಶ್ ಬಾಳೇಕಲ್ಲು ವಿವಿಧ ವಿಷಯ ಪ್ರಸ್ತಾಪಿಸಿದರು. ತಾಪಂ ಇಒ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆ

ಇನ್ನುಳಿದ ಅವಧಿಗೆ ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಮಲ್ಲಿಕಾ ಶೆಟ್ಟಿ ಅವರು ಆಯ್ಕೆ ಮಾಡಲಾಯಿತು. ಹಿರಿಯ ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಸೂಚಿಸಿದ್ದು, ಸದಸ್ಯ ಆದಂ ಕುಂಞಿ ಅನುಮೋದಿಸಿದರು. ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷೆ ಧನಲಕ್ಷ್ಮಿ  ಬಂಗೇರ ಉಪಸ್ಥಿತರಿದ್ದರು.

ಗ್ರಾಪಂ ಕಡಿಪಿ ಸಭೆಗೆ ಅಧಿಕಾರಿಗಳ ಗೈರು

ಗ್ರಾಮ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಗ್ರಾಪಂ ಕೆಡಿಪಿ ಸಭೆಗೆ ಪಂಚಾಯತ್‌ನಿಂದ ಆಹ್ವಾನಿಸಿದರೂ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಹೀಗಿರುವಾಗ ಈ ಸಭೆ ಯಾಕಾಗಿ? ಸರಕಾರದ ಆದೇಶಕ್ಕೆ ಬೆಲೆ ಇಲ್ಲವೇ? ಎಂದು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಶಾಸಕರಲ್ಲಿ ಪ್ರಶ್ನಿಸಿದರು. ಇಲಾಖಾ ಅಧಿಕಾರಿಗಳಿಗೆ ತಾಲೂಕು, ಜಿಪಂ ಹಾಗೂ ವಿವಿಧ ಇಲಾಖಾ ಮಟ್ಟದ ಸಭೆಗಳು ಇರುವುದರಿಂದ ಗೈರು ಹಾಜರಿಯಂತಹ ಸನ್ನಿವೇಶ ಎದುರಾಗುತ್ತಿವೆ ಎಂದು ತಾಪಂ ಇಒ ರಾಜಣ್ಣ ಪ್ರತಿಕ್ರಿಯಿಸಿದಾಗ, ಗ್ರಾಪಂ ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವಂತೆ ಶಾಸಕ ಯು.ಟಿ.ಖಾದರ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News