ಅಯೋಧ್ಯೆ ತೀರ್ಪಿಗೆ ವಿಜಯೋತ್ಸವ, ಮೆರವಣಿಗೆ ಬೇಡ: ಪೇಜಾವರ ಶ್ರೀ

Update: 2019-11-07 14:10 GMT

ಉಡುಪಿ, ನ. 7: ರಾಮಜನ್ಮಭೂಮಿ ಕುರಿತ ಅಯೋಧ್ಯೆ ತೀರ್ಪು ಇನ್ನೊಂದು ವಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಹೊರಬೀಳುವ ನಿರೀಕ್ಷೆ ಇದೆ. ಈ ತೀರ್ಪು ಹಿಂದೂಗಳ ಪರವಾಗಿ ಬರುವ ನಿರೀಕ್ಷೆ ನಮಗಿದೆ. ಆದರೆ ಈ ಸಂಬಂಧ ಯಾರೂ ಕೂಡಾ ವಿಜಯೋತ್ಸವವನ್ನಾಗಲೀ, ಮೆರವಣಿಗೆಯನ್ನಾಗಲಿ ಮಾಡ ಬಾರದು. ದೇಶದಾದ್ಯಂತ ಅದರಲ್ಲೂ ವಿಶೇಷವಾಗಿ ಕರ್ನಾಟಕ ಹಾಗೂ ಕರಾವಳಿಯಲ್ಲಿ ಎಲ್ಲರೂ ಶಾಂತಿಯನ್ನು ಕಾಪಾಡಬೇಕು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಮನವಿ ಮಾಡಿದ್ದಾರೆ.

ಅಯೋಧ್ಯೆ ತೀರ್ಪಿಗೆ ದಿನಗಣನೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಪೇಜಾವರ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರಶ್ರೀ ತೀರ್ಪು ಏನೇ ಬಂದರೂ, ಯಾರ ಪರವಾಗಿ ಬಂದರೂ ಎಲ್ಲಾ ಕಡೆಗಳಲ್ಲಿ ಶಾಂತಿ ಕಾಪಾಡುವಂತೆ ಪದೇ ಪದೇ ಮನವಿ ಮಾಡಿದರು.

ಅಯೋಧ್ಯೆ ತೀರ್ಪಿಗೆ ಸಂಬಂಧಿಸಿದಂತೆ ದೇಶದಲ್ಲಿ ಶಾಂತಿ ಕಾಪಾಡುವಂತೆ, ಯಾರೂ ಸಹ ಹಿಂಸೆಗೆ ಅವಕಾಶ ನೀಡದಂತೆ ಅವರು ಮನವಿ ಮಾಡಿದರು. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಈ ಸಂಬಂಧ ನಿರ್ಣಯವೊಂದನ್ನು ತೆಗೆದುಕೊಂಡಿದೆ ಎಂದು ಹೇಳಿದ ಪೇಜಾವರಶ್ರೀ, ದೇಶದ ಪ್ರಮುಖ ಸಂತರು ಸಹ ಈ ಕುರಿತು ಜನರಲ್ಲಿ ಶಾಂತಿ ಕಾಪಾಡುವಂತೆ ತಿಳಿಸಿದ್ದಾರೆ ಎಂದರು.

ನ್ಯಾಯಾಲಯದ ತೀರ್ಪು ಏನೇ ಬಂದರೂ ಜನರು ವಿಜಯೋತ್ಸವ ಆಚರಿಸುವುದು, ಮೆರವಣಿಗೆ ತೆಗೆಯುವುದು ಬೇಡ. ಮುಸ್ಲಿಂ ಬಂಧುಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬೇಡಿ. ತೀರ್ಪನ್ನು ಜನತೆ ಶಾಂತ ರೀತಿಯಲ್ಲಿ ಸ್ವೀಕರಿಸಬೇಕು. ಬೇಕಿದ್ದರೆ ದೇವಸ್ಥಾನಗಳಲ್ಲಿ ಭಜನೆಯನ್ನು ಮಾಡಿ ಎಂದರು.

ತೀರ್ಪು ಹಿಂದೂಗಳ ಪರವಾಗಿಯೇ ಇರುತ್ತದೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ ತೀರ್ಪು ಮುಸ್ಲಿಂ ಪರವಾಗಿ ಬಂದರೂ ಪ್ರತಿಭಟಿಸಬಾ ರದು. ದೇಶದಲ್ಲಿ ಎಲ್ಲೂ ಹಿಂಸೆ ಆಗಬಾರದು. ಶಾಂತ ವಾತಾವರಣ ಇರಬೇಕು.  ಎಲ್ಲರೂ ಸಂವಿಧಾನಕ್ಕೆ, ಸುಪ್ರೀಂ ಕೋರ್ಟ್ ಗೆ ಗೌರವ ಕೊಡಬೇಕೆಂಬುದೇ ನಮ್ಮೆಲ್ಲರ ಇಚ್ಛೆ ಎಂದವರು ಹೇಳಿದರು.

ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಭಂಗ ಆಗಬಾರದು ಎಂಬುದೇ ನನ್ನ ಕಳಕಳಿಯಾಗಿದೆ. ಮುಖ್ಯವಾಗಿ ಕರಾವಳಿಯಲ್ಲಿ, ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ಎಂಬುದು ನನ್ನ ಬಯಕೆ. ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು. ಯಾಕೆಂದರೆ ಮೆರವಣಿಗೆ, ವಿಜಯೋತ್ಸವ, ಬೀದಿಗಿಳಿದು ಸಂಭ್ರಮಾಚರಣೆಯಿಂದ ಘರ್ಷಣೆಗೆ ಅವಕಾಶವಾಗುತ್ತದೆ ಎಂದವರು ನುಡಿದರು.

ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುವ ಎಚ್ಚರಿಕೆಯನ್ನೂ ಶ್ರೀಗಳು ಇದೇ ಸಂದರ್ಭದಲ್ಲಿ ನೀಡಿದರು. ತೀರ್ಪು ಯಾರ ಪರ ಬಂದರೂ ಶಾಂತಿಭಂಗ ಸಲ್ಲದು ಎಂದ ಅವರು, ಈಗ ತೀರ್ಪಿನ ಬಗ್ಗೆ ಮಾತ್ರ ನಾವು ವಿಚಾರ ಮಾಡುತಿದ್ದೇವೆ. ರಾಮಮಂದಿರ ನಿರ್ಮಾಣದ ಕುರಿತು ನಾವು ಮುಂದೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಿಸುತ್ತೇವೆ ಎಂದರು.

ಟಿಪ್ಪು ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಆತನಲ್ಲಿ ಎರಡು ಮುಖಗಳಿವೆ. ಆತ ಕ್ರೂರಿಯಾಗಿದ್ದ, ಸಾವಿರಾರು ಮಂದಿಯ ಹತ್ಯೆ ಮಾಡಿದ್ದ ಎಂಬುದು ಒಂದು ವಾದವಾದರೆ, ಆತ ಒಳ್ಳೆಯ ರಾಜ, ಉತ್ತಮ ಆಡಳಿತಗಾರನಾಗಿದ್ದ, ಒಳ್ಳೆಯ ಕೆಲಸವನ್ನೂ ಮಾಡಿದ್ದಾನೆ ಎಂದೂ ಹೇಳುತ್ತಾರೆ. ಹೀಗಾಗಿ ಆತನ ಎರಡೂ ಮುಖಗಳನ್ನು, ಸತ್ಯವನ್ನು ತಿಳಿಸುವ ಕೆಲಸವಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News