ಅಯೋಧ್ಯೆ ತೀರ್ಪು ದಿನ ಉದ್ವೇಗ ಬೇಡ: ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್

Update: 2019-11-07 14:37 GMT

ಮಂಗಳೂರು, ನ.7: ಅಯೋಧ್ಯೆಯ ವಿವಾದಾತ್ಮಕ ರಾಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ದೀರ್ಘ ವಿಚಾರಣೆ ಮುಗಿಸಿದೆ. ಶೀಘ್ರದಲ್ಲಿ ತೀರ್ಪು ಹೊರಬೀಳಲಿದೆ. ಜಿಲ್ಲೆಯ ಜನತೆ ಯಾವುದೇ ರೀತಿಯಲ್ಲಿ ಉದ್ವೇಗ ಕ್ಕೊಳಗಾಗದೇ ಶಾಂತಿ ಸೌಹಾರ್ದ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದಿಂದ ಬರುವ ತೀರ್ಪಿಗೆ ಸಂಬಂಧಿಸಿದಂತೆ ಯಾವುದೇ ಘಟನೆಗಳಿಗೆ ಕೂಡಲೇ ಸ್ಪಂದಿಸಬಾರದು. ಸಮಾಧಾನದಿಂದ ಪ್ರತಿಕ್ರಿಯಿಸಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ, ಪೊಲೀಸ್, ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸರ್ವ ಸಿದ್ಧತೆಯಲ್ಲಿದ್ದಾರೆ. ಜಿಲ್ಲೆಯ ಜನತೆಗೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ದುರ್ಘಟನೆಗಳು ನಡೆದ ಪಕ್ಷದಲ್ಲಿ ನೇರವಾಗಿ ಅವುಗಳಿಗೆ ಪ್ರತಿಕ್ರಿಯಿಸದೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ, ಶೀಘ್ರದಲ್ಲಿಯೇ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ. ತೀರ್ಪು ಯಾವ ತರನೂ ಬರಬಹುದು. ಕೆಲವರು ತಮ್ಮ ವಿರುದ್ಧ ಬಂದಿದೆ ಎನ್ನುವವರಿದ್ದರೆ, ಇನ್ನು ಕೆಲವರು ತಮ್ಮ ಪರ ಬಂದಿದೆ ಎನ್ನುವ ಭಾವನೆ ಇರುತ್ತದೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಸಂವಿಧಾನದ ಅಡಿಯಲ್ಲೇ ತೀರ್ಪು ಬರಲಿದೆ ಎಂದರು.

ಅಯೋಧ್ಯೆ ಪ್ರಕರಣವು ತಾರ್ಕಿಕ ಅಂತ್ಯಕ್ಕೆ ತಲುಪಿದೆ. ದೇಶದ ಎಲ್ಲ ನಾಗರಿಕರೂ ತಲೆಬಾಗಲೇಬೇಕು. ಯಾವುದೇ ಸಮುದಾಯಗಳ ಯುವಕರು ದುಡುಕಬಾರದು. ಉದ್ವೇಗಕ್ಕೆ ಒಳಗಾಗುವುದರಿಂದ ಅನಾಹುತಗಳೇ ಹೆಚ್ಚು. ಜನತೆ ಶಾಂತಿಯಿಂದ ವರ್ತಿಸಬೇಕು. ಎಲ್ಲ ಸಮುದಾಯಗಳ ಮುಖಂಡರು ಕಿರಿಯರಿಂದ ಹಿರಿಯರವರೆಗೂ ಸಮರ್ಪಕವಾಗಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಸಮುದಾಯಗಳ ಪ್ರಮುಖರು ಸಕ್ರಿಯರಾಗಿದ್ದಾರೆ. ಈಗಾಗಲೇ ಅಂತಹವರಿಗೆ ಮಾಹಿತಿ ನೀಡಲಾಗಿದ್ದು, ಸೌಹಾರ್ದ ಕಾಪಾಡುವ ಕೆಲಸವಾಗಬೇಕು. ದೇಶವೇ ಒಂದಾಗಿ ತೀರ್ಪನ್ನು ಸ್ವಾಗತಿಸಬೇಕು. ಇದಕ್ಕೂ ಮೀರಿ ಅತಿರೇಕಕ್ಕೆ ಹೋದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಸರ್ವ ಸಿದ್ಧತೆಯಲ್ಲಿದೆ ಎಂದರು.

ಟಿಪ್ಪು ಜಯಂತಿ: ಮೀಲಾದುನ್ನಬಿ-ಟಿಪ್ಪು ಜಯಂತಿ ಒಂದೇ ದಿನ ಬರಲಿವೆ. ಮೀಲಾದುನ್ನಬಿ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರಾಜ್ಯ ಸರಕಾರವು ಅಧಿಕೃತವಾಗಿ ಆಚರಿಸುತ್ತಿಲ್ಲ. ಸರಕಾರದ ಆದೇಶವನ್ನು ಪಾಲಿಸಲಾಗುವುದು. ಇಲ್ಲಿಯವರೆಗೆ ಯಾವುದೇ ಮೆರವಣಿಗೆಗಳು ನಡೆದಿಲ್ಲ. ವೈಯಕ್ತಿಕವಾಗಿ ಮೆರವಣಿಗೆ ಮಾಡಬಹುದು. ಆದರೆ ವಿಜೃಂಭಣೆ ಇರುವಂತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ದ.ಕ. ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮ ಆಯೋಜಿಸಲು ಪರವಾನಿಗೆ ಪಡೆಯಬೇಕು. ಅಂತಹ ಕಾರ್ಯಕ್ರಮನ್ನು ಚುನಾವಣಾ ಆಯೋಗಕ್ಕೆ ಸಂಬಂಧಿಸಿದವರು ವೀಡಿಯೊ ಮಾಡುತ್ತಾರೆ. ಜನತೆ ಸಹಕರಿಸಬೇಕು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್ ಮಾತನಾಡಿ, ಅಯೋಧ್ಯೆ ತೀರ್ಪು ಯಾರ ಪರ ಬಂದರೂ ಸಂಘಪರಿವಾರ ಸ್ವಾಗತಿಸಲಿದೆ. ತೀರ್ಪಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಹೇಳಿಕೆ, ಪೋಸ್ಟ್‌ಗಳನ್ನು ಪ್ರಕಟಿಸುವಂತಿಲ್ಲ. ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಬಾರದು. ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಬಾರದು. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಮಹಾತ್ಮಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಇಸ್ಮಾಯೀಲ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಇಬ್ರಾಹೀಂ ಕೊಡಿಜಾಲ್, ಧಾರ್ಮಿಕ ಮುಖಂಡ ಮುಹಮ್ಮದ್ ಸೂಫಿಯಾನ್ ಸಖಾಫಿ, ಯತೀಶ್ ಬೈಕಂಪಾಡಿ, ಪದ್ಮನಾಭ ಉಳ್ಳಾಲ, ಕೆ.ಎಸ್.ಮುಹಮ್ಮದ ಮಸೂದ್ ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

‘ಪೊಲೀಸರ ತಾರತಮ್ಯ ಸಲ್ಲದು’

ಸರ್ವೋಚ್ಚ ನ್ಯಾಯಾಲಯ ಪ್ರಕಟಿಸಲಿರುವ ಅಯೋಧ್ಯೆ ಪ್ರಕರಣದ ತೀರ್ಪಿಗೆ ತಲೆಬಾಗುತ್ತೇವೆ. ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಿದ್ದೇವೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಬಾರದು. ಪೊಲೀಸರ ತಾರತಮ್ಯ ತೋರಿಸುತ್ತಿರುವುದನ್ನು ಸಹಿಸಲಾಗುವುದಿಲ್ಲ ಎಂದು ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲಿ ಹಸನ್ ತಿಳಿಸಿದರು.

ಸ್ಥಳೀಯ ಪೊಲೀಸರು ನಿರ್ದಿಷ್ಟ ಸಮುದಾಯದ ಯುವಕರಿಗೆ ಸಮಸ್ಯೆ ಕೊಡುತ್ತಿದ್ದಾರೆ. ಇಂತಹ ಹಲವು ಅವಘಡಗಳು ಸಂಭವಿಸಿವೆ. ಸಮುದಾಯವೆಂದೂ ಕಾನೂನಿನ ವಿರುದ್ಧ ಹೋಗುವುದಿಲ್ಲ. ಭಾರತೀಯ ನೆಲೆಯಲ್ಲೇ ಬದುಕು ಸಾಗಿಸಲಿದ್ದೇವೆ. ತಾರತಮ್ಯ ಎಸಗುವ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಇಲ್ಲಿಯವರೆಗೆ ಯಾವುದೇ ಸಮುದಾಯದ ಮೇಲೆ ಪೊಲೀಸ್ ಇಲಾಖೆಯು ತಾರತಮ್ಯ ನಡೆಸಿಲ್ಲ. ಮುಂದೆಯೂ ನಡೆಯುವುದಿಲ್ಲ. ನಿರ್ದಿಷ್ಟ ಘಟನೆಗಳು ನಡೆದಿದ್ದರೆ ಮಾಹಿತಿ ನೀಡಿದ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಸಿಬ್ಬಂದಿ ಮಾತ್ರವಲ್ಲ, ಯಾವುದೇ ಉನ್ನತ ಅಧಿಕಾರಿ ತಪ್ಪು ಮಾಡಿದರೂ ಕಠಿಣ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಅಯೋಧ್ಯೆ ತೀರ್ಪು ದಿನದಂದು ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ. ಪೊಲೀಸ್ ಇಲಾಖೆಗೆ ಜಿಲ್ಲೆಯ ಜನತೆ ಸಹಕಾರ ನೀಡಬೇಕು. ದುರ್ಘಟನೆಗಳು ನಡೆಯುತ್ತವೆ ಎನ್ನುವ ಶಂಕೆ ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು.

- ಬಿ.ಎಂ.ಲಕ್ಷ್ಮೀಪ್ರಸಾದ್,
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ದೇಶಕ್ಕೆ ಮೊದಲ ಆದ್ಯತೆ. ಕೆಲವು ಕಿಡಿಗೇಡಿಗಳ ಕೃತ್ಯದಿಂದ ಆಯಾ ಸಮುದಾಯಗಳಿಗೆ ತೊಂದರೆಯಾಗುತ್ತಿದೆ. ಮಾದಕ ದ್ರವ್ಯಗಳಿಂದಲೇ ಹೆಚ್ಚು ಅವಘಡಗಳು ಸಂಭವಿಸುತ್ತಿದ್ದು, ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆ, ಪೋಸ್ಟ್ ಪ್ರಕಟಿಸಿದರೆ ಕ್ರಮ ಕೈಗೊಳ್ಳಬೇಕು.

- ಯು.ಟಿ.ಖಾದರ್, ಮಾಜಿ ಸಚಿವ, ಶಾಸಕ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಬ್ಯಾನರ್, ಬಂಟಿಂಗ್ಸ್ ಹಾಕುವಂತಿಲ್ಲ. ಧಾರ್ಮಿಕ ಪ್ರಕ್ರಿಯೆಗೆ ಯಾವುದೇ ತೊಂದರೆ ಇಲ್ಲ.

- ಡಾ.ಪಿ.ಎಸ್.ಹರ್ಷ,
ಮಂಗಳೂರು ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News