ನ.8: ಬೆಳ್ಳಿತೆರೆಗೆ ‘ಜಬರ್‌ದಸ್ತ್ ಶಂಕರ್’
ಉಡುಪಿ, ನ.7: ಜಲನಿಧಿ ಫಿಲಂಸ್ ಲಾಂಛನದಲ್ಲಿ ತಯಾರಾದ ತಯಾರಾದ ಚೊಚ್ಚಲ ತುಳು ಚಲನಚಿತ್ರ ‘ಜಬರ್‌ದಸ್ತ್ ಶಂಕರ’ (ನ.8) ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಸುಮಾರು 14 ಚಿತ್ರಮಂದಿರ ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ನಟ ದೇವಿದಾಸ್ ಕಾಪಿಕಾಡ್ ತಿಳಿಸಿದ್ದಾರೆ.
ನಗರದ ಆಶೀರ್ವಾದ್ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಗೊಳ್ಳುವ ತುಳುಚಿತ್ರದ ಕುರಿತು ವಿವರಿಸಲು ಇಂದು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಅವರು ಈ ವಿಷಯ ತಿಳಿಸಿದರು. ಅನಿಲ್‌ಕುಮಾರ್ ಹಾಗೂ ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ಅವರ ನಿರ್ಮಾಣದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಸಿದ್ಧಗೊಂಡಿದೆ ಎಂದರು.
ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್, ನೀತಾ ಅಶೋಕ್ ಮುಖ್ಯ ಪಾತ್ರಗಳಲ್ಲಿ ದ್ದಾರೆ. ದೇವದಾಸ್ ಕಾಪಿಕಾಡ್, ರಾಶಿ ಬಿ.ಸಾಯಿಕೃಷ್ಮ, ಸತೀಶ್ ಬಂದಲೆ, ಗೋಪಿನಾಥ ಭಟ್, ಗಿರೀಶ್ ಎಂ.ಶೆಟ್ಠಿ, ಲಕ್ಷ್ಮಣ್‌ಕುಮಾರ್ ಮಲ್ಲೂರ, ಪ್ರತೀಕ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಶರಣ್ ಕೈಕಂಬ, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ.
ಮಂಗಳೂರಿನ ಮೂರು ಹಾಗೂ ಮಣಿಪಾಲದ ಎರಡು ಮಲ್ಟಿಫ್ಲೆಕ್ಸ್‌ಗಳು ಸೇರಿದಂತೆ ಒಟ್ಟು 14 ಚಿತ್ರಮಂದಿರಗಳಲ್ಲಿ ನಾಳೆ ಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಮೂರು ಹಾಡುಗಳಿವೆ. ಜಿಲ್ಲೆಯ ಮೂಡಬಿದ್ರೆ, ಪಾಲಡ್ಕ, ಮಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ ಎಂದು ವಿವರಿಸಿದರು.
ಚಿತ್ರದ ಪ್ರೀಮಿಯರ್ ಶೋವನ್ನು 1800 ಮಂದಿ ವೀಕ್ಷಿಸಿದ್ದು, ನೋಡಿದ ಪ್ರತಿಯೊಬ್ಬರು ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವುದು ತಮಗೆ ಅತೀವ ಸಂತೋಷವನ್ನು ನೀಡಿದೆ. ಇದರಿಂದ ಚಿತ್ರ ಖಂಡಿತ ಯಶಸ್ಸುಗೊಳ್ಳುವ ವಿಶ್ವಾಸ ಚಿತ್ರ ತಂಡಕ್ಕಿದೆ ಎಂದು ಚಿತ್ರದ ನಾಯಕ ಅರ್ಜುನ ಕಾಪಿಕಾಡ್ ತಿಳಿಸಿದರು.
ತಮ್ಮ ಮುಂದಿನ ಯೋಜನೆಯ ಕುರಿತು ಮಾತನಾಡಿದ ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ ಕಾಪಿಕಾಡ್, ‘ಪುರುಷೋತ್ತಮ ಪ್ರಸಂಗ’ ಎಂಬ ಕನ್ನಡ ಚಿತ್ರಕ್ಕೆ ಪೂರ್ವಸಿದ್ಧತೆಗಳು ನಡೆಯುತ್ತಿದೆ. ಅಲ್ಲದೇ ನವೀನ್ ಪಡೀಲ್ ಹಾಗೂ ಬೋಜರಾಜ್ ವಾಮಂಜೂರು ಜೊತೆ ತುಳು ಚಿತ್ರ ನಿರ್ಮಿಸುವುದಾಗಿ ತಿಳಿಸಿದರು.