ಮೀನುಗಾರ ಮಹಿಳೆಯರ ಸಾಲ ಪಾವತಿಗೆ ಒತ್ತಾಯಿಸದಿರಲು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳಿಂದ ಒಪ್ಪಿಗೆ: ಸಚಿವ ಕೋಟ

Update: 2019-11-07 16:52 GMT

ಉಡುಪಿ, ನ.7: ಕರಾವಳಿ ಮೂರು ಜಿಲ್ಲೆಗಳ ಸುಮಾರು 23,000 ಮಹಿಳಾ ಮೀನುಗಾರರ 50,000ರೂ.ವರೆಗಿನ ಬ್ಯಾಂಕ್ ಸಾಲ ಮನ್ನಾ ಗೊಳಿಸಲು ಈಗಾಗಲೇ ನಿರ್ಧರಿಸಿದ್ದು, ಇದರಂತೆ ಈ ಮಹಿಳೆಯರ ಸಾಲವನ್ನು ಪಾವತಿಸಲು ಅವರ ಒತ್ತಡ ಹೇರದಿರಲು ಸಂಬಂಧಿತ ಬ್ಯಾಂಕುಗಳ ಒಪ್ಪಿಕೊಂಡಿವೆ ಎಂದು ರಾಜ್ಯ ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

   ಈ ಕುರಿತು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಮೀನುಗಾರಿಕಾ ಫೆಡರೇಷನ್‌ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕೆಲವು ಸೊಸೈಟಿಗಳ ಪದಾಧಿಕಾರಿಗಳ ಸಮಕ್ಷಮದಲ್ಲಿ ಇಂದು ನಡೆಸಿದ ಸಭೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು, ಸಾಲಮನ್ನಾ ವ್ಯಾಪ್ತಿಗೊಳಪಡುವ ಮಹಿಳೆಯರಿಂದ ಸಾಲ ಮರುಪಾವತಿಗೆ ಒತ್ತಡ ಹೇರದಿರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೋಟ, ಸಭೆಯ ಕೊನೆಗೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೀನುಗಾರರ ನಿಯೋಗದ ಒತ್ತಾಯದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಸುಮಾರು 23000 ಮೀನುಗಾರ ಮಹಿಳೆಯರು ಬ್ಯಾಂಕುಗಳಲ್ಲಿ ಹೊಂದಿರುವ ತಲಾ 50,000ರೂ.ವರೆಗಿನ ಒಟ್ಟು 62 ಕೋಟಿ ರೂ. ಮೊತ್ತದ ಸಾಲವನ್ನು ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಈ ಬಗ್ಗೆ ಜು.27ರಂದು ಅಧಿಕೃತ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು ಎಂದು ಕೋಟ ವಿವರಿಸಿದರು.

 ಆದರೆ ಸಾಲಮನ್ನಾ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗಿರುವುದರಿಂದ ಈ ನಡುವೆ ಬ್ಯಾಂಕ್ ಅಧಿಕಾರಿಗಳು ಸಾಲವನ್ನು ಪಾವತಿಸುವಂತೆ ಮೀನುಗಾರ ಮಹಿಳೆಯರ ಮೇಲೆ ಒತ್ತಡ ಹೇರುತಿದ್ದಾರೆ ಎಂದು ಅವರು ದೂರುತಿದ್ದು, ಇದರ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಅಧಿಕಾರಿಗಳ ಸಭೆ ಕರೆದು ಸಾಲ ವಸೂಲು ಮಾಡದಂತೆ ಸೂಚಿಸಿದ್ದೆ. ಆದರೆ ಇತ್ತೀಚೆಗೆ ಮತ್ತೆ ಮೀನುಗಾರರ ಸೊಸೈಟಿಗಳು ಸಾಲ ಮರುಪಾವತಿಸಲು ಒತ್ತಾಯಿಸುತ್ತಿರುವ ಬಗ್ಗೆ ದೂರನ್ನು ನೀಡಿದ್ದರಿಂದ ಇಂದಿನ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.

ಪ್ರಸ್ತಾಪಿತ ಸಾಲ ಮನ್ನಾ ಯೋಜನೆ ಆರ್ಥಿಕ ಇಲಾಖೆಯಲ್ಲಿ ಪರಿಶೀಲನೆಯಲ್ಲಿ ಬಾಕಿ ಇರುವುದರಿಂದ, ಅದರ ಹಣ ಪಾವತಿಯಾಗು ವವರೆಗೆ ಈ ಸಾಲಮನ್ನಾ ವ್ಯಾಪ್ತಿಯಲ್ಲಿ ಬರುವ ಯಾವುದೇ ಮಹಿಳೆಯರ ಸಾಲವನ್ನು ಕಟ್ಟಲು ಒತ್ತಾಯ ಮಾಡಬಾರದೆಂದು ನೀಡಿದ ಸೂಚನೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳು ಒಪ್ಪಿಕೊಂಡಿವೆ. ಹೀಗಾಗಿ ಮಹಿಳಾ ಸಾಲಗಾರರು ಇನ್ನು ಮುಂದೆ ಸಾಲ ಪಾವತಿಸಬೇಕಾಗಿಲ್ಲ ಎಂಬ ಸ್ಪಷ್ಟನೆಯನ್ನು ಅವರು ನೀಡಿದರು.

ಸಾಲಮನ್ನಾ ಯೋಜನೆಯಡಿ 2017-18ನೇ ಸಾಲಿನಲ್ಲಿ 14,441 ಮಂದಿ ಮಹಿಳೆಯರು ಹಾಗೂ 2018-19ನೇ ಸಾಲಿನಲ್ಲಿ 5851 ಮಂದಿ ಮಹಿಳೆಯರು ಲಾಭ ಪಡೆಯುತಿದ್ದಾರೆ ಎಂದೂ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಳುಹಿಸಿದ್ದು ಟಿಪ್ಪಣಿ:  ರಾಜ್ಯದ ಮದ್ಯದಂಗಡಿ ಹಾಗೂ ಬಾರ್‌ಗಳಿಗೆ ಹಿಂದು ದೇವ-ದೇವತೆಗಳ ಹೆಸರಿಡುವುದನ್ನು ವಿರೋಧಿಸಿ ತಾನು ಕ್ರಮಕ್ಕೆ ಮುಂದಾಗಿದ್ದೇನೆ ಎಂಬ ವರದಿಗಳ ಕುರಿತು ಅವರ ಪ್ರತಿಕ್ರಿಯೆ ಕೇಳಿದಾಗ, ಅಂಥ ಯಾವುದೇ ಕ್ರಮಕ್ಕೂ ತಾನು ಮುಂದಾಗಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಮದ್ಯದಂಗಡಿ ಹಾಗೂ ಬಾರ್‌ಗಳಿಗೆ ದೇವ-ದೇವತೆಗಳ ಹೆಸರಿಡುವ ಬಗ್ಗೆ ಆಕ್ಷೇಪಿಸಿ ಹಿರಿಯರೊಬ್ಬರು ನೀಡಿದ ದೂರು ಹಾಗೂ ಸಾರ್ವಜನಿಕರ ಸಲಹೆಯಂತೆ, ಈ ಬಗ್ಗೆ ಅಬಕಾರಿ ಇಲಾಖೆ ಹಾಗೂ ಕಾನೂನು ಇಲಾಖೆಗಳ ಅಭಿಪ್ರಾಯ ಪಡೆದು ಕಡತ ಮಂಡಿಸುವಂತೆ ತಾನು ಧಾರ್ಮಿಕ ದತ್ತಿ ಇಲಾಖೆಗೆ ಟಿಪ್ಪಣಿ ಕಳುಹಿಸಿದ್ದೆ. ಅದೊಂದು ಅಭಿಪ್ರಾಯ ಪಡೆಯುವ, ಚರ್ಚೆ ನಡೆಸುವ ಪ್ರಕ್ರಿಯೆ ಆಗಿತ್ತು.

ಇದನ್ನು ಜಾರಿಗೊಳಿಸುವ ಯಾವುದೇ ಉದ್ದೇಶ ತಮ್ಮಗಿರಲಿಲ್ಲ. ಸಲಹೆಯನ್ನು ಜಾರಿಗೆ ತರಲು ಹಲವು ಸಮಸ್ಯೆಗಳಿವೆ ಎಂಬುದನ್ನು ತಾನು ಬಲ್ಲೆ. ಆದರೆ ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶವಿದೆ ಎಂದ ಅವರು, ಇಷ್ಟಕ್ಕೆ ಯಾರೂ ಗಾಬರಿಯಾಗಬೇಕಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News