ದ.ಕ. ಜಿಲ್ಲೆಯಲ್ಲಿ 5 ಕೆಎಸ್ ಆರ್ ಪಿ ನಿಯೋಜನೆ: ಎಸ್ಪಿ ಲಕ್ಷ್ಮೀಪ್ರಸಾದ್

Update: 2019-11-09 08:56 GMT

ಬಂಟ್ವಾಳ, ನ.9: ಅಯೋಧ್ಯೆ ವಿವಾದ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಒಟ್ಟು 5 ಕೆಎಸ್ ಆರ್ ಪಿ ನಿಯೋಜಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

ಬಿ.ಸಿ.ರೋಡಿನ ಎಎಸ್ಪಿ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪೊಲೀಸರ ರಾತ್ರಿ ಹಾಗೂ ಹಗಲು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಸಮಾಜಘಾತಕ ಶಕ್ತಿಗಳನ್ನು ಗುರುತಿಸಲಾಗಿದ್ದು, ಅವರ ಕುರಿತು ನಿಗಾ ಇರಿಸಲಾಗಿದೆ. ಯಾರೇ ಶಾಂತಿ ಕದಡಲು ಯತ್ನಿಸಿದರೆ ಅವರ ವಿರುದ್ಧ ಕಠಿನ ಕ್ರಮ ಜರುಗಿಸಲಾಗುತ್ತದೆ.

ಸಾಮಾಜಿಕ ಜಾಲತಾಣಗಳ ಕುರಿತು ಕೂಡ ನಿಗಾ ಇರಿಸಲಾಗಿದೆ. ಬಂಟ್ವಾಳ ಉಪವಿಭಾಗ ವ್ಯಾಪ್ತಿಯಲ್ಲಿ ತಾನು, ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚುವರಿ ಎಸ್ಪಿ ಭದ್ರತಾ ಕಾರ್ಯದ ಕುರಿತು ನೇತೃತ್ವ ವಹಿಸಲಿದ್ದಾರೆ ಎಂದು ವಿವರಿಸಿದರು.

ಬಂಟ್ವಾಳ ವೃತ್ತದ ಸಂಪೂರ್ಣ ಜವಬ್ದಾರಿಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ‌ಟಿ.ಡಿ.ನಾಗರಾಜ್ ಅವರಿಗೆ ವಹಿಸಲಾಗಿದ್ದು, ರಾತ್ರಿ ಹಗಲು ಕಾರ್ಯಚರಿಸಲು 22 ಸೆಕ್ಟರ್ ಗಳನ್ನು ಒಳಗೊಂಡಂತೆ 300 ಪೋಲೀಸರು ನಿಯೋಜಿಸಲಾಗಿದೆ.

ಗಡಿಭಾಗದಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ 8 ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದ್ದು, ಜೊತೆಗೆ ಸಿಸಿ ಕ್ಯಾಮರಾಗಳ ನ್ನು ಅಳವಡಿಸಿ ಅಮೂಲಕ ವಿಶೇಷ ಕಣ್ಗಾವಲು ಇಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಶಯಾಸ್ಪದ ವ್ಯಕ್ತಿಗಳ ಮತ್ತು ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ.

ಶಾಂತಿ ಕಾಪಾಡುವ ಸಲುವಾಗಿ ಎಲ್ಲಾ ಸಮಾಜದ ಪ್ರಮುಖರನ್ನು ಕರೆದು ಸಮಾಲೋಚನೆ ನಡೆಸಲಾಗಿದೆ.

ಅತೀ ಸೂಕ್ಷ್ಮ ಪ್ರದೇಶಗಳಾದ ಬಂಟ್ವಾಳ, ಕೈಕಂಬ, ಫರಂಗಿಪೇಟೆ, ಸಾಲೆತ್ತೂರು, ಕನ್ಯಾನ, ಅಡ್ಯನಡ್ಕ, ವಿಟ್ಲ, ಕಬಕ ಆಸುಪಾಸಿನಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಎಸ್ಪಿ ಸೈದುಲ್ ಅದಾವತ್ ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News