ಎಂಎಸ್ ಇಝಡ್ ನಿಂದ ಕುತ್ಲೂರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಹಸ್ತಾಂತರ

Update: 2019-11-09 11:59 GMT

ಮಂಗಳೂರು, ನ.9:  ಮಂಗಳೂರು ವಿಶೇಷ ಆರ್ಥಿಕ ವಲಯದಿಂದ ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯ ಹಾಗೂ ಮಂಗಳೂರಿನ ಪತ್ರಿಕಾಭವನದಲ್ಲಿ ಆರಂಭಿಸಲಾಗುವ ಗ್ರಂಥಾಲಯಕ್ಕೆ ಪುಸ್ತಕಗಳ  ಹಸ್ತಾಂತರ ಕಾರ್ಯಕ್ರಮ ಶನಿವಾರ ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ವಿಶೇಷ ಆರ್ಥಿಕ ವಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ಭಂಡಾರ್ಕರ್ ಪುಸ್ತಕಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ವಿದ್ಯಾದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ, ಆದ್ದರಿಂದ ಪುಸ್ತಕಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಕುತ್ಲೂರು ಶಾಲೆಗೆ ಮುಂದೆಯೂ ಹೆಚ್ಚಿನ ನೆರವು ನೀಡಲಾಗುವುದು. ಅಲ್ಲಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ತೋರಿದಲ್ಲಿ ವಿಶೇಷವಾಗಿ ಪುರಸ್ಕರಿಸುವುದಾಗಿ ತಿಳಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್‍ ಇಂದಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಮಾತನಾಡಿ, ಜ್ಞಾನ ನಶಿಸಲಾಗದ ಸೊತ್ತು. ಪುಸ್ತಕಗಳ ಓದುವಿಕೆ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಕೊಡುಗೆಯಾಗಿ ನೀಡಿದ ಪುಸ್ತಕ ಮಕ್ಕಳಿಗೆ ಉಪಯೋಗವಾಗಲಿ ಎಂದರು.
ಕುತ್ಲೂರು ಶಾಲಾಭಿವೃದ್ಧಿ ಸಮಿತಿಯ ಸದಸ್ಯ ರಾಮಚಂದ್ರ ಭಟ್ ಮಾತನಾಡಿ, 13 ಮಕ್ಕಳಿದ್ದು ಮುಚ್ಚುವ ಹಂತದಲ್ಲಿದ್ದ ಕುತ್ಲೂರು ಶಾಲೆಯನ್ನು ಪತ್ರಕರ್ತರು ಸೇರಿಕೊಂಡು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ಈ ವರ್ಷ 68 ಮಕ್ಕಳು ಶಾಲೆಯಲ್ಲಿದ್ದಾರೆ. ಎಸ್‍ಇಝೆಡ್ ವತಿಯಿಂದ ನೀಡಿದ ಕಂಪ್ಯೂಟರ್‍ನಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಸಹಕಾರಿಯಾಗಿದೆ ಎಂದರು.
 ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ   ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು , ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News