ಬಿಜೆಪಿಯಿಂದ ಹಿಪಕ್ರಸಿ ರಾಜಕೀಯ: ರಮಾನಾಥ ರೈ

Update: 2019-11-09 11:59 GMT

ಮಂಗಳೂರು, ನ.9: ಅಲ್ಪಸಂಖ್ಯಾತ ಸಮುದಾಯದವರನ್ನು ತಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡಲು ಪ್ರಚೋದನೆ ನೀಡುವ ಮೂಲಕ ಬಿಜೆಪಿ ಹಿಪಕ್ರಸಿ ರಾಜಕೀಯ ನಡೆಸುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲ ಜಾತಿ ಧರ್ಮದವರನ್ನೂ ವಿಶ್ವಾಸಕ್ಕೆ ಪಡೆದು, ಸಮಾನ ಅವಕಾಶ ನೀಡಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದರು.

ಬಿಜೆಪಿಯ ಶಾಸಕರು, ಸಂಸದರು ಇನ್ನೂ ವಿಪಕ್ಷದಲ್ಲಿರುವಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ಅವರದ್ದೇ ಪಕ್ಷ ಆಡಳಿತದಲ್ಲಿದೆ. ಮಹಾನಗರ ಪಾಲಿಕೆಯ ಮೀಸಲಾತಿ ವಿಚಾರದಲ್ಲಿ ಚುನಾವಣೆಗೆ ನ್ಯಾಯಾಲಯದಲ್ಲಿ ತಡೆ ತಂದು ಆಡಳಿತಾಧಿಕಾರಿಯಾಗಿ ಪರೋಕ್ಷವಾಗಿ ಶಾಸಕರೇ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಿಗಳ ಸಭೆ ನಡೆಸುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದವರು ಅವರೇ ಎಂಬುದು ಅವರಿಗೆ ಅರಿವಿಲ್ಲ. ಬಿಜೆಪಿ ಶಾಸಕರು ಆಯ್ಕೆಯಾಗಿ 18 ತಿಂಗಳಾಗಿವೆ. ಹಾಗಿದ್ದರೂ ಆರೋಪಗಳಲ್ಲೇ ನಿರತರಾಗಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಕಾಂಗ್ರೆಸ್‌ಗೆ ಅನ್ವಯವಾಗುತ್ತದೆಯೇ ಹೊರತು ಇತರ ಪಕ್ಷಕ್ಕಲ್ಲ ಎಂದು ಹೇಳಿದ ಅವರು, ಜನತೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.

ಅಲ್ಪಸಂಖ್ಯಾತ ಸಮುದಾಯದ ಕೆಲವರು ಬಿಜೆಪಿಗೆ ಸೇರ್ಪಡೆಗೊಂಡ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಜೆ.ಆರ್. ಲೋಬೋ ಅವರು ಶಾಸಕರಾಗಿದ್ದು, ಐವನ್ ಡಿಸೋಜಾ ಅವರು ಮುಖ್ಯ ಸಚೇತರಾಗಿದ್ದ ಸಂದರ್ಭ ಮೇಯರ್ ಸ್ಥಾನದ ಆಯ್ಕೆ ಕಗ್ಗಂಟಾಗಿದ್ದ ಸಂದರ್ಭದಲ್ಲೂ ಹಿರಿತನಕ್ಕೆ ಗೌರವ ನೀಡಿ ಅದೇ ಸಮುದಾಯದ ಜೆಸಿಂತಾ ಅವರಿಗೆ ಅವಕಾಶ ಒದಗಿಸಲಾಗಿತ್ತು. ಹಾಗಾಗಿ ಮನಪಾದಲ್ಲಿ ಅಲ್ಪಸಂಖ್ಯಾತರಿಗೆ ಹಿಂದೆ ನೀಡಿದ ಸ್ಥಾನಕ್ಕಿಂತ ಕಡಿಮೆ ಮಾಡಿಲ್ಲ. ಕೆಲವರು ಅವರವರ ಲಾಭಕ್ಕಾಗಿ ಬಿಜೆಪಿ ಸೇರಿದ್ದಾರೆ. ಅವರು ಪಕ್ಷದಲ್ಲಿ ಇದ್ದರೂ ಅಷ್ಟೆ ಇಲ್ಲದಿದ್ದರೂ ಅಷ್ಟೇ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಸದಾಶಿವ ಉಳ್ಳಾಲ್, ಶ್ಯಾಲೆಟ್ ಪಿಂಟೋ, ಅನಿತಾ ಹೇಮನಾಥ ಶೆಟ್ಟಿ, ಪಿಪಿ ವರ್ಗೀಸ್, ಹೇಮನಾಥ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿಚಾರ ಸೂಕ್ಷ್ಮ ಹಾಗೂ ಭಾವನಾತ್ಮಕವಾಗಿದೆ. ಎಲ್ಲಾ ಸಮುದಾಯವು ಈ ವಿಚಾರವನ್ನು ಸೌಹಾರ್ದತೆಯಿಂದ ಬಗೆಹರಿಯಬೇಕೆಂದು ಅಪೇಕ್ಷಿಸಿತ್ತು. ಪಕ್ಷದ ರಾಷ್ಟ್ರೀಯ ನಾಯಕರು ಈ ಬಗ್ಗೆ ಉತ್ತಮವಾದ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ಕಾರ್ಯಕರ್ತರೆಲ್ಲರ ಅಭಿಪ್ರಾಯ ಕೂಡ ಅದೇ ಆಗಿದೆ. ನ್ಯಾಯಾಲಯದಿಂದ ಇತ್ಯರ್ಥ ವಾಗಿರುವುದರಿಂದ ಇದರ ಬಗ್ಗೆ ಯಾವುದೇ ಪ್ರಶ್ನೆಗಳಿಗೆ ಅವಕಾಶವಿಲ್ಲ

- ರಮಾನಾಥ ರೈ, ಮಾಜಿ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News