'ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಿ, ಹೊಸ ಯುಗಕ್ಕೆ ನಾಂದಿಯಾಗಲಿ'
ಉಡುಪಿ, ನ.9: ಸುಪ್ರೀಂ ಕೋರ್ಟ್ ಇಂದು ನೀಡಿದ ಅಯೋಧ್ಯೆ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವೀಕರಿಸಬೇಕು. ವೈಯಕ್ತಿಕವಾಗಿ ನನಗೆ ಈ ತೀರ್ಪು ಸಮ್ಮತವಾಗಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹೇಳಿದ್ದಾರೆ.
ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಟಿವಿಯಲ್ಲಿ ದೇಶದ ಉಚ್ಚ ನ್ಯಾಯಾಲಯ ನೀಡಿದ ಅಯೋಧ್ಯೆ ತೀರ್ಪನ ನೇರವಾಗಿ ವೀಕ್ಷಿಸಿದ ಪೇಜಾವರಶ್ರೀ, ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಅಲ್ಲೇ ಮಾತನಾಡಿ ತೀರ್ಪಿನ ಕುರಿತು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇಂದಿನ ತೀರ್ಪು, ದೇಶದಲ್ಲಿ ಹಿಂದು-ಮುಸ್ಲಿಂ ಸೌಹಾರ್ದತೆಯ ಹೊಸ ಯುಗವನ್ನು ಪ್ರಾರಂಭಿಸಲಿ ಎಂದು ಹಾರೈಸಿದ ಅವರು ಕೋರ್ಟ್ ನೀಡಲು ಹೇಳಿರುವ ಐದು ಎಕರೆ ಜಾಗದಲ್ಲಿ ಮಸೀದಿಯ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು. ಅದೇ ರೀತಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ಪರಸ್ಪರ ಕೈಜೋಡಿಸಬೇಕು. ಹಿಂದೂಗಳಿಗೆ ರಾಮಜನ್ಮಭೂಮಿಯ ಹಕ್ಕು ಹಾಗೂ ಮುಸ್ಲಿಮರಿಗೆ ಹೊಸ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವ ಸುಪ್ರೀಂ ಕೋರ್ಟ್ ತೀರ್ಪು ಹಿಂದೂ-ಮುಸ್ಲಿಂ ಸೌಹಾರ್ದತೆ, ಬಾಂಧವ್ಯದ ಹೊಸ ಯುಗಕ್ಕೆ ನಾಂದಿ ಹಾಡಲಿ ಎಂದು ಹಾರೈಸಿದರು.
ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ. ಮುಸ್ಲಿಮರಿಗೆ ಮಸೀದಿಗೆ ಜಾಗ ಮುಖ್ಯ. ಹೀಗಾಗಿ ಈ ತೀರ್ಪು ಹಿಂದೂ ಮುಸ್ಲಿಮರಲ್ಲಿ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ. ಹಿಂದೂಗಳು ಮತ್ತು ಮುಸ್ಲಿಮರು ಒಟ್ಟು ಸೇರಿ ಸೂಕ್ತ ಸ್ಥಳವನ್ನು ಮಸೀದಿಗೆ ಕೊಡಬೇಕು. ಅದೇ ರೀತಿ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ತೀರ್ಪಿನ ಹಿನ್ನೆಲೆಯಲ್ಲಿ ವಿಜಯೋತ್ಸವ, ಮೆರವಣಿಗೆ ಬೇಡ ಎಂದು ನಿನ್ನೆಯೇ ಹೇಳಿದ್ದೆ. ಈಗಲೂ ಅದನ್ನು ಪುನರುಚ್ಛರಿಸುವೆ. ಮುಸ್ಲಿಮರ ಸಹ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ದೇಶದ ಎಲ್ಲರೂ ಕೋಮು ಸೌಹಾರ್ದದಿಂದ ಇರಬೇಕು. ಪರಸ್ಪರರ ಶ್ರದ್ಧೆ, ನಂಬಿಕೆಯನ್ನು ಗೌರವಿಸಬೇಕು ಎಂದು ಮನವಿ ಮಾಡುವೆ ಎಂದರು.
ವೈಯಕ್ತಿಕವಾಗಿ ಜೀವನದ ಬಹುದೊಡ್ಡ ಅಪೇಕ್ಷೆಯೊಂದು, ನನ್ನ ಜೀವಿತಾವಧಿ ಯ ಈ ಇಳಿವಯಸ್ಸಿನಲ್ಲಿ ಈಡೇರಿದ ಬಹುದೊಡ್ಡ ಸಂತೋಷವನ್ನು ಈ ತೀರ್ಪು ನೀಡಿದೆ. ಈ ತೀರ್ಪು ದೇಶದ ಎಲ್ಲಾ ಮತೀಯರ, ಎಲ್ಲಾ ಕೋಮುಗಳ ಪರಸ್ಪರ ಸೌಹಾರ್ದತೆಗೆ ಯಾವುದೇ ರೀತಿಯ ಭಂಗವನ್ನುಂಟು ಮಾಡದೆಂದು ನಾನು ಆಶಿಸುತ್ತೇನೆ ಎಂದರು.
ಇನ್ನು ಮುಂದಿನ ವಿಷಯವನ್ನು ಸಂತರು ವಿಚಾರ ಮಾಡುತ್ತಾರೆ. ಇದರ ಹೆಚ್ಚಿನ ಹೊಣೆಗಾರಿಕೆಯನ್ನು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸರಕಾರಕ್ಕೆ ವಹಿಸಿದೆ. ಹೀಗಾಗಿ ಇದರಲ್ಲಿ ಸರಕಾರಕ್ಕೂ ಹೊಣೆಗಾರಿಕೆ ಇದೆ, ಸಂತರಿಗೂ ಹೊಣೆಗಾರಿಕೆ ಇದೆ. ಎಲ್ಲರೂ ಸೂಕ್ತ ರೀತಿಯನ್ನು ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರವಿವಾರ ಪೇಜಾವರಶ್ರೀ ದಿಲ್ಲಿಗೆ
ನಾಳೆ ಬೆಳಗ್ಗೆ 11 ಗಂಟೆಗೆ ಹೊಸದಿಲ್ಲಿಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಿಂದೂ ಸಂತರು, ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಪ್ರಮುಖರ ಸಭೆಯೊಂದು ನಡೆಯಲಿದೆ. ಇದರಲ್ಲಿ ಎಲ್ಲರೂ ಸೇರಿ ದೇಶದಲ್ಲಿ ಶಾಂತಿ-ಸೌಹಾರ್ದತೆಗೆ ಕರೆ ಕೊಡುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಭಾಗವಹಿಸಲು ತನಗೂ ದಿಲ್ಲಿಯಿಂದ ಆಹ್ವಾನ ಬಂದಿದ್ದು, ನಾಳೆ ಬೆಳಗ್ಗೆ 7ಗಂಟೆಗೆ ವಿಶೇಷ ವಿಮಾನವೊಂದರಲ್ಲಿ ಹೊಸದಿಲ್ಲಿಗೆ ತೆರಳಲಿದ್ದೇನೆ ಎಂದರು.
ಇದರಿಂದ ನಾಳೆ ಅಸ್ಸಾಂನ ಗುವಾಹತಿಗೆ ತೆರಳಿ ಬ್ರಹ್ಮಪುತ್ರ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಯೋಜನೆಯನ್ನು ನ.11ಕ್ಕೆ ಮುಂದೂಡಿರುವುದಾಗಿ ಅವರು ತಿಳಿಸಿದರು.
ಕಾಶಿ, ಮಥುರಾ ವಿವಾದ ಬೇಡ
ಅಯೋಧ್ಯೆಯ ಜನ್ಮಭೂಮಿ ವಿವಾದ ಬಗೆಹರಿದಿರುವುದರಿಂದ, ಕಾಶಿ ಹಾಗೂ ಮಥುರಾ ವಿವಾದವನ್ನು ಮತ್ತೆ ಕೆದಕುವ ಅಗತ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳು ವುದರಿಂದ ತೃಪ್ತಿ ಪಟ್ಟು ಕಾಶಿ-ಮಥುರಾ ವಿವಾದವನ್ನು ಬೆಳೆಸುವುದು ಬೇಡ ಎಂಬುದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ ಎಂದು ಪೇಜಾವರಶ್ರೀ ನುಡಿದರು.
ಬ್ರಿಟಿಷರ ಆಡಳಿತ ಸಮಯದಲ್ಲಿ ಪಂಡಿತ ಮದನಮೋಹನ್ ಮಾಳವೀಯರ ನೇತೃತ್ವದಲ್ಲಿ ಶ್ರೀಕೃಷ್ಣ ಮಂದಿರದ ನಿರ್ಮಾಣ ವಾಗಿದೆ. ಅದೇ ರೀತಿ ಕಾಶಿಯ ವಿಶ್ವನಾಥ ಮಂದಿರವೂ ಸರಕಾರದ ಸುಪರ್ದಿಯಲ್ಲಿ ಚೆನ್ನಾಗಿಯೇ ನಡೆಯುತ್ತಿದೆ. ಜನರು ಅದನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಈ ವಿವಾದವನ್ನು ಮತ್ತೆ ಕೆದಕುವ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.