ಜಾತ್ಯತೀತ ನೆಲೆಯ ತೀರ್ಪು : ಸೀತಾರಾಂ ಬೇರಿಂಜ
ಮಂಗಳೂರು: ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿರೀಕ್ಷಿತ, ವಾಸ್ತವ ಹಾಗೂ ಜಾತ್ಯತೀತ ನೆಲೆಯಲ್ಲಿ ನೀಡಿದ ತೀರ್ಪು ಇದಾಗಿದೆ. ಇದು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ. ಅಂತೂ ಧಾರ್ಮಿಕ ನೆಲೆಯಲ್ಲಿ ರಾಜಕೀಯ ಮಾಡಿ ಸಮಾಜವನ್ನು ಒಡೆಯುವ ದುಷ್ಕೃತ್ಯಗಳಿಗೆ ಈ ತೀರ್ಪು ತೆರೆ ಎಳೆದಿದ್ದು ಪ್ರಜ್ಞಾವಂತರು ನಿಟ್ಟುಸಿರು ಬಿಡುವಂತಾಯಿತು. ಬೇರೆಲ್ಲೋ ನಡೆಯುವ ಅನಾಚಾರಗಳಿಗೆ ಸ್ಪಂದಿಸುವ ಬದಲು ಊರಿನ ಜನರೊಂದಿಗಿದ್ದು ಕೋಮು ಸೌಹಾರ್ದ ಉಳಿಸಿ ಬೆಳೆಸಬೇಕು. ಈ ಐತಿಹಾಸಿಕ ತೀರ್ಪು ಮತ ಸೌಹಾರ್ದಕ್ಕೆ ಪ್ರೇರಣೆಯಾಗಲಿ.
- ವಿ. ಸೀತಾರಾಂ ಬೇರಿಂಜ
ಕಾರ್ಯದರ್ಶಿ, ಸಿಪಿಐ -ಮಂಗಳೂರು ತಾಲೂಕು ಸಮಿತಿ
ನಿರೀಕ್ಷಿತ ತೀರ್ಪು
ಈ ತೀರ್ಪು ನಿರೀಕ್ಷಿತ. ಆದರೆ ಈ ತೀರ್ಪಿನ ಕೆಲವು ಅಂಶಗಳು ಬಹುಸಂಖ್ಯಾತರನ್ನು ಮೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಸಿದಂತೆ ಭಾಸವಾಗುತ್ತದೆ. ಸಂವಿಧಾನಕ್ಕೆ ಬದ್ಧವಾಗಿ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಪು ನೀಡಿದ್ದರೆ ಇಂತಹ ಅಂಶಗಳ ಉಲ್ಲೇಖ ಅಗತ್ಯವಿರಲಿಲ್ಲ. ಮಂದಿರ ನಿರ್ಮಾಣಕ್ಕೆ ಕಾಲಮಿತಿ ಹಾಕಿ ನಿಯಮಾವಳಿ ರೂಪಿಸಲು ನಿರ್ದೇಶನ ನೀಡುವುದು ಕೂಡಾ ಪ್ರಶ್ನಾರ್ಹವಾಗಿದೆ. ವಿವಾದವನ್ನು ಮುಂದಿನ ನಮ್ಮ ಪೀಳಿಗೆಗೆ ಬಳುವಳಿಯಾಗಿ ಕೊಡುವ ಬದಲು ನೋವಿನ ಮಧ್ಯೆಯೂ ತೀರ್ಪನ್ನು ಗೌರವಿಸುವ ಅಗತ್ಯವಿದೆ.
- ಅಲಿ ಹಸನ್, ಅಧ್ಯಕ್ಷರು
ಮಂಗಳೂರು ಸೆಂಟ್ರಲ್ ಕಮಿಟಿ
ತೀರ್ಪಿನಿಂದ ರಾಜಕಾರಣಿಗಳಿಗೆ ನಿರಾಶೆ
ಕಳೆದ 27 ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಅಯೋಧ್ಯೆಯ ಭೂ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿರುವುದು ಸಂತಸದ ವಿಚಾರ. ಅಯೋಧ್ಯೆ ವಿಷಯವು ರಾಜಕೀಯ ನಾಯಕರುಗಳು ಚುನಾವಣೆ ಸಂದರ್ಭದಲ್ಲಿ ಬಳಸುತ್ತಿದ್ದ ಪ್ರಮುಖ ವಾಕ್ ಅಸ್ತ್ರವಾಗಿತ್ತು. ಇಂದಿನ ತೀರ್ಪು ರಾಜಕೀಯ ನಾಯಕರುಗಳಿಗೆ ನಿರಾಶೆಯನ್ನುಂಟುಮಾಡಿರುವುದು ಸತ್ಯ. ಏನೇ ಆಗಲಿ, ಇಷ್ಟೊಂದು ವಿಳಂಬವಾಗಿಯಾದರೂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿರುವುದಕ್ಕೆ ಜನಸಾಮಾನ್ಯರಿಗೆ ನೆಮ್ಮದಿಯನ್ನು ಕೊಟ್ಟಿದೆ. ಕೋರ್ಟಿನ ತೀರ್ಪಿನಂತೆ ಸುಂದರವಾದ ಮಂದಿರ ನಿರ್ಮಾಣವಾಗಲಿ. ಸರಕಾರ ಮಸೀದಿಗೆಂದು ಕೊಡಲಿರುವ 5 ಎಕರೆ ಜಾಗದಲ್ಲಿ ಮಸೀದಿ ನಿರ್ಮಾಣಗೊಂಡು ಮಸೀದಿ ಮತ್ತು ಮಂದಿರ ಒಂದಕ್ಕೊಂದು ತಾಗಿ ನಿಂತು ಭವ್ಯ ಭಾರತದ ಸೌಹರ್ದತೆಗೆ ಸಾಕ್ಷಿಯಾಗಲಿ.
- ಇಸ್ಹಾಕ್ ಸಿ.ಐ. ಫಜೀರ್, ಲೇಖಕರು
ಪ್ರಸ್ತುತ ಸನ್ನಿವೇಶದಲ್ಲಿ ಒಪ್ಪಲೇಬೇಕಾಗಿದೆ: ಅಬ್ದುಲ್ ಅಝೀಝ್ ಪುಣಚ
ಬಾಬರಿ ಮಸೀದಿ-ರಾಮಜನ್ಮಭೂಮಿ ಕುರಿತಾದ ತೀರ್ಪು ಇಂದಿನ ಪರಿಸ್ಥಿತಿಯಲ್ಲಿ ಸ್ವೀಕಾರರ್ಹ ಎಂದು ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ.
ಸುದೀರ್ಘ ವರ್ಷಗಳ ಕಾಲ ಭಾರತೀಯ ಸಮುದಾಯದ ಸೊತ್ತು, ವಿತ್ತ ಹಾಗೂ ಎರಡು ಸಾವಿರ ಮಂದಿಯ ಮರಣಕ್ಕೂ ಕಾರಣವಾದ ಪ್ರಸ್ತುತ ಪ್ರಕರಣದ ತೀರ್ಪನ್ನು ಭಾರತದ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ದೃಷ್ಟಿಯಿಂದ ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಭಾರತ ದೇಶದ ಪರಮೋಚ್ಚ ಕಾನೂನಿಗೆ ತಲೆಬಾಗುವ ನಿಟ್ಟಿನಲ್ಲಿ ಇನ್ನು ಈ ಪ್ರಕರಣದ ಬಗ್ಗೆ ಯಾವುದೇ ರೀತಿಯ ತಕರಾರೆತ್ತ ಬಾರದು. ಅಯೋಧ್ಯೆ ತೀರ್ಪು ಹಿಂದೂ ಮುಸ್ಲಿಂ ಸಮುದಾಯದ ಮಧ್ಯೆ ಏಕತೆ ಸಾಧಿಸಲು ಕಾರಣವಾಗಬೇಕು ಎಂದು ಅವರು ತಿಳಿಸಿದ್ದಾರೆ.