ಬಿಲ್ಲಾಡಿ: ನಿಷೇಧಾಜ್ಞೆ ಉಲ್ಲಂಘಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಉಡುಪಿ, ನ. 9: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶನಿವಾರ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಮಧ್ಯೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಜಾನುವಾರುಕಟ್ಟೆ ಎಂಬಲ್ಲಿ ಯುವಕರ ತಂಡವೊಂದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವ ಬಗ್ಗೆ ವರದಿಯಾಗಿದೆ.
ಶನಿವಾರ ಬೆಳಗ್ಗೆ ರಸ್ತೆಯಲ್ಲಿ ಸ್ಥಳೀಯ ಯುವಕರ ತಂಡ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ನಿಷೇಧಾಜ್ಞೆ ಉಲ್ಲಂಘಿಸಿರುವುದರಿಂದ ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಕಟ್ಟೆಚ್ಚರ: ತೀರ್ಪು ಹೊರ ಬೀಳುತ್ತಿದ್ದಂತೆ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶನಿವಾರ ಬೆಳಗ್ಗೆ 10ಗಂಟೆಯಿಂದ ರವಿವಾರ ಬೆಳಗ್ಗೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿತ್ತು. ಅಲ್ಲದೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.
ಯಾವುದೇ ಅಹಿತಕರ ಘಟನೆ ಸಂಭವಿಸದೆ ಉಡುಪಿ ಜಿಲ್ಲೆ ಶಾಂತವಾಗಿದ್ದು, ಏಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ನಾಲ್ಕು ಕೆಎಸ್ಆರ್ಪಿ ತುಕಡಿ ಯನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಕುಂದಾಪುರ, ಬೈಂದೂರು ತಾಲೂಕುಗಳಿಗೆ ಒಂದು ಮತ್ತು ಉಡುಪಿ, ಕಾರ್ಕಳ, ಕಾಪು ತಾಲೂಕಿಗಳಿಗೆ ಒಂದು ವಿದ್ವಂಸಕ ಕೃತ್ಯ ತಪಾಸಣಾ ತಂಡ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಿಶೇಷ ತಂಡವಾಗಿ ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ಮದ್ಯ ಮಾರಾಟ ಬಂದ್: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಎಸ್ಪಿ ನಿಶಾ ಜೇಮ್ಸ್ ನೀಡಿದ ವರದಿಯಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಮದ್ಯ ಮಾರಾಟದ ಮಾಡುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳನ್ನು ನ.11ರ ಬೆಳಗ್ಗೆ 6ಗಂಟೆವರೆಗೆ ಮುಚ್ಚಲು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಬರಹಗಳು ಪೋಸ್ಟ್ ಮಾಡಿರುವ ಬಗ್ಗೆ ವರದಿಯಾಗಿಲ್ಲ. ಎಲ್ಲವೂ ಶಿಸ್ತಿನಿಂದ ನಡೆಯುತ್ತಿದೆ. ಈ ಸಂಬಂಧ ವಿಶೇಷ ನಿಗಾ ವಹಿಸಲಾಗಿದೆ. ತೀರ್ಪಿಗೆ ಸಂಬಂಧಿಸಿ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಸಂದೇಶ ಹಾಕುವವರ ಮತ್ತು ಆ ಗ್ರೂಪಿನ ಅಡ್ಮಿನ್ ವಿರುದ್ಧ ಕಾನೂನು ಕ್ರಮ ಜರಗಿಸ ಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಮಿಲಾದುನ್ನಬಿ: ಜಿಲ್ಲೆಯಲ್ಲಿ ಶಾಂತಿಸಭೆ
ನ.10ರಂದು ಉಡುಪಿ ಜಿಲ್ಲೆಯಲ್ಲಿ ನಡೆಯುವ ಮಿಲಾದುನ್ನಬಿ ಮೆರವಣಿಗೆ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಪ್ರಮುಖ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಸಿ ಶಾಂತಿ ಸಭೆ ನಡೆಸಲಾಗಿದೆ.
‘ತೀರ್ಪು ಘೋಷಣೆಯಾಗುವ ಮೊದಲು ಆಯಾ ಪೊಲೀಸ್ ಠಾಣೆ ಗಳಲ್ಲಿ ಶಾಂತಿಸಭೆಯನ್ನು ನಡೆಸಿದ್ದು, ಇದೀಗ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೆ ಇಂದು ಶಾಂತಿಸಭೆಯನ್ನು ನಡೆಸಲಾಗಿದೆ. ಯಾವುದೇ ರೀತಿಯಲ್ಲಿ ಕಾನೂನಿಗೆ ಭಂಗ ತರುವ ಕೆಲಸ ಆಗದಂತೆ ಮುಖಂಡರಿಗೆ ತಿಳಿಹೇಳಲಾಗಿದೆ. ಅಲ್ಲದೆ ಮಿಲಾದುನ್ನಬಿ ಮೆರವಣಿಗೆ ನಡೆಯುವ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸ ಲಾಗುತ್ತದೆ’ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.