ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ದ.ಕ. ಜಿಲ್ಲೆಯಲ್ಲಿ ಸಕಾರಾತ್ಮಕ ಸ್ಪಂದನೆ

Update: 2019-11-09 16:55 GMT

ಮಂಗಳೂರು, ನ.9: ಅಯೋಧ್ಯೆಯ ವಿವಾದಿತ ಪ್ರದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಶನಿವಾರ ನೀಡಿರುವ ತೀರ್ಪನ್ನು ದ.ಕ. ಜಿಲ್ಲೆಯ ಜನತೆ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ.

ಬಹುತೇಕವಾಗಿ ತೀರ್ಪನ್ನು ಜನತೆ ಸ್ವಾಗತಿಸಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯಿಂದಲೇ ಸೌಹಾರ್ದ ಕಾಯ್ದುಕೊಂಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸುವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಶಾಂತಿಸಭೆಯಲ್ಲಿ ಸರ್ವಧರ್ಮಗಳ ನಾಯಕರು ತೀರ್ಮಾನಿಸಿದ್ದರು. ರಾಜಕೀಯ ನಾಯಕರು ಕೂಡ ನ್ಯಾಯಾಲ ಯದ ತೀರ್ಪಿಗೆ ತಲೆಬಾಗುವಂತೆ ಹಾಗೂ ಸೌಹಾರ್ದತೆಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರು.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತೀರ್ಪು ಹೊರಬೀಳುವ ಮುನ್ನವೇ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು.
ಶನಿವಾರ ಪೂರ್ವಾಹ್ನ 10 ಗಂಟೆಯಿಂದ ನ.11ರ ಸಂಜೆ 6ರವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಭಾರತೀಯ ದಂಡ ಸಂಹಿತೆ ಪ್ರಕ್ರಿಯಾ ಸಂಹಿತೆಯ ಕಲಂ 144ರ ಅನ್ವಯ ನಿರ್ಬಂಧನಾ ಆಜ್ಞೆ ವಿಧಿಸಿರುವುದಾಗಿ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಈ ನಡುವೆ ಮಂಗಳೂರು ನಗರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಶಸಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಪರಾಧ ಹಿನ್ನೆಲೆಯುಳ್ಳವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.

ಅಲ್ಲದೆ, ಮಂಗಳೂರು ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾ ಗಿದೆ. ಅಂತರ್ ರಾಜ್ಯ ಗಡಿಗಳಲ್ಲಿ ಪೊಲೀಸರನ್ನು ನಿಯೋಜಿಸಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು.

ಇಬ್ಬರು ಡಿಸಿಪಿಗಳು, 15 ಇನ್‌ಸ್ಪೆಕ್ಟರ್‌ಗಳು, 40 ಪಿಎಸ್‌ಐಗಳು, 100 ಎಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ, ಕೇಂದ್ರದ ಅರೆಸೇನಾ ಪಡೆ, ಹೋಮ್‌ಗಾರ್ಡ್ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರು ನಗರದಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ. ವಿಜಯೋತ್ಸವ ಅಥವಾ ಯಾವುದೇ ಮೆರವಣಿಗೆ ನಡೆಸದಂತೆ ಎಂದು ಕಮಿಷನರ್ ಸ್ಪಷ್ಟ ಸೂಚನೆ ನೀಡಿದ್ದಾರೆ.

ಬಾರ್, ರೆಸ್ಟೋರೆಂಟ್ ಬಂದ್: ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೆ, ಜಿಲ್ಲೆಯ ಎಲ್ಲ ಮದ್ಯದಂಗಡಿ, ರೆಸ್ಟೋರೆಂಟ್‌ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸಿಂದೂ ಬಿ.ರೂಪೇಶ್ ಆದೇಶ ಹೊರಡಿಸಿದ್ದರು. ಜನತೆ ಕೂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ.

ಅಯೋಧ್ಯೆ ತೀರ್ಪನ್ನು ಸಮಾನತೆಯಿಂದ ಸ್ವಾಗತಿಸೋಣ. ಹಿಂದೂ - ಮುಸ್ಲಿಂ ಸಹಿತ ಸರ್ವರು ಭಾರತ ಮಾತೆಯ ಮಡಿಲಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳೋಣ.
- ಕೋಟ ಶ್ರೀನಿವಾಸ ಪೂಜಾರಿ,
ಮುಜರಾಯಿ, ಮೀನುಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ

ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ರಾಜ್ಯದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯನ್ನು ಕಾಪಾಡುತ್ತಾ ರಾಮಮಂದಿರ ರಾಷ್ಟ್ರ ಮಂದಿರವಾಗಲಿ ಎಂದು ಆಶಿಸೋಣ.
-ನಳಿನ್‌ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ

ಅಯೋಧ್ಯೆ ತೀರ್ಪನ್ನು ಎಐಸಿಸಿ ಸ್ವಾಗತಿಸಿದೆ. ಅಯೋಧ್ಯೆಯ ವಿಚಾರದಲ್ಲಿ ಬಿಜೆಪಿಯವರು ಹಲವು ವರ್ಷಗಳಿಂದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇಂತಹ ವಿಷಯದಲ್ಲಿ ಬಿಜೆಪಿಯವರು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು.
- ಐವನ್ ಡಿಸೋಜ,
ವಿಧಾನ ಪರಿಷತ್ ಸದಸ್ಯ

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಸಾಮರಸ್ಯದ ವಿಚಾರ ಗಮನದಲ್ಲಿಟ್ಟುಕೊಂಡು ತೀರ್ಪು ನೀಡಲಾಗಿದೆ. ಎಲ್ಲರೂ ಸೌಹಾರ್ದದಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು.
- ಕೆ.ಹರೀಶ್‌ಕುಮಾರ್,
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಅಯೋಧ್ಯೆ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರಕಟಿಸಿರುವ ತೀರ್ಪು ಸ್ವಾಗತಾರ್ಹ. ಭಾರತೀಯ ಸಂವಿಧಾನದ ಅಡಿಯಲ್ಲಿ ಬಂದ ತೀರ್ಪನ್ನು ಒಪ್ಪಲೇಬೇಕು. ಶಾಂತಿ ಕಾಪಾಡಿಕೊಳ್ಳುವಂತೆ ಸಮುದಾಯಕ್ಕೆ ಕರೆ ನೀಡಿದ್ದೆವು. ಯಾವುದೇ ಅಹಿತಕರ ಘಟನೆ ನಡೆಯದಿರುವುದು ಸಂತಸದ ವಿಷಯ.
- ಮುಹಮ್ಮದ್ ಮಸೂದ್,
ಅಧ್ಯಕ್ಷರು, ಮುಸ್ಲಿಂ ಸೆಂಟ್ರಲ್ ಕಮಿಟಿ
ದ.ಕ. ಮತ್ತು ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News