ತನ್ನ ಕ್ಷೇತ್ರ ವ್ಯಾಪ್ತಿಯ 30 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ : ಮಾಜಿ ಶಾಸಕ ಜೆ.ಆರ್.ಲೋಬೊ
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಜೆ.ಆರ್.ಲೋಬೊ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಂಗಳೂರು ಮಹಾನಗರ ಪಾಲಿಕೆಯ 38 ವಾರ್ಡ್‌ಗಳಲ್ಲಿ ಬಿರುಸಿನ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ 38 ವಾರ್ಡ್‌ಗಳ ಪೈಕಿ 24 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಹಾಗಾಗಿ ಈ ಬಾರಿ ಕನಿಷ್ಠ 30 ವಾರ್ಡ್‌ಗಳಲ್ಲಾದರೂ ಕಾಂಗ್ರೆಸ್ ಅಭ್ಯರ್ಥಿಗಳು ಕಾರ್ಪೊರೇಟರ್‌ಗಳಾಗಿ ಮಿಂಚಬೇಕು ಎಂಬ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಮಾಜಿ ಕೆಎಎಸ್ ಅಧಿಕಾರಿಯೂ ಆಗಿರುವ ಜೆ.ಆರ್.ಲೋಬೊ ಅವರ ಜೊತೆ ‘ವಾರ್ತಾಭಾರತಿ’ ಮಾತುಕತೆ ನಡೆಸಿತು.
ಹೇಗಿದೆ, ಚುನಾವಣಾ ಪ್ರಚಾರ?
ಪ್ರಚಾರ ಬಿರುಸಾಗಿಯೇ ಇದೆ. ಸಾರ್ವಜನಿಕ ಸಭೆಗಳಿಗಿಂತಲೂ ಮನೆ ಮನೆ ಭೇಟಿ ಮಾಡಿ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ.
ಯಾವ ಆಧಾರದ ಮೇಲೆ ಮತದಾರರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದೀರಿ?
ನಾನು ಶಾಸಕನಾಗಿದ್ದಾಗ ಸರಕಾರದಿಂದ ವಿವಿಧ ಯೋಜನೆಯಡಿ ಕೋಟ್ಯಂತರ ರೂಪಾಯಿಯ ಅನುದಾನವನ್ನು ತಂದಿದ್ದೇನೆ. ಕಾಮಗಾರಿ ಮಾಡಿಸಿದ್ದೇನೆ. ಅದರಲ್ಲೂ ಮನಪಾದ 38 ವಾರ್ಡ್‌ಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರದಿಂದ 2,500 ಕೋ.ರೂ.ಗೂ ಅಧಿಕ ಹಣ ವಿನಿಯೋಗಿಸಿದ್ದೇನೆ. ಅಂದರೆ ರಸ್ತೆ ಕಾಂಕ್ರಿಟೀಕರಣ, ಕುಡಿಯುವ ನೀರು, ದಾರಿದೀಪ ಹೀಗೆ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಅದನ್ನೇ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿರುವೆ.
ಪ್ರತಿಕ್ರಿಯೆ ಹೇಗಿದೆ ? 38ರ ಪೈಕಿ ಎಷ್ಟು ವಾರ್ಡ್‌ಗಳಲ್ಲಿ ಗೆಲ್ಲುವ ವಿಶ್ವಾಸವಿದೆ ?
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಲಿ ಶಾಸಕರ ವೈಫಲ್ಯವನ್ನೇ ಮತದಾರರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಹಾಲಿ ಶಾಸಕರು ಈವರೆಗೆ ಯಾವುದೇ ಹೊಸ ಯೋಜನೆಯನ್ನು ತಂದಿಲ್ಲ ಎಂದು ಪ್ರಜ್ಞಾವಂತ ಮತದಾರರು ಹೇಳುತ್ತಿದ್ದಾರೆ. ಹಾಗಾಗಿ 38 ವಾರ್ಡ್‌ಗಳ ಪೈಕಿ ಕನಿಷ್ಠ 30 ವಾರ್ಡ್‌ಗಳಲ್ಲಿ ಗೆಲ್ಲುವ ವಿಶ್ವಾಸವಿದೆ.
ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿತ್ತಲ್ಲಾ... ಅದು ನಿಮ್ಮ ಗೆಲುವಿನ ಓಟಕ್ಕೆ ಅಡ್ಡಿಯಾಗದೇ ?
ಟಿಕೆಟ್ ಹಂಚಿಕೆ ಸಂದರ್ಭ ಎಲ್ಲಾ ಪಕ್ಷಗಳಲ್ಲೂ ಗೊಂದಲ, ಅಸಮಾಧಾನ ಇದ್ದೇ ಇರುತ್ತದೆ. ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಇಲ್ಲಿ ನಾಯಕರು, ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಜಾತಿ, ಧರ್ಮ, ಮೀಸಲಾತಿ ಇತ್ಯಾದಿಯನ್ನು ಪರಿಗಣಿಸುವಾಗ ಪ್ರಬಲ ಆಕಾಂಕ್ಷಿಗಳಿಗೆ ನಿರಾಶೆಯಾಗುವುದು ಸಹಜ. ಟಿಕೆಟ್ ಸಿಕ್ಕವರು ಖುಷಿಯಲ್ಲಿದ್ದರೆ, ಸಿಗದವರು ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಹಾಗಂತ ಇದು ನಮ್ಮ ನಾಗಾಲೋಟಕ್ಕೆ ಯಾವ ಅಡ್ಡ ಪರಿಣಾಮವೂ ಬೀರದು. 38 ವಾರ್ಡ್‌ಗಳ ಪೈಕಿ ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಇರುವುದು ನಿಜ. ಹಾಗಂತ ನಾವು ಹೋರಾಟದಿಂದ ಹಿಂಜರಿಯುವುದಿಲ್ಲ. ಕೊನೆಯ ಕ್ಷಣದವರೆಗೂ ಗೆಲ್ಲುವುದಕ್ಕಾಗಿ ಶತಪ್ರಯತ್ನ ಮಾಡುತ್ತಲೇ ಇದ್ದೇವೆ.
ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯ ಗೊಂದಲಮಯ ಹೇಳಿಕೆಯಿಂದ ಕಾಂಗ್ರೆಸ್‌ಗೆ ಹೊಡೆತ ಬೀಳಬಹುದೇ ?
ಪೂಜಾರಿ ಪಕ್ಷದ ಹಿರಿಯ ನಾಯಕರು. ಅವರ ಮೇಲೆ ನನಗೆ ಅಪಾರ ಗೌರವವಿದೆ. ಅವರು ಪಕ್ಷದ ಒಳಿತಿಗಾಗಿ ಕೆಲವು ಸಲಹೆ ಸೂಚನೆ ನೀಡಿರಬಹುದೇ ವಿನಃ ಪಕ್ಷಕ್ಕೆ ಹಿನ್ನಡೆಯಾಗಬೇಕು ಎಂಬರ್ಥದಲ್ಲಿ ಎಲ್ಲೂ ಯಾವ ಹೇಳಿಕೆಯನ್ನು ನೀಡಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಪೂಜಾರಿಯಿಂದಾಗಿ ಕಾಂಗ್ರೆಸ್‌ಗೆ ಯಾವ ಹೊಡೆತವೂ ಬೀಳದು.
ಪೂಜಾರಿಯ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದ ಕೆಲವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರಲ್ಲಾ...?
ಪೂಜಾರಿ ಪಕ್ಷದ ಹಿತದಿಂದ ಕೆಲವೊಂದು ಸಲಹೆ ಸೂಚನೆ ನೀಡಿದ್ದಾರೆ. ಹಾಗಂತ ಅವರು ಪಕ್ಷ ಬಿಟ್ಟು ಹೋಗಿಲ್ಲ. ಆದರೆ ಪೂಜಾರಿ... ಪೂಜಾರಿ... ಎನ್ನುತ್ತಾ ಅವರ ಹಿಂಬಾಲಕರಂತಿದ್ದ ಕೆಲವರು ಬಿಜೆಪಿ ಜೊತೆ ಕೈ ಜೋಡಿಸಿರುವುದು ಮಾತ್ರ ಅಕ್ಷಮ್ಯ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಪೂಜಾರಿಗೂ ಮಾಡಿದ ದ್ರೋಹವಾಗಿದೆ. ಪೂಜಾರಿಯ ಮೇಲೆ ಅವರಿಗೆ ಅಷ್ಟೊಂದು ಅಭಿಮಾನವಿದ್ದಿದ್ದರೆ ಅವರು ಕಾಂಗ್ರೆಸ್ ಬಿಟ್ಟು ಹೋಗುತ್ತಿರಲಿಲ್ಲ. ಕಾಂಗ್ರೆಸ್‌ನಲ್ಲಿದ್ದುಕೊಂಡು ತಮಗಾದ ಅನ್ಯಾಯವನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಸರಿಪಡಿಸಬಹುದಿತ್ತು. ಇನ್ನು ಚುನಾವಣೆಯ ಸಂದರ್ಭ ಈ ಪಕ್ಷಾಂತರ ಎಂಬುದು ಇದೆಯಲ್ಲಾ ಅದೆಲ್ಲಾ ಒಂದು ಗಿಮಿಕ್ ಅಷ್ಟೆ.
ಬಿಜೆಪಿ ಜೊತೆ ಕೈ ಜೊಡಿಸಿಕೊಂಡವರ ಪೈಕಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರೇ ಹೆಚ್ಚಿದ್ದಾರಲ್ಲಾ ?
ಕಾಂಗ್ರೆಸ್ ಪಕ್ಷದ ಮೇಲೆ ಪ್ರೀತಿ, ವಿಶ್ವಾಸವಿದ್ದಿದ್ದರೆ ಅಥವಾ ಕಾಂಗ್ರೆಸ್ ಸಿದ್ಧಾಂತವನ್ನು ಇವರು ಒಪ್ಪಿಕೊಂಡಿದ್ದರೆ ಖಂಡಿತಾ ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ. ಇವರು ಕಾಂಗ್ರೆಸ್‌ನಲ್ಲಿ ಎಲ್ಲಾ ಸ್ಥಾನಮಾನವನ್ನೂ ಅನುಭವಿಸಿದ್ದಾರೆ. ಈಗ ಟಿಕೆಟ್ ಸಿಕ್ಕಿಲ್ಲ, ಮನ್ನಣೆ ಸಿಕ್ಕಿಲ್ಲ ಎಂದು ಪಿಳ್ಳೆ ನೆಪ ಹೇಳಿ ಬಿಜೆಪಿಗೆ ಸೇರ್ಪಡೆಗೊಂಡಿರುವುದರಲ್ಲಿ ಅರ್ಥವಿಲ್ಲ. ಇವರೆಲ್ಲಾ ವಿಶ್ವಾಸ ದ್ರೋಹಿಗಳು. ಇನ್ನು ಬಿಜೆಪಿಗರು ಕೂಡಾ ಈ ವಿಶ್ವಾಸದ್ರೋಹಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವಾಗ ಯೋಚಿಸಬೇಕಿತ್ತು. ನಾಳೆ ಇವರು ಬಿಜೆಪಿಗೂ ದ್ರೋಹ ಬಗೆಯುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ?.
ಚುನಾವಣೆ ಸಮೀಪಿಸುತ್ತಲೇ ಮಾಜಿಯಾಗಿರುವ ನಿಮಗೂ... ಹಾಲಿ ಶಾಸಕ ವೇದವ್ಯಾಸ ಕಾಮತ್‌ರಿಗೂ ಅಭಿವೃದ್ಧಿ ವಿಚಾರದಲ್ಲಿ ಜಟಾಪಟಿಯಾಗುತ್ತಿದೆಯಲ್ಲಾ...?
ನೋಡಿ... ಹಾಲಿ ಶಾಸಕ ವೇದವ್ಯಾಸ ಕಾಮತ್‌ರಿಗೆ ಕೆಲಸ ಮಾಡಲು ಗೊತ್ತಿಲ್ಲ. ಕೆಲಸ ಮಾಡುವ ಶಕ್ತಿಯಾಗಲೀ, ಅರ್ಹತೆಯಾಗಲೀ ಅವರಿಗೆ ಇಲ್ಲ. ಮಾಹಿತಿಯ ಕೊರತೆಯಿಂದ ಏನೇನೋ ಹೇಳಿ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಡವರು ಸ್ವಂತ ಮನೆ ಮಾಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂಬ ಉದ್ದೇಶದಿಂದಲೇ ಶಕ್ತಿನಗರದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಿ ಅಲ್ಲಿ ‘ಜಿ ಪ್ಲಸ್ 3’ ಮಾದರಿಯಲ್ಲಿ 1 ಸಾವಿರ ಮಂದಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಕಟ್ಟಿಸಿಕೊಡಲು ನಾನು ಮುಂದಾಗಿದ್ದೆ. ಶಂಕುಸ್ಥಾಪನೆಯನ್ನೂ ಮಾಡಿಸಿದ್ದೆ. ಆದರೆ ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದ ಕಾಮಗಾರಿ ಕುಂಠಿತಗೊಂಡಿತು. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಎಲ್ಲೇ ಆಗಲಿ, ಬಡವರು ಮನೆ ನಿರ್ಮಿಸಲು ಮುಂದಾದರೆ ಅರಣ್ಯ ಇಲಾಖೆಯವರು ಇಲ್ಲಸಲ್ಲದ ನೆಪವೊಡ್ಡಿ ಅಡ್ಡಿಪಡಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಆದರೂ ಶಾಸಕ ಕಾಮತ್ ಈ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡುತ್ತಿಲ್ಲ, ಹೇಗೆ ಕೆಲಸ ಮಾಡಬೇಕು ಎಂದು ಅವರಿಗೆ ಗೊತ್ತೂ ಇಲ್ಲ. ಅದರ ಬದಲು ನನ್ನ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡಿ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರುಗೊಂಡ ಯೋಜನೆಯ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳಲಾಗುತ್ತಿದೆ. ವಿಪರ್ಯಾಸವೆಂದರೆ ಅಲ್ಲೆಲ್ಲಾ ಅವರ ಹೆಸರಿನ ಬ್ಯಾನರ್, ಫ್ಲೆಕ್ಸ್ ಹಾಕಿ ತಾನೇ ಯೋಜನೆ ಜಾರಿಗೊಳಿಸಿದ್ದು ಎಂದು ಬಿಂಬಿಸುತ್ತಿದ್ದಾರೆ. ಶಾಸಕನಾಗಿ ಸುಮಾರು 2 ವರ್ಷವಾಗುತ್ತಾ ಬಂದರೂ ಅವರಿಗೆ ಹೊಸ ಯೋಜನೆ ಮಂಜೂರು ಮಾಡಿಸಲು ಈವರೆಗೆ ಸಾಧ್ಯವಾಗಿಲ್ಲ. ಅವರಿಗ ರೀತಿ-ನೀತಿಯೂ ಗೊತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಅವರ ಶಾಸಕತ್ವದ ಅವಧಿಯಲ್ಲಿ ಏನೇನು ಮಾಡಿದ್ದಾರೆ ಎಂದು ದಾಖಲೆ ಸಮೇತ ಚರ್ಚೆಗೆ ಬಂದರೆ ನಾನು ಸಿದ್ಧ. ಇದು ನಾನು ಅವರಿಗೆ ಹಾಕುವ ಸವಾಲು ಕೂಡಾ ಆಗಿದೆ.
ಈ ಕ್ಷೇತ್ರ ಎದುರಿಸುವ ಮುಖ್ಯ ಸಮಸ್ಯೆಗಳಾವುವು ?
ವರ್ಷ ಕಳೆಯುತ್ತಲೇ, ಜನಸಂಖ್ಯೆ ವೃದ್ಧಿಸುತ್ತಲೇ ನೂರಾರು ಸಮಸ್ಯೆಗಳು ಸೃಷ್ಟಿಯಾಗುತ್ತದೆ, ಬೇಡಿಕೆಗಳ ಪಟ್ಟಿಯೂ ಹೆಚ್ಚುತ್ತದೆ. ಮಂಗಳೂರಿನ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಸುರಿದರೂ ಸಾಲದು. ಯಾಕೆಂದರೆ ಇದು ಕರ್ನಾಟಕದ ಹೆಬ್ಬಾಗಿಲು ಕೂಡಾ ಹೌದು. ಹಳೆ ಬಂದರು ಅಭಿವೃದ್ಧಿಗೆ 125 ಕೋ.ರೂ. ಮಂಜೂರು ಮಾಡಿಸಿದ್ದೆ. ಜಪ್ಪಿನಮೊಗರಿನಿಂದ ಆರಂಭಿಸಿ ನೇತ್ರಾವತಿ ತಟವಾಗಿ ಕಣ್ಣೂರಿಗೆ ಸಂಪರ್ಕ ಕಲ್ಪಿಸಿದರೆ ಪಂಪ್‌ವೆಲ್ ವೃತ್ತದಲ್ಲಿ ವಾಹನ ಸಂಚಾರಕ್ಕೆ ಒತ್ತಡ ಕಡಿಮೆ ಮಾಡಬಹುದು, ಪ್ರವಾಸೋದ್ಯಮ ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಒಬ್ಬ ಅಧಿಕಾರಿಯಾಗಿ ಗಳಿಸಿದ ಅನುಭವವನ್ನು ಜನಪ್ರತಿನಿಧಿಯಾಗಿರುವಾಗ ಯೋಜನೆ ರೂಪಿಸಿದ್ದೆ. ಅದನ್ನು ಹಾಲಿ ಶಾಸಕರು ಮುಂದುವರಿಸಬೇಕಿತ್ತು. ಆದರೆ ಅವರಿಗೆ ಇನ್ನೂ ಆ ಬಗ್ಗೆ ಯಾವ ಕಲ್ಪನೆಯೂ ಇಲ್ಲವಾಗಿದೆ.
ನೀವು ಅಭಿವೃದ್ಧಿಯನ್ನು ಮುಂದಿಟ್ಟು ಮತ ಕೇಳಲು ಮುಂದಾಗುವಿರಿ. ಆದರೆ, ಮತದಾರರಿಗೆ ಅಭಿವೃದ್ಧಿಗಿಂತ ಭಾವನಾತ್ಮಕ ವಿಚಾರವೇ ಮುಖ್ಯವಾಗುತ್ತದೆಯಲ್ಲಾ ?
ಇದೇ ನಮ್ಮ ದುರಂತ. ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ-ಸಾಧನೆಯನ್ನು ಪರಿಗಣಿಸುವುದಾದರೆ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಬೇಕಿತ್ತು. ಆದರೆ, ಜನರಿಗೆ ಅಭಿವೃದ್ಧಿಗಿಂತ ಭಾವನಾತ್ಮಕ ವಿಚಾರವೇ ಮುಖ್ಯವಾಗುತ್ತಿರುವುದು ಸುಳ್ಳಲ್ಲ. ಸುಶಿಕ್ಷಿತರು ಕೂಡ ಇದರ ಬಲೆಗೆ ಬೀಳುವುದು ವಿಪರ್ಯಾಸ. ಇದು ನಮಗೆ ಸವಾಲು ಕೂಡಾ ಆಗಿದ್ದು, ಇದರಿಂದ ಹೇಗೆ ಹೊರಬರುವುದು ಎಂಬುದರ ಬಗ್ಗೆ ನಾವು ಯೋಚಿಸಬೇಕು. ಭಾವನೆಗಳು ಇರಬಾರದು ಎಂದಲ್ಲ, ಅದೆಲ್ಲಾ ವೈಯಕ್ತಿಕ. ಅದನ್ನು ಖಾಸಗಿಯಾಗಿ ರೂಢಿಸಿಕೊಳ್ಳಬೇಕೇ ವಿನಃ ಸಾರ್ವಜನಿಕವಾಗಿ ಅಲ್ಲ.