ಆರ್ಥಿಕ, ಸಾಮಾಜಿಕ ಬದಲಾವಣೆಯಾಗದೆ ಸ್ವತಂತ್ರ ರಾಜಕಾರಣ ಅಸಾಧ್ಯ: ಶ್ರೀಪಾದ ಭಟ್

Update: 2019-11-11 16:31 GMT

ಬಳ್ಳಾರಿ, ನ. 11: ಸ್ವಾತಂತ್ರ್ಯ ನಂತರದ ರಾಜಕೀಯ ಏರುಪೇರುಗಳ ಅವಲೋಕನ ಮಾಡಿಕೊಂಡಲ್ಲಿ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ರಾಜಕೀಯ ಪಕ್ಷಗಳು ದಲಿತರ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಆರ್ಥಿಕ, ಸಾಮಾಜಿಕ ಬದಲಾವಣೆ ತರದ ಹೊರತು ದಲಿತರಿಗೆ ಸ್ವತಂತ್ರ ರಾಜಕಾರಣ ಅಸಾಧ್ಯ ಎಂದು ಚಿಂತಕ ಶ್ರೀಪಾದ ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ದಸಂಸ ಏರ್ಪಡಿಸಿದ್ದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದಲಿತ ಸಮುದಾಯ ರಾಜಕೀಯವಾಗಿ ಸ್ವತಂತ್ರ ಅಥವಾ ಅವಲಂಬಿತ ರಾಜಕಾರಣ ಮಾಡಲು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಿಡುತ್ತಿಲ್ಲ. ಕಾಂಗ್ರೆಸ್ ಅಂದರೆ ದಲಿತರು, ದಲಿತರು ಅಂದರೆ ಕಾಂಗ್ರೆಸ್ ಎಂದು ಹೇಳುತ್ತಿದ್ದರು. ಇದೀಗ ಆ ಪಕ್ಷ ತಮ್ಮನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರತಿಯೊಂದು ಪಕ್ಷಗಳಲ್ಲಿ ಕೆಲಸ ಮಾಡುತ್ತಿರುವ ದಲಿತರನ್ನು ಇಂದಿಗೂ ಮುಖ್ಯ ವಾಹಿನಿಗೆ ತರುತ್ತಿಲ್ಲ. ಅವಲಂಬಿತ ರಾಜಕಾರಣದಲ್ಲಿ ಗುರಿ ತಲುಪಲು ಅಸಾಧ್ಯ ಎಂದು ಸ್ವತಂತ್ರವಾಗಿ ರಾಜಕೀಯ ಪಕ್ಷಕಟ್ಟಿಕೊಂಡರು ಬೆಳೆಯಲು ಬಿಡುತ್ತಿಲ್ಲ. ಈ ಗೊಂದಲದ ಮಧ್ಯೆ ದಲಿತ ಸಮುದಾಯ ರಾಜಕೀಯ ಬಲಾಢ್ಯತನ ಹೊಂದಲು ಎಲ್ಲ ಪಕ್ಷಗಳು ಕುತಂತ್ರ ರೂಪಿಸಿಕೊಂಡಿವೆ ಎಂದು ದೂರಿದರು.

ಗಾಯಕ ಜನಾರ್ಧನ ಜನ್ನಿ ಮಾತನಾಡಿ, ಯಾವುದೇ ರಾಷ್ಟ್ರ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಆ ರಾಷ್ಟ್ರದ ದಲಿತ, ಶೋಷಿತ ಸಮುದಾಯಗಳ ಅಭಿವೃದ್ಧಿ ಆಗಬೇಕು. ಧರ್ಮ-ಜಾತಿ ಹೆಸರಿನಲ್ಲಿ ವ್ಯವಸ್ಥಿತವಾಗಿ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತಿದೆ. ಗುಡಿ ಗುಂಡಾರ ಕಟ್ಟುವ ಬದಲು ಸ್ವಾಭಿಮಾನದ ಬದುಕು ಕಟ್ಟಲು ಮುಂದಾಗಬೇಕು. ದಲಿತ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ರಾಜಕೀಯ ಚುಕ್ಕಾಣಿ ಹಿಡಿಯಲು ಸಂಘಟಿತ ಹೋರಾಟ ರೂಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಎರಡು ದಿನಗಳ ಅಧ್ಯಯನ ಶಿಬಿರದಲ್ಲಿ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದವು. ಸಂವಿಧಾನ ಉಳಿಸುವ, ದಲಿತರಿಗೆ ರಾಜಕೀಯ ಪ್ರಾಬಲ್ಯ ಹೊಂದಲು ಹೋರಾಟ ರೂಪಿಸುವ ಕುರಿತಂತೆ ಸುದೀರ್ಘ ಚರ್ಚೆಗಳು ನಡೆದಿವೆ. ದಲಿತ ಸಮುದಾಯ ಹಿಂದುತ್ವ ಮತ್ತು ಬಿಜೆಪಿಯಂತ ಕೋಮುವಾದಿ ರಾಜಕೀಯದಿಂದ ಹೊರಬಂದು ಅಂಬೇಡ್ಕರ್ ಆಶಯದ ಸಮಾಜ ಕಟ್ಟಬೇಕು ಎಂದು ಮನ ಮಾಡಿದರು.

ಹೊತ್ತಿಗೆ ಬಿಡುಗಡೆ: ಶಿಬಿರದಲ್ಲಿ ಫ್ಯಾಸಿಸ್ಟ್ ಕೇಂದ್ರ ಸರಕಾರದ ವಿರುದ್ಧ ಜನಶಕ್ತಿಯನ್ನು ಸಂಘಟಿಸೋಣ ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಹೈದರಬಾದ ಕರ್ನಾಟಕ ಪ್ರದೇಶದಲ್ಲಿ ಅತ್ಯುತ್ತಮ ಸಂಘಟಕರಾಗಿ ರಾಜ್ಯ ಮಟ್ಟದ ನವರತ್ನ ಪ್ರಶಸ್ತಿ ಪುರಸ್ಕೃತ ರಾಯಚೂರು ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಅವರನ್ನು ಸನ್ಮಾನಿಸಲಾಯಿತು.

ಒಳಮೀಸಲಾತಿ ಸಂಘರ್ಷ ತಿಲಾಂಜಲಿ: ಪರಿಶಿಷ್ಟರ ಮಧ್ಯೆದಲ್ಲಿ ನಡೆದಿರುವ ಒಳ ಮೀಸಲಾತಿ ಸಂಘರ್ಷವನ್ನು ಮಾಧ್ಯಮಗಳು ಮತ್ತು ಮೇಲ್ವರ್ಗ ರಾಜಕೀಯ ಮುಖಂಡರು ವಾಸ್ತವವಾಗಿ ನಡೆಯುತ್ತಿರುವ ಚರ್ಚೆಗಳಿಗಿಂತ ವಿಜೃಂಭಿಸುತ್ತಿದ್ದಾರೆ. ಇಂತಹ ಸಂಘರ್ಷಕ್ಕೆ ದಲಿತ ಮುಖಂಡರು ತಿಲಾಂಜಲಿ ಹೇಳಬೇಕು ಎಂದು ಕೇಂದ್ರೀಯ ವಿವಿ ಪ್ರೊ.ಅಪ್ಪಗೆರೆ ಸೋಮಶೇಖರ್ ಕರೆ ನೀಡಿದರು.

‘ದಲಿತ ಸಾಹಿತ್ಯ ಮತ್ತು ದಲಿತ ಚಳುವಳಿ ತಲೆಮಾರುಗಳ’ ಕುರಿತು ಮಾತನಾಡಿದ ಅವರು, ವೀರಶೈವ, ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸೇರಿ ಮೇಲ್ವರ್ಗದ ಜಾತಿಗಳಲ್ಲಿಯೂ ಸಂಘರ್ಷ ನಡೆದು ಕೊಲೆಗಳಾಗಿವೆ. ಆದರೆ ಆ ವಿಷಯ ಮುನ್ನೆಲೆಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮಗಳು ದಲಿತ ಸಂಘರ್ಷ ವಿಷಯ ವಿಜೃಂಭಿಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದರು.

ಏಳೂವರೆ ದಶಕಗಳ ರಾಜಕೀಯ ಇತಿಹಾಸದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದಲಿತರು ಸಿಎಂ ಸ್ಥಾನಕ್ಕೇರಲು ಸಾಧ್ಯವಾಗಿಲ್ಲ. ರಾಜಕೀಯ ಪಕ್ಷಗಳ ಕೆಲ ಮುಖಂಡರನ್ನು ಮುಂದಿಟ್ಟು ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ರಾಜಕೀಯ ಮುಖಂಡರು ಒಗ್ಗಟ್ಟಾಗಿ ಆಡಳಿತಕ್ಕೆ ಬರುವ ಪಕ್ಷದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದಿತ್ತು. ಅದು ಸಾಧ್ಯವಾಗಿಲ್ಲ. ಮುಖಂಡರು ಪ್ರೀತಿ, ವಿಶ್ವಾಸದ ಜೊತೆಗೆ ತ್ಯಾಗ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ನೀಡಿದ್ದು ಹೇಳುವುದು ಶುದ್ಧ ತಪ್ಪು. ಇತಿಹಾಸದ ಪುಟಗಳನ್ನು ತಿರುಗಿ ನೋಡಿದಾಗ ಆರನೆ ಶತಮಾನದಲ್ಲಿ ಬೌದ್ಧಧರ್ಮ ಸಂಸ್ಥಾಪಕ ಬುದ್ಧ ಮಹಿಳೆಯರಿಗೆ ಸಮಾನತೆ ನೀಡಿದ ನಿದರ್ಶನಗಳಿವೆ. ಬೌದ್ಧ ಚಿಂತನೆಗಳ ಭಾರತ ಮತ್ತು ಕೆಂಪುಕೋಟೆಯ ಮೇಲೆ ದಲಿತ ಪ್ರಧಾನಿ ಧ್ವಜಾರೋಹಣ ನೆರವೇರಿಸದ ಹೊರತು ಅಂಬೇಡ್ಕರ್, ಲೋಹಿಯಾ ಚಳುವಳಿಗೆ ಬೆಲೆ ಇಲ್ಲದಾಗುತ್ತದೆ. ಅಧುನಿಕ ಭಾರತದಲ್ಲಿ ದಲಿತ ಮಹಿಳೆಯರ ಮೇಲೆ ಅನ್ಯಾಯ, ಅತ್ಯಾಚಾರ, ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ’

-ಡಾ.ಜಯದೇವಿ ಗಾಯಕವಾಡ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News