ನ.15-17: ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಯ ಶತಮಾನೋತ್ಸವ ಸಂಭ್ರಮ

Update: 2019-11-13 16:21 GMT

ಮಂಗಳೂರು, ನ.13: ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಆಚರಣಾ ಸಮಿತಿಯ ನೇತೃತ್ವದಲ್ಲಿ ಸಂಸ್ಥೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವು ನ.15ರಿಂದ 17ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಜಿ.ಮೋಹನ್ ತಿಳಿಸಿದ್ದಾರೆ.

 ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.15ರಂದು ಪೂರ್ವಾಹ್ನ 9ರಿಂದ 10.30ರವೆರೆಗೆ ಶತಮಾನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.

ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ನೀಲೇಶ್ವರ ಪದ್ಮನಾಭ ತಂತ್ರಿ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ‘ಉಚ್ಚಿಲ ಬೋವಿ ಶಾಲೆ ನಡೆದು ಬಂದ ದಾರಿ’-‘ಶತ ದೀವಿಗೆ’ ಎಂಬ ಧ್ವನಿ ಬೆಳಕಿನ ಕಾರ್ಯಕ್ರಮವು ಪ್ರಸಿದ್ಧ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಮಂಗಳೂರು ವಿವಿಯ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ನ.15ರಂದು ಸಂಜೆ 5 ಗಂಟೆಗೆ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸುವರು. ಸ್ಮರಣ ಸಂಚಿಕೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬಿಡುಗಡೆಗೊಳಿಸುವರು. ನ.16ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಚ್ಚಿಲ ಬೋವಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅಧ್ಯಾಪಕರುಗಳನ್ನು ಸನ್ಮಾನಿಸಲಾಗುವುದು ಎಂದು ಎನ್.ಜಿ. ಮೋಹನ್ ವಿವರಿಸಿದರು.

ನ.17ರಂದು ಸಂದೆ 4.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್ ಪಾಲ್ಗೊಳ್ಳುವರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗುವುದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಚರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಸಿ. ಉಚ್ಚಿಲ್, ಸಂಸ್ಥೆಯ ಕರೆಸ್ಪಾಂಡೆಂಟ್ ದೇವದಾಸ್ ಉಚ್ಚಿಲ್, ನಿವೃತ್ತ ಮುಖ್ಯ ಶಿಕ್ಷಕಿ ರೇವತಿ ಟೀಚರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News