ಪಂಪ್‌ವೆಲ್ ಸೇತುವೆಯಡಿಯಲ್ಲೊಂದು ಹರುಕು- ಮುರುಕು ಬದುಕು !

Update: 2019-11-16 13:43 GMT

ಮಂಗಳೂರು, ನ.16: ಕಳೆದ ಸುಮಾರು ದಶಕದಿಂದ ಪಂಪ್‌ವೆಲ್ ಸೇತುವೆ ಜನಸಾಮಾನ್ಯರ ಸಾಕಷ್ಟು ಹಿಡಿಶಾಪಕ್ಕೆ ಕಾರಣವಾಗಿದೆ. ಜತೆಯಲ್ಲೇ ಕಳೆದ ಹಲವು ವರ್ಷಗಳಿಂದೀಚೆಗೆ ಈ ಮೇಲ್ಸೇತುವೆಯ ಅಡಿ ಭಾಗ ಅಲ್ಲಿ ಕಾಮಗಾರಿ ನಡೆಸುವ ಕಾರ್ಮಿಕರಿಗೆ ಆಶ್ರಯ ನೀಡಿದೆ. ಇದೀಗ ಐತಿಹಾಸಿಕ ಸ್ಮಾರಕವೆಂದೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಕ್ಕೆ ಕಾರಣವಾಗಿರುವ ಪಂಪ್‌ವೆಲ್ ಮೇಲ್ಸೇತುವೆಯ ಅಡಿಯು ಮುರುಕು ಬದುಕೊಂದಕ್ಕೂ ಆಶ್ರಯವಾಗಿದೆ !

ಸೇತುವೆಯಡಿ ಈ ಮುರುಕು ಬದುಕನ್ನು ಕಟ್ಟಿಕೊಂಡಿರುವವರು ಮೂಲತ: ಮಹಾರಾಷ್ಟ್ರದ ನಾಗ್ಪುರದವರು. ಕೂಲಿ ಕೆಲಸವನ್ನು ಅರಸುತ್ತಾ ಊರಿಂದ ಊರಿಗೆ ಅಲೆಯುವ ಈ ಕುಟುಂಬ ಮಂಗಳೂರಿಗೆ ಕೆಲ ದಿನಗಳ ಹಿಂದಷ್ಟೇ ಕೂಲಿ ಕೆಲಸವನ್ನು ಅರಸಿ ಬಂದಿದೆ. ಸುಮಾರು 20 ಮೀಟರ್ ಅಗಲ ಅಡಿಯ ಮೇಲ್ಸೇತುವೆಯ ಅಡಿ ಭಾಗದಲ್ಲಿ ಸದ್ಯ ಆಶ್ರಯವನ್ನು ಪಡೆದುಕೊಂಡಿದೆ. ಇಲ್ಲೇ ಆಹಾರ ತಯಾರು ಮಾಡಿ ಅಲ್ಲೇ ಊಟ ಮಾಡಿ ಅಲ್ಲೇ ವಿಶ್ರಾಂತಿ ಪಡೆಯುತ್ತಿರುವ ಈ ಕುಟುಂಬವು ಸದ್ಯ ನಾಲ್ವರು ವಯಸ್ಕರು ಹಾಗೂ ಮೂರು ಮಕ್ಕಳನ್ನು ಹೊಂದಿದೆ.

‘‘ನಾಗ್ಪುರದಿಂದ ಕೆಲಸವನ್ನು ಅರಸುತ್ತಾ ಇಲ್ಲಿಗೆ ಕೆಲ ದಿನಗಳ ಹಿಂದೆ ಬಂದಿದ್ದೆವು. ಆದರೆ ಕೆಲಸ ಮಾತ್ರ ಸಿಕ್ಕಿಲ್ಲ. ಹಾಗಾಗಿ ಮತ್ತೆ ಊರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮ ಬದುಕೇ ಹೀಗೆ. ದಿನದ ತುತ್ತಿಗಾಗಿ ದುಡಿಮೆಯನ್ನು ಅರಸುತ್ತಾ ಊರೂರು ಅಲೆಯುತ್ತೇವೆ’’ ಎನ್ನುತ್ತಾರೆ ಈ ಕುಟುಂಬದ ಹಿರಿಯರಾದ ಜ್ಯೋತಿ.

ಜ್ಯೋತಿ ತನ್ನ ಮಗ, ಸೊಸೆ ಹಾಗೂ ಸೊಸೆಯ ತಾಯಿ ಹಾಗೂ ಮೊಮ್ಮಕ್ಕಳ ಜತೆ ದೂರದ ನಾಗ್ಪುರದಿಂದ ಮಂಗಳೂರಿಗೆ ಕೂಲಿ ಕೆಲಸಕ್ಕಾಗಿ ಆಗಮಿಸಿದ್ದಾರೆ. ತಮ್ಮಲ್ಲಿ ಗುರುತಿನ ಚೀಟಿ ಇದೆ. ನಾವು ಪ್ರತಿ ಚುನಾವಣೆಯಲ್ಲೂ ಮತ ಚಲಾಯಿಸುತ್ತೇವೆ ಎಂದು ಹೇಳುವ ಈ ಕುಟುಂಬಕ್ಕೆ ತಮ್ಮ ಊರಿನಲ್ಲೂ ವಾಸಿಸಲು ಯೋಗ್ಯವಾದ ಮನೆ ಇಲ್ಲವಂತೆ !

‘‘ನಾಗ್ಪುರದಲ್ಲೂ ನಾವು ಜೋಪಡಿಯಲ್ಲಿ ವಾಸಿಸುತ್ತೇವೆ. ಕೆಲಸ ಸಿಕ್ಕರೆ ನಮ್ಮ ಹಾಗೂ ಮಕ್ಕಳ ಹೊಟ್ಟೆ ತುಂಬುತ್ತದೆ. ಸರಕಾರ ಯಾವುದೇ ಬಂದರೂ ನಮ್ಮ ಬದುಕು ಮಾತ್ರ ಬದಲಾಗಿಲ್ಲ. ಸರಕಾರದ ಸೌಲಭ್ಯಗಳೂ ನಮಗೆ ಸಿಗುತ್ತಿಲ್ಲ’’ ಎನ್ನುವ ಜ್ಯೋತಿ ಅವರ ಕುಟುಂಬದ ಸದಸ್ಯರೆಲ್ಲರ ಮುಖದಲ್ಲಿ ಹತಾಶೆಯ ಮನೋಭಾವವನ್ನು ಕಾಣಬಹುದು.

ಕೊಳಕಾದ ಡಬ್ಬಗಳಲ್ಲಿ ತುಂಬಿದ ನೀರು, ಅಲ್ಲೇ ಪಕ್ಕದಲ್ಲಿ ಒಲೆ ಇರಿಸಿ ಆಹಾರ ಬೇಯಿಸಲು ಸಿದ್ಧತೆ, ಸಣ್ಣ ಡಬ್ಬದಲ್ಲಿ ಮೆಣಸು ಈರುಳ್ಳಿ ಸೇರಿದಂತೆ ಮಸಾಲೆಯನ್ನು ಕುಟ್ಟುವ ಇವರ ಹರುಕು ಮುರುಕು ಬದುಕು ಕಂಡಾಗ ಮನಸ್ಸು ಕರಗದಿರದು.

Full View

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News