'ಪ್ರಾದೇಶಿಕ ಭಾಷೆಗಳನ್ನು ಕಲಿಯಿರಿ; ಇಂಗ್ಲಿಷ್‌ಗೆ ಪ್ರಾಧಾನ್ಯತೆ ಬೇಡ'

Update: 2019-11-19 15:04 GMT

ಉಡುಪಿ, ನ. 19: ನೀವು ದೇಶದ ಯಾವುದೇ ಪ್ರಾದೇಶಿಕ ಭಾಷೆಯ ನ್ನಾದರೂ ಕಲಿಯಿರಿ. ಆದರೆ ಪರಕೀಯವಾದ ಇಂಗ್ಲಿಷ್ ಭಾಷೆ ಯನ್ನು ಮಾತ್ರ ತಲೆಯಲ್ಲಿ ಹೊತ್ತುಕೊಳ್ಳಬೇಡಿ ಎಂದು ಯೋಗಗುರು ಬಾಬಾ ರಾಮದೇವ್ ಕಿವಿಮಾತು ಹೇಳಿದ್ದಾರೆ.

ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್ ವತಿಯಿಂದ ನಡೆದಿರುವ ಯೋಗ ಶಿಬಿರದ ನಾಲ್ಕನೆಯ ದಿನವಾದ ಮಂಗಳವಾರ ಯೋಗ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡುತಿದ್ದರು.

ವೈವಿಧ್ಯತೆಯ ಭಾರತದಲ್ಲಿ ಪ್ರತಿ ಮೂರ್ನಾಲ್ಕು ಜಿಲ್ಲೆಗಳಿಗೆ ಭಾಷೆಗಳು ಬದಲಾಗುತ್ತವೆ. ನೀವು ಯಾವುದೇ ಪ್ರಾದೇಶಿಕ ಭಾಷೆ ಯನ್ನು ಬೇಕಿದ್ದರೂ ಕಲಿಯಿರಿ. ಆದರೆ ಇಂಗ್ಲಿಷ್ ಭಾಷೆಗೆ ಮಾತ್ರ ಪ್ರಾಧಾನ್ಯತೆಯನ್ನು ನೀಡುವುದು ಬೇಡ ಎಂದರು.

ಸಂಸ್ಕೃತ ಎಲ್ಲ ಭಾಷೆಗಳಿಗೂ ಮೂಲ. ಯಾವುದೇ ಪ್ರಾದೇಶಿಕ ಭಾಷೆಯ ನ್ನಾದರೂ ಕಲಿಯಿರಿ. ದೂರದ ರಾಜಸ್ಥಾನದಿಂದ ಬಂದ ಭವರ್‌ಲಾಲ್ ಆರ್ಯ ಕನ್ನಡವನ್ನು ಕಲಿತು ರಾಜ್ಯ ಪ್ರಭಾರಿಯಾಗಿ ಯಶಸ್ವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರಾವಳಿಯ ತುಳು ಭಾಷೆಯನ್ನೂ ಅವರು ಕಲಿಯುತ್ತಿದ್ದಾರೆ ಎಂದವರು ಹೇಳಿದರು.

ಕೆಲವರು ಕಾಫಿ, ಕೆಲವರು ಚಹಾ ಕುಡಿಯುತ್ತಾರೆ. ಇವುಗಳಲ್ಲಿ ನಿಕೋಟಿನ್, ಕೆಫಿನ್ ಇತ್ಯಾದಿ ಉತ್ತೇಜಕಗಳಿವೆ. ಇದೆಲ್ಲವುಗಳಿ ಗಿಂತ ಪರಿಣಾಮಕಾರಿ ಉತ್ತೇಜಕ ಯೋಗ, ಪ್ರಾಣಾಯಾಮದಲ್ಲಿದೆ. ಹೀಗಾಗಿ ನಾನು ಸದಾ ಯೋಗದ ನಶೆಯಲ್ಲಿಯೇ ಇರುತ್ತೇನೆ ಎಂದ ಬಾಬಾ ರಾಮ್‌ದೇವ್, ನಾನು ಯೋಗದ ನಶೆಯಲ್ಲಿರುತ್ತೇನೆ ಎಂದು ಹೇಳಿದಾಕ್ಷಣ ರಾಮ್‌ದೇವ್ ನಶೆಯಲ್ಲಿರುತ್ತಾರೆ ಎನ್ನುವುದನ್ನೇ ಕೆಲವು ವಿಘ್ನಸಂತೋಷಿಗಳು ವೈರಲ್ ಮಾಡುತ್ತಾರೆ. ಇಂತಹವರಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದುರ್ವ್ಯಸನಗಳಿಂದ ನಷ್ಟ ಉಂಟಾಗುತ್ತದೆ. ಇದು ರಾಷ್ಟ್ರಕ್ಕೂ ನಷ್ಟ, ವೈಯಕ್ತಿಕ ವಾಗಿಯೂ ನಷ್ಟ. ಇದನ್ನು ಯೋಗಮಾರ್ಗದಿಂದ ಪರಿವರ್ತಿಸಲು ಸಾಧ್ಯ. ವ್ಯಕ್ತಿಗಳ ಸಾಧನೆಗೆ ಬೇಕಾದ ಶಕ್ತಿ ಉದ್ದೀಪನ ಯೋಗ, ಪ್ರಾಣಾಯಾಮದಿಂದ ಸಾಧ್ಯ. ಇದು ವಾತ, ಪಿತ್ಥ, ಕಫವನ್ನು ಸಮತೋಲನದಲ್ಲಿ ಇರಿಸುತ್ತದೆ. ಕಾಯಿಲೆಗಳು ಬರುವುದೇ ಅಸಂಖ್ಯ ಜೀವಕೋಶಗಳಿಗೆ ಆಮ್ಲಜನಕ ಸರಿಯಾಗಿ ಸಿಗದಿರುವುದರಿಂದ. ಇದನ್ನು ಪೂರೈಸಿದಾಗ ಬ್ಯಾಟರಿ ಚಾರ್ಜ್ ಆದಂತೆ ಆಗುತ್ತದೆ ಎಂದು ರಾಮ್‌ದೇವ್ ನುಡಿದರು.

ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥರು ಉಪಸ್ಥಿತರಿದ್ದರು. ಧರ್ಮ ಫೌಂಡೇಶನ್ ವತಿಯಿಂದ ಔಷಧೀಯ ಸಸ್ಯಗಳನ್ನು ರಾಮ್‌ದೇವ್ ಅವರು ಗಣ್ಯರಿಗೆ ವಿತರಿಸಿದರು. ದೈನಂದಿನ ಚಟುವಟಿಕೆಗಳನ್ನು ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News