ರಂಗಭೂಮಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಗೆ ಚಾಲನೆ

Update: 2019-11-21 15:29 GMT

ಉಡುಪಿ, ನ.21: ಉಡುಪಿ ರಂಗಭೂಮಿ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ದಿ.ಡಾ.ಟಿ. ಎಂ.ಎ. ಪೈ, ದಿ.ಎಸ್.ಎಲ್.ನಾರಾಯಣ ಭಟ್ ಮತ್ತು ದಿ.ಮಲ್ಪೆ ಮಧ್ವರಾಜ್ ಸ್ಮಾರಕ 40ನೆಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಿನೆಮಾ ಮತ್ತು ರಂಗಭೂಮಿಗೆ ಬಹಳಷ್ಟು ವ್ಯತ್ಯಾಸಗಳಿವೆ. ಎರಡು ಬೇರೆ ಬೇರೆ ರೂಪವಾಗಿರುವ ಇವುಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಸಿನೆಮಾಕ್ಕಿಂತ ನಾಟಕವು ಕಲಾವಿದನ ಅಂತರ್ ಪ್ರತಿಭೆಯನ್ನು ಬಯಸುತ್ತದೆ. ನಾಟಕ ಮನರಂಜನೆಗಿಂತ ಮುಖ್ಯವಾಗಿ ಮನಸ್ಸಿನ ಬದಲಾವಣೆಗೆ ಾರಣವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೃಷ್ಣ ಪ್ರಸಾದ್, ಬಿ.ಜಿ.ಮೋಹನ್‌ದಾಸ್, ರಮೇಶ್ ರಾವ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಭಟ್, ಉಪೇಂದ್ರ ಸೋಮಾ ಯಾಜಿ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ರಂಗಭೂಮಿ ಉಪಾಧ್ಯಕ್ಷ ಎಂ.ನಂದಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಳ್ಳಾರಿ ಕಾರಿಗನೂರು ಕೃತಿ ಆಕೃತಿ ಕಲಾ ಟ್ರಸ್ಟ್‌ನಿಂದ ತದ್ರೂಪಿ ನಾಟಕ ಪ್ರದರ್ಶನಗೊಂಡಿತು. ಈ ಸ್ಪರ್ಧೆಯಲ್ಲಿ ಡಿ.2ರವರೆಗೆ ಪ್ರತಿದಿನ ಸಂಜೆ 6:30ಕ್ಕೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News