ಕುಂಜಿಬೆಟ್ಟು ಸರಕಾರಿ ವಸತಿ ನಿಲಯಕ್ಕೆ ಲೋಕಾಯುಕ್ತ ಭೇಟಿ

Update: 2019-11-22 14:10 GMT

ಉಡುಪಿ, ನ.22: ಕುಂಜಿಬೆಟ್ಟುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಇಂದು ಭೇಟಿ ನೀಡಿದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಇಲ್ಲಿನ ಸರಕಾರಿ ಜಾಗಕ್ಕೆ ಸಂಬಂಧಿಸಿದ ಭೂವಿವಾದವನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

1968ರಲ್ಲಿ ಸ್ಥಾಪನೆಗೊಂಡ ಈ ವಸತಿ ನಿಲಯದ ಸುತ್ತ 7.88 ಎಕರೆ ಸರಕಾರಿ ಭೂಮಿ ಇದ್ದು, ಇದರಲ್ಲಿ 70ಸೆಂಟ್ಸ್ ಜಾಗದಲ್ಲಿ ಕಂಪೌಂಡ್ ನಿರ್ಮಿಸಿ ಹಳೆಯ ಕಟ್ಟಡದಲ್ಲಿ ವಸತಿ ನಿಲಯವನ್ನು ನಡೆಸಲಾಗುತ್ತಿದೆ. ಇಲ್ಲಿ ಐದನೆ ತರಗತಿಯಿಂದ 10ನೆ ತರಗತಿಯವರೆಗಿನ ಸುಮಾರು 48 ಮಂದಿ ಮಕ್ಕಳಿದ್ದು, ಸ್ಥಳಾವಕಾಶ ಕೊರತೆ ಅನುಭವಿಸುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಎಸ್.ಎನ್. ಲೋಕಾಯುಕ್ತರಿಗೆ ವಿವರಿಸಿದರು.

ಈ ಜಾಗಕ್ಕೆ ಸಂಬಂಧಿಸಿ ಖಾಸಗಿ ವ್ಯಕ್ತಿಯೊಬ್ಬರು ಭೂ ನ್ಯಾಯಾಧೀಕರಣ ದಲ್ಲಿ ದೂರು ನೀಡಿದ್ದು, ಈ ಸಮಸ್ಯೆ ಇತ್ಯರ್ಥ ಆಗದೆ ವಸತಿ ನಿಲಯಕ್ಕೆ ಹೊಸ ಕಟ್ಟಡ ನಿರ್ಮಿಸಲು ಆಗುತ್ತಿಲ್ಲ ಎಂದು ಅಧಿಕಾರಿ ದೂರಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಲೋಕಾಯುಕ್ತರು, ಸರಕಾರಿ ಜಾಗದಲ್ಲಿ ಯಾರು ಕೂಡ ಒಕ್ಕಲುತನ ವನ್ನು ಕೇಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಅದನ್ನು ಪರಿಶೀಲಿಸಿ ಸುಳ್ಳು ದೂರು ನೀಡಿದ್ದಲ್ಲಿ ದೂರುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಬೇಕು ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಸೂಚನೆ ನೀಡಿದರು.

ವಿವಿಧ ಹಾಸ್ಟೆಲ್‌ಗಳಿಗೆ ಭೇಟಿ: ಲೋಕಾಯುಕ್ತರು ಕುಂಜಿಬೆಟ್ಟು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಬಳಿಕ ಅಲ್ಲೇ ಸಮೀಪದಲ್ಲಿರುವ ನರ್ಸಿಂಗ್ ವಸತಿ ನಿಲಯ ಹಾಗೂ 80 ಬಡಗುಬೆಟ್ಟುವಿನಲ್ಲಿರುವ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿದರು.

ಹಾಸ್ಟೆಲ್‌ಗಳ ಭೂಮಿ, ವಿಶ್ರಾಂತಿ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಲೋಕಾಯುಕ್ತರು, ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಕೊಂಡರು. ಅಲ್ಲದೆ ಅಡುಗೆಕೋಣೆ ಮತ್ತು ಸಾಮಾಗ್ರಿಗಳ ದಾಸ್ತಾನು ಕೋಣೆಗೂ ತೆರಳಿದ ಅವರು, ಶುಚಿತ್ವ ಹಾಗೂ ಊಟದ ಸಾಮಾಗ್ರಿಗಳ ಬಗ್ಗೆ ಪರಿಶೀಲಿಸಿದರು.

ಸಂಬಂಧಪಟ್ಟ ವಾರ್ಡನ್‌ಗಳಿಗೆ ಹಾಸ್ಟೆಲ್‌ಗಳ ಶುಚಿತ್ವಕ್ಕೆ ಪ್ರಮುಖ ಆದ್ಯತೆ ನೀಡುವಂತೆ ಸೂಚನೆ ನೀಡಿದರು. ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಮಕ್ಕಳಿಗೆ ಅಗತ್ಯ ಇರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದ ಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ ಹಾಸ್ಟೆಲ್‌ಗಳ ಕಾರ್ಯವೈಖರಿ ಬಗ್ಗೆ ಅವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೊಹ್ಲೋಟ್, ಉಪಕಾರ್ಯದರ್ಶಿ ಕಿರಣ್ ಮೊಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News